More

    ಕೇಂದ್ರ ಸರ್ಕಾರದ ಧೋರಣೆಗೆ ಖಂಡನೆ

    ವಿಜಯಪುರ: ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.
    ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗ, ಕೈಗಾರಿಕೆಗಳ ಮುಚ್ಚುವಿಕೆ, ಕಾಯಂ ಹುದ್ದೆಗಳ ಗುತ್ತಿಗೀಕರಣ, ಪುಡಿಗಾಸಿನ ವೇತನದಿಂದ ಕುಸಿಯುತ್ತಿರುವ ಆದಾಯ, ಕೈಗೆಟುಕದಿರುವ ದುಬಾರಿ ಶಿಕ್ಷಣ-ಆರೋಗ್ಯ ಸೇವೆಗಳು, ರೈತರ ಕೃಷಿಉತ್ಪನ್ನಗಳ ಬೆಂಬಲ ಬೆಲೆ ಕುಸಿತ, ಸಬ್ಸಿಡಿಗಳ ಕಡಿತ ಇತ್ಯಾದಿ ಸಮಸ್ಯೆಗಳಿಗೆ ಕೇಂದ್ರದ ಬಜೆಟ್ ಪರಿಹಾರವನ್ನೇನೂ ಕೊಡುತ್ತಿಲ್ಲ. ಬದಲಿಗೆ ಈ ಎಲ್ಲ ಜ್ವಲಂತ ಸಮಸ್ಯೆಗಳಿಂದ ತತ್ತರಿಸುತ್ತಿರುವ ಜನರ ಸಂಕಟವನ್ನು ಇನ್ನಷ್ಟು ಹೆಚ್ಚಿಸುವಂತಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು, ಆಶಾ-ಅಂಗನವಾಡಿ -ಬಿಸಿಯೂಟದ ಕಾರ್ಯಕರ್ತೆಯರಿಗೆ ಹತ್ತಾರು ವರ್ಷಗಳಿಂದ ಕೇಳುತ್ತ ಬಂದಿರುವ ಕಾರ್ಮಿಕರ ಸ್ಥಾನಮಾನದೊಂದಿಗೆ ಕನಿಷ್ಠ 21 ಸಾವಿರ ರೂ. ವೇತನ ಕೊಡುವುದಿರಲಿ, ಇರುವ ಗೌರವಧನವನ್ನೂ ಹೆಚ್ಚಿಸುತ್ತಿಲ್ಲ. ಸರ್ಕಾರ ಇದೀಗ ಬಜೆಟ್‌ನಲ್ಲಿ ಜೀವ ವಿಮೆಯನ್ನು, ರೈಲ್ವೆ ಉದ್ದಿಮೆಯನ್ನು ಖಾಸಗಿಯವರಿಗೆ ಮಾರಲು ಮುಂದಾಗಿದೆ. ಅನೇಕ ರೈಲು ಮಾರ್ಗಗಳನ್ನು, ಕೋಚ್ ನಿರ್ಮಾಣ ್ಯಾಕ್ಟರಿಗಳನ್ನು ಖಾಸಗಿಯವರಿಗೆ ವಹಿಸಿದೆ. ದಿವಾಳಿಯಾಗುತ್ತಿರುವ ಸಾರ್ವಜನಿಕ ಬ್ಯಾಂಕುಗಳ ವಿಲಿನೀಕರಣ ಮೂಲಕ ಕಾರ್ಪೋರೇಟ್ ಮಾಲೀಕರಿಗೆ ಇನ್ನಷ್ಟು ಮಣೆ ಹಾಕಲು ಮುಂದಾಗಿದೆ. ದೇಶದ ಶೇ.73 ರಷ್ಟು ಸಂಪತ್ತಿನ ಒಡೆಯರಾದ ಕೆಲವೇ ಶ್ರೀಮಂತ ಉದ್ಯಮಿಗಳಿಗೆ ಇನ್ನಷ್ಟು ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಬಜೆಟ್ ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲು ಮಾಲೀಕರಿಗೆ ಮಾತ್ರ ಒಳಿತನ್ನು ಮಾಡಲು ಹೊರಟಿದೆ. ಇಂಥ ಜನವಿರೋಧಿ-ಕಾರ್ಮಿಕ ವಿರೋಧಿ ಕೇಂದ್ರದ ಬಜೆಟ್‌ನ್ನು ದುಡಿಯುವ ಜನರು ಒಕ್ಕೊರಲಿನಿಂದ ತಿರಸ್ಕರಿಸಬೇಕಿದೆ ಎಂದರು.
    ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೇಟ್ಟಿ ಮಾತನಾಡಿ, ಕಾರ್ಮಿಕ ಕಾನೂನುಗಳು ಅನೇಕ ಕಾರ್ಮಿಕರ ತ್ಯಾಗಬಲಿದಾನಗಳ ಹೋರಾಟಗಳ ಮೂಲಕ ಲಭಿಸಿರುವ ಕಾರ್ಮಿಕರ ಹಕ್ಕುಗಳನ್ನು ಒಂದೋಂದಾಗಿ ಸರ್ಕಾರವು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
    ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿ ಲಕ್ಷೆಟ್ಟಿ, ಶಶಿಕಲಾ ಮ್ಯಾಗೇರಿ ಮತ್ತಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಅಶಾ, ಅಂಗನವಾಡಿ, ಬಿಸಿಯೂಟ, ಹಾಸ್ಟೆಲ್, ಬಹುಹಳ್ಳಿ, ಗಾರ್ಡನ್ ನೌಕರರು, ಚಾಂದ್ ಮಮದಾಪುರ, ಕಾಶಿಬಾಯಿ ಜನಗೊಂಡ, ಅಂಬಿಕಾ ವಳಸಂಗ, ಭಾರತಿ ಗೂಗವಾಡ, ಬೇಬಿಬಾಯಿ ಲಮಾಣಿ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

    ಕೇಂದ್ರ ಸರ್ಕಾರದ ಧೋರಣೆಗೆ ಖಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts