More

    ಬಜೆಟ್ ಅಧಿವೇಶನ ಶುರು: ಜಂಟಿ ಸದನದಲ್ಲಿ ರಾಷ್ಟ್ರಪತಿ ಭಾಷಣ; ದೇಶದ ಸಾಧನೆಯ ವಿವರ

    ನವದೆಹಲಿ: ಸಂಸತ್​ನ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಿದ್ದು, ವಾಡಿಕೆಯಂತೆ ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಮಾಡಿ ದರು. ಕರೊನಾ ಕಾಲದಲ್ಲೂ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿಯನ್ನು ಅವರು ಮುಂದಿಟ್ಟರು. ಕೋವಿಡ್ ಸಾಂಕ್ರಾಮಿಕ 3ನೇ ವರ್ಷಕ್ಕೆ ಕಾಲಿಟ್ಟಿದ್ದರೂ ದೇಶದ ಜನತೆ ಅದರ ವಿರುದ್ಧ ಸಂಘಟಿತ ಹೋರಾಟ ಮಾಡುತ್ತಿದೆ. ಲಸಿಕೆ ಅಭಿಯಾನ ಶುರುವಾದ ಒಂದು ವರ್ಷದೊಳಗೆ 150 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದ್ದು, ವಿಶ್ವ ದಲ್ಲಿ ಅತ್ಯಧಿಕ ಚುಚ್ಚುಮದ್ದು ನೀಡಿದ ದೇಶ ಭಾರತವಾಗಿದೆ ಎಂದರು.

    ಸದ್ಯ ಆರೋಗ್ಯ ಮೂಲಸೌಕರ್ಯದ ಅಗತ್ಯವನ್ನು ಪೂರೈಸಲು ಸರ್ಕಾರ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ 64 ಸಾವಿರ ಕೋಟಿ ರೂ. ಹಣವನ್ನು ತೆಗೆದಿರಿಸಿದೆ. ಇದು ಪ್ರಸಕ್ತ ಅಗತ್ಯವನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ರೂಪಿಸಿದ ಯೋಜನೆಯಲ್ಲ. ಭವಿಷ್ಯದ ಬಿಕ್ಕಟ್ಟುಗಳನ್ನು ಹೋಗಲಾಡಿಸುವಂತಹ ಉದ್ದೇಶ ಹೊಂದಿದೆ ಎಂದರು. ಸರ್ಕಾರದ ನೀತಿಯ ಫಲವಾಗಿ ಆರೋಗ್ಯ ಸೇವೆ, ಸೌಕರ್ಯಗಳು ಶ್ರೀಸಾಮಾನ್ಯನಿಗೆ ಸುಲಭವಾಗಿ ದೊರಕುವಂತಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 80 ಸಾವಿರಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ನಿರ್ಮಾಣ ಆಗಿದೆ. ಕೈಗೆಟಕುವ ದರದಲ್ಲಿ ಔಷಧ ದೊರೆಯಬೇಕೆಂಬ ಉದ್ದೇಶದಿಂದ ದೇಶಾದ್ಯಂತ 8 ಸಾವಿರ ಜನ ಔಷಧ ಮಳಿಗೆಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

    ಚುನಾವಣೆಗಳು ನಡೆಯುತ್ತಿರುತ್ತವೆ. ಆದರೆ, ಬಜೆಟ್ ಅಧಿವೇಶನ ಮಹತ್ವದ್ದು, ದೇಶದ ಇಡೀ ವರ್ಷದ ಆರ್ಥಿಕ ನೀಲಿನಕ್ಷೆ ಇದಾಗಿದೆ. ಹೀಗಾಗಿ ಸಂಸದರು ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಂಡು ಅಧಿವೇಶನವನ್ನು ಫಲಪ್ರದ ಮಾಡಬೇಕು.

    | ನರೇಂದ್ರ ಮೋದಿ ಪ್ರಧಾನಿ

    ಈಶಾನ್ಯ ರಾಜ್ಯಗಳಲ್ಲಿ ಸ್ವರ್ಗ ಧರೆಗೆ ಇಳಿದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದ ರಾಷ್ಟ್ರಪತಿಯವರು ನಾಗಾಲ್ಯಾಂಡ್​ನಲ್ಲಿ ಗಣಿ ಕಾರ್ವಿುಕರ ನರಮೇಧವನ್ನು ಬಿಟ್ಟಿದ್ದೇಕೆ? ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕುರಿತು ಅವರದ್ದು ದಿವ್ಯ ಮೌನ.

    | ಮನೀಷ್ ತಿವಾರಿ ಕಾಂಗ್ರೆಸ್ ಸಂಸದ

    ಕೋವಿಡ್ ನಿಯಮ ಉಲ್ಲಂಘನೆ: ಜಂಟಿ ಅದಿವೇಶನದಲ್ಲಿ ರಾಷ್ಟ್ರಪತಿ ಭಾಷಣ ಮಾಡುತ್ತಿದ್ದರೆ, ಹಲವು ಸಂಸದರು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಮೊದಲ ಎರಡು ಸಾಲಿನಲ್ಲಿ ಕುಳಿತದ್ದವರು ದೈಹಿಕ ಅಂತರ ಕಾಪಾಡಿಕೊಂಡಿದ್ದರೆ, ನಂತರ ಸಾಲುಗಳಲ್ಲಿ ಈ ಶಿಸ್ತು ಕಂಡುಬರಲಿಲ್ಲ. ಅನೇಕರು ಮಾಸ್ಕ್ ಧರಿಸಿರಲಿಲ್ಲ.

    ಬಜೆಟ್ ವಿಶೇಷಗಳು

    • ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪ ಫೆ.11ರ ತನಕ. ಮೊದಲ ಹಂತದಲ್ಲಿ ಬಜೆಟ್ ಮಂಡನೆ ಮತ್ತು ಪೂರಕ ವಿಚಾರಗಳು ಕಲಾಪದಲ್ಲಿ ಇರಲಿವೆ. ಫೆ.2,3,4 ಮತ್ತು 7ರಂದು ರಾಷ್ಟ್ರಪತಿಯವರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸಲಾಗುತ್ತದೆ.
    • ಫೆ.12-ಮಾರ್ಚ್ 13ರ ತನಕ ವಿರಾಮ. ಈ ಅವಧಿಯಲ್ಲಿ ಸ್ಥಾಯಿ ಸಮಿತಿಗಳು ಸಚಿವಾಲಯಗಳು, ಇಲಾಖೆಗಳ ಅನುದಾನ ಬೇಡಿಕೆ ಪ್ರಸ್ತಾವನೆಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸುವುದನ್ನು ಆರಂಭಿಸುತ್ತವೆ.
    • ಮಾ.14ರಿಂದ ಏ.8ರ ತನಕ ಎರಡನೆ ಹಂತದ ಕಲಾಪ
    • 2ನೇ ಹಂತದಲ್ಲಿ ಬಜೆಟ್ ಸಂಬಂಧಿತ ವಿಚಾರಗಳ ಚರ್ಚೆ
    • ಒಟ್ಟು 29 ಕಲಾಪ ನಡೆಯಲಿದ್ದು, ಮೊದಲ ಹಂತದಲ್ಲಿ 10, ಎರಡನೆ ಹಂತದಲ್ಲಿ 19 ಇರಲಿದೆ.
    • ಫೆ.2ರಿಂದ 11ರ ತನಕ ಲೋಕಸಭೆ ಸಂಜೆ 4ರಿಂದ ರಾತ್ರಿ 9ರ ತನಕ ಕಲಾಪ ನಡೆಸಲಿದೆ. ಬೆಳಗ್ಗೆ ರಾಜ್ಯಸಭೆಯ ಕಲಾಪ ನಡೆಯಲಿದೆ. 40 ಗಂಟೆ ಕಲಾಪದ ಅವಧಿಯಲ್ಲಿ ಪ್ರಶ್ನೋತ್ತರ, ಖಾಸಗಿ ಮಸೂದೆ ಮಂಡನೆ ಸೇರಿ ವಿವಿಧ ವಿಚಾರಗಳಿಗೆ ಅವಕಾಶವಿದೆ.

    ಭಾಷಣದ ಪ್ರಮುಖಾಂಶಗಳು

    1. 75ನೇ ಸ್ವಾತಂತ್ರ್ಯೋತ್ಸವ ವರ್ಷದಲ್ಲಿ ದೇಶದ ಮುಂದಿನ 25 ವರ್ಷಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ.
    2. ಯೋಗ, ಆಯುರ್ವೆದ, ನಾಟಿ ವೈದ್ಯ ಪದ್ಧತಿಗಳ ಬೆಳವಣಿಗೆಗೂ ಸರ್ಕಾರ ಉತ್ತೇಜನ ನೀಡಿದೆ. ಈ ವರ್ಷ 11 ಸಾವಿರ ಕೋಟಿ ರೂ. ಮೌಲ್ಯದ ಆಯುಷ್ ಉತ್ಪನ್ನಗಳು ರಫ್ತಾಗಿವೆ. ಪಿಎಲ್​ಐ ಯೋಜನೆಯಿಂದ ಔಷಧ ತಯಾರಿಕಾ ಕಂಪನಿಗಳಿಗೂ ಪ್ರೋತ್ಸಾಹ ಸಿಗುತ್ತಿದೆ.
    3. ಕೋವಿಡ್ ಕಾಲಘಟ್ಟದಲ್ಲಿ ಅನೇಕ ದೇಶಗಳಲ್ಲಿ ಆಹಾರ ಕೊರತೆಯಿಂದಾಗಿ ಜನರು ಹಸಿವಿನಿಂದ ಬಳಲುವಂತಾಯಿತು. ಆದರೆ, ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮೂಲಕ 80 ಕೋಟಿ ಕುಟುಂಬಗಳಿಗೆ 19 ತಿಂಗಳು ಉಚಿತವಾಗಿ ಪಡಿತರ ವಿತರಿಸಿತು.
    4. ಜನಧನದ ಮೂಲಕ 44 ಕೋಟಿ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟರು.
    5. ಪ್ರಧಾನಮಂತ್ರಿ ಆವಾಸ್ ಯೋಜನೆ, ಮೂಲಕ ಕಡಿಮೆ ಬಜೆಟ್​ನ 1.70 ಲಕ್ಷ ಮನೆಗಳ ನಿರ್ಮಣಕ್ಕೆ ಒಪ್ಪಿಗೆ.
    6. ಸ್ವಾಮಿತ್ವ ಯೋಜನೆಯಡಿಯಲ್ಲಿ 27 ಸಾವಿರ ಹಳ್ಳಿಗಳ 40 ಲಕ್ಷ ಜನರಿಗೆ ಆಸ್ತಿ ಕಾರ್ಡ್ ವಿತರಣೆ.
    7. 2020-21ರ ಹಿಂಗಾರು ಹಂಗಾಮಿನಲ್ಲಿ 433 ಲಕ್ಷ ಮೆಟ್ರಿಕ್ ಟನ್ ಗೋಧಿ, 900 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿದೆ. ಕೃಷಿ ರಫ್ತು 3 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ 11 ಕೋಟಿ ರೈತ ಕುಟುಂಬಗಳಿಗೆ 1.80 ಲಕ್ಷ ಕೋಟಿ ರೂಪಾಯಿ ನೆರವು ದೊರಕಿದೆ.
    8. ಮಹಿಳೆಯರ ಸಬಲೀಕರಣಕ್ಕಾಗಿ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ತಿದ್ದುಪಡಿ ಮಸೂದೆ ಮಂಡನೆ.
    9. ಸ್ಥಳೀಯ ಭಾಷೆಗೆ ಒತ್ತು ನೀಡುವಂತಹ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇದು ಶಿಕ್ಷಣ ಆಮೂಲಾಗ್ರ ಬದಲಾವಣೆಯನ್ನು ಒಳಗೊಂಡಿದೆ.
    10. ಭಾರತಮಾಲಾ ಯೋಜನೆಯಡಿ 20 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ವಣ. 23 ಗ್ರೀನ್ ಫೀಲ್ಡ್ ಕಾರಿಡಾರ್​ಗಳನ್ನು ನಿರ್ವಿುಸಲಾಗಿದೆ.

    ‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: ‘ಅದೂ ಅಲ್ಲ, ಇದೂ ಅಲ್ಲ’ ಎಂದು ‘ಆರ್​ಆರ್​ಆರ್’​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

    ಉಡುಪಿಯಲ್ಲಿ ಸದ್ದಡಗಿಸಿದ ಪೊಲೀಸರು: ಸಾಲಾಗಿಟ್ಟ ಸೈಲೆನ್ಸರ್​ಗಳು ರಸ್ತೆಯಲ್ಲೇ ಧ್ವಂಸ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts