More

    ನಟ ಸುಶಾಂತ್ ಸಾವು, ಸಿಬಿಐ ತನಿಖೆಗೆ ಕೇಂದ್ರ ಸಮ್ಮತಿ

    ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಹಾರ ಸರ್ಕಾರ ಮಾಡಿದ್ದ ಶಿಫಾರಸಿಗೆ ಕೇಂದ್ರ ಸರ್ಕಾರ ಸಮ್ಮತಿಸಿ, ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​ಗೂ ಮಾಹಿತಿ ನೀಡಿದ್ದಾರೆ.

    ಸುಶಾಂತ್ ಸಾವಿನ ಹಿಂದಿನ ಸತ್ಯ ಹೊರಬರಬೇಕು ಎಂದಿರುವ ಸುಪ್ರೀಂಕೋರ್ಟ್, ಪ್ರಕರಣದ ತನಿಖೆಯಲ್ಲಿ ಈವರೆಗಿನ ಪ್ರಗತಿ ಬಗ್ಗೆ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಕೇಂದ್ರ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ. ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ತಮ್ಮ ಮಗನ ಜೀವಕ್ಕೆ ಬೆದರಿಕೆ ಇರುವುದಾಗಿ ಕಳೆದ ಫೆಬ್ರವರಿಯಲ್ಲಿಯೇ ಮಾಹಿತಿ ನೀಡಿದ್ದರೂ ಮುಂಬೈ ಪೊಲೀಸರು ಸ್ಪಂದಿಸಲಿಲ್ಲ ಎಂದು ಸುಶಾಂತ್ ತಂದೆ ಕೆ.ಕೆ. ಸಿಂಗ್ ಆರೋಪಿಸಿದ್ದರು. ಇದರ ಅವರ ಬೆಂಬಲಕ್ಕೆ ನಿಂತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.

    ಸಿಬಿಐಗೆ ವಹಿಸಿದ್ದಕ್ಕೆ ಮಹಾರಾಷ್ಟ್ರ ವಿರೋಧ: ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿರುವ ಕ್ರಮವನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ವಿರೋಧಿಸಿದೆ. ಜತೆಗೆ ಪಟನಾದಲ್ಲಿ ದಾಖಲಾದ ಎಫ್​ಐಆರ್ ರಾಜಕೀಯ ಪ್ರೇರಿತವಾಗಿದೆ ಮತ್ತು ಈ ಪ್ರಕರಣದಲ್ಲಿ ತನಿಖೆ ನಡೆಸಲು ಬಿಹಾರ ಪೊಲೀಸರಿಗೆ ಯಾವುದೇ ನ್ಯಾಯವ್ಯಾಪ್ತಿಯಿಲ್ಲ ಎಂದೂ ಹೇಳಿದೆ. ಈ ಮಧ್ಯೆ, ಪ್ರಕರಣದ ಎಫ್​ಐಆರ್ ಅನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿ ಆರೋಪಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಿಚಾರಣೆ ನಡೆಸಿದ್ದು, ಈ ಕುರಿತು 3 ದಿನಗಳೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಬಿಹಾರ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರ ಮತ್ತು ಸುಶಾಂತ್ ತಂದೆ ಕೆ.ಕೆ. ಸಿಂಗ್​ಗೆ ನೋಟಿಸ್ ನೀಡಿದೆ. ರಿಯಾಗೆ ಭದ್ರತೆ ಒದಗಿಸುವುದಿಲ್ಲ ಎಂದೂ ಹೇಳಲಾಗಿದೆ.

    ಐಪಿಎಸ್ ಅಧಿಕಾರಿ ಕ್ವಾರಂಟೈನ್​ಗೆ ಗರಂ: ಸುಶಾಂತ್ ಪ್ರಕರಣದ ತನಿಖೆಗಾಗಿ ಮುಂಬೈಗೆ ಬಂದಿದ್ದ ಪಟನಾದ ಐಪಿಎಸ್ ಅಧಿಕಾರಿ ವಿನಯ್ ತಿವಾರಿಯವರನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಒತ್ತಾಯಪೂರ್ವಕವಾಗಿ 15ದಿನ ಕ್ವಾರಂಟೈನ್​ಗೆ ಒಳಪಡಿಸಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಂಬೈ ಅಧಿಕಾರಿಗಳ ಕ್ರಮ ಸಮಾಜಕ್ಕೆ ಸರಿಯಾದ ಸಂದೇಶ ನೀಡುವುದಿಲ್ಲ. ವಿನಯ್ ಕರ್ತವ್ಯ ನಿರ್ವಹಿಸಲು ಅಲ್ಲಿಗೆ ಬಂದಿದ್ದರು. ನೀವು ವೃತ್ತಿಪರ ರೀತಿಯಲ್ಲಿ ಕೆಲಸ ಮಾಡಬೇಕು ಮತ್ತು ಎಲ್ಲ ಪುರಾವೆಗಳನ್ನು ರಕ್ಷಿಸಬೇಕು ಎಂದು ಪೀಠ ತರಾಟೆಗೆ ತೆಗೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts