More

    ಕಳಪೆ ಕಾಮಗಾರಿ ಮರೆಮಾಚಲು ಯತ್ನ

    ತರೀಕೆರೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಿರಂತರ ಜ್ಯೋತಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಆದರೆ ಇದನ್ನು ಮರೆಮಾಚುವ ಪ್ರಯತ್ನ ಗುತ್ತಿಗೆದಾರರಿಂದ ನಡೆಯುತ್ತಿದೆ.

    33 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ವಿವಿಧೆಡೆ ಕೈಗೊಂಡಿರುವ ನಿರಂತರ ಜ್ಯೋತಿ ಕಾಮಗಾರಿ ಬಹುತೇಕ ಕಳಪೆಯಾಗಿದೆ. ಬೇಲೇನಹಳ್ಳಿ ತಾಂಡಾ, ಎ.ರಂಗಾಪುರ, ದೋರನಾಳು, ಕಟ್ಟೆಹೊಳೆ ಗ್ರಾಮಗಳಲ್ಲಿ ನೆಟ್ಟಿರುವ ವಿದ್ಯುತ್ ಕಂಬದ ಅಡಿಪಾಯವೇ ಕಳಪೆಯಾಗಿದೆ. ಕಂಬಕ್ಕೆ 3ನೇ ದರ್ಜೆಯ ಏರಿಯಲ್ ಬಂಚ್ ಕೇಬಲ್ ಅಳವಡಿಸಲಾಗಿದೆ.

    ತಾಲೂಕಿನ ಲಕ್ಷ್ಮೀಸಾಗರ, ಬೆಟ್ಟದಹಳ್ಳಿ, ಹುಲಿತಿಮ್ಮಾಪುರ, ಹುಣಸಘಟ್ಟ, ಇಟ್ಟಿಗೆ, ಬೇಲೇನಹಳ್ಳಿ ತಾಂಡಾ ಮತ್ತಿತರ ಕಡೆ ಚರಂಡಿಗಳಲ್ಲಿ ನೆಟ್ಟಿರುವ ವಿದ್ಯುತ್ ಕಂಬಗಳ ಅಡಿಪಾಯಕ್ಕೆ ಜಲ್ಲಿ ಪುಡಿ ಬಳಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಗುತ್ತಿಗೆದಾರ ವಿದ್ಯುತ್ ಕಂಬದ ಅಡಿಪಾಯದ ಮೇಲೆ ಮಣ್ಣು ಸುರಿದು (ಗ್ರಾವೆಲ್ ಮಣ್ಣು) ಕಳಪೆ ಕಾಮಗಾರಿ ಮರೆಮಾಚುವ ತಂತ್ರ ಅನುಸರಿಸಿದ್ದಾರೆ.

    ಮೆಸ್ಕಾಂ ಅಧಿಕಾರಿಗಳು ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಗುತ್ತಿಗೆದಾರರು ಕಳಪೆ ಸಾಮಗ್ರಿ ಬಳಸಿ ಹಣ ದೋಚುವ ಪ್ರಯತ್ನ ನಡೆಸುತ್ತಿದ್ದಾರೆ. ಶಾಶ್ವತವಾಗಿ ಉಳಿಯಬೇಕಾದ ಕಾಮಗಾರಿ ಇನ್ನಾದರೂ ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ನಿರಂತರ ಜ್ಯೋತಿ ಯೋಜನೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಗುಣಮಟ್ಟದ ಸಾಮಗ್ರಿ ಬಳಸಿ ಕೆಲಸ ನಿರ್ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಜಲ್ಲಿ ಪುಡಿ ಬಳಸಿ ನಿರ್ವಿುಸಿರುವ ವಿದ್ಯುತ್ ಕಂಬದ ಅಡಿಪಾಯದ ಮೇಲೆ ಮಣ್ಣು ಸುರಿದಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆದಷ್ಟು ಬೇಗ ಸರಿಪಡಿಸಲು ನಿರ್ದೇಶಿಸಲಾಗಿದೆ ಎಂದು ತರೀಕೆರೆ ಮೆಸ್ಕಾಂ ಉಪ ವಿಭಾಗದ ಪ್ರಭಾರ ಎಇಇ ಜೆ.ಅಜೇಯ್ ವಿಜಯವಾಣಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts