More

    ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ, ಬೇಳೂರು ಗೋಪಾಲಕೃಷ್ಣ ಆರೋಪ

    ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಡಿ (ಜಾರಿ ನಿರ್ದೇಶನಾಲಯ), ಐಟಿ (ಆದಾಯ ತೆರಿಗೆ), ಸಿಬಿಐ (ಕೇಂದ್ರ ತನಿಖಾ ದಳ) ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ದೂರಿದರು.
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ಮಾಡಿರುವುದು ಖಂಡನೀಯ. ಅಮಿತ್ ಷಾ ಅವರು ಸಿನಿಮಾ ನಟರು, ರಾಜಕಾರಣಿಗಳನ್ನು ಟಾರ್ಗೆಟ್ ಮಾಡುತ್ತಿದ್ದು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಬೇರೆ ಯಾರೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿಲ್ಲವೆ ?, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರ ಶಿಕ್ಷಣ ಸಂಸ್ಥೆಗಳಿಲ್ಲವೆ?. ಡಿ.ಕೆ.ಶಿವಕುಮಾರ್ ಈಗಾಗಲೆ ಇಡಿ, ಐಟಿ ತನಿಖೆ ಎದುರಿಸಿದ್ದಾರೆ. ಇದೀಗ ಸಿಬಿಐ ತನಿಖೆ ಎದುರಿಸುವರು. ಇನ್ನೂ ಯಾವುದಾದರೂ ತನಿಖಾ ಸಂಸ್ಥೆಗಳು ಬಾಕಿ ಇವೆಯಾ ಎಂದು ಪ್ರಶ್ನಿಸಿದರು.
    ನಿದ್ರೆಗೆ ಜಾರಿದ ರಾಜ್ಯ ಸರ್ಕಾರ:
    ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಿದ್ರೆಗೆ ಜಾರಿದೆ. ಯಾವುದೆ ಕೆಲಸಗಳು ಆಗುತ್ತಿಲ್ಲ. ಜನರ ಬಗ್ಗೆ ಕಾಳಜಿ ಇಲ್ಲ. ಅಡಕೆ ದರ ಇಳಿಕೆ, ಎಲೆಚುಕ್ಕೆ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿಯಿಂದ ನೆಲೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಪರಿಹಾರ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳ್ಳುತ್ತಿದ್ದಾರೆ. ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರವಿದೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದು ಸಮಾವೇಶಗಳ ಮೂಲಕ ಜನರ ದಿಕ್ಕುತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
    ಶಾಸಕ ಹರತಾಳು ಹಾಲಪ್ಪ ಅವರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಸರ್ಕಾರದಿಂದ ಆಗಿಲ್ಲವೆಂದು ಇದೀಗ ಧರ್ಮಸ್ಥಳದ ಮಂಜುನಾಥೇಶ್ವರ ಸ್ವಾಮಿ ಮೊರೆ ಹೋಗಿದ್ದಾರೆ. ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗೆಡೆ ಅವರನ್ನು ಭೇಟಿ ಮಾಡಿದ್ದು ಸರ್ಕಾರ ಮತ್ತು ಸ್ಥಳೀಯ ನಾಯಕರ ಮೇಲೆ ನಂಬಿಕೆ ಇಲ್ಲದೆ ದೇವರ ಮೊರೆ ಹೋಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts