More

    ಕಾಗೋಡಿನಲ್ಲಿ ವಿಧಾನಸೌಧ ಚಲೋಗೆ ಚಾಲನೆ

    ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ರೈತ, ದಲಿತ, ಕಾರ್ವಿುಕ ಹಾಗೂ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು ಭೂಮಿ ಬದುಕಿನ ಹೋರಾಟ ನಡೆಸಿದ ಕಾಗೋಡಿನ ಪವಿತ್ರ ನೆಲದಿಂದ ವಿಧಾನಸೌಧ ಚಲೋ ನಡೆಸುತ್ತಿದ್ದೇವೆ ಎಂದು ರೈತ, ದಲಿತ, ಕಾರ್ವಿುಕರ ಐಕ್ಯ ಹೋರಾಟ ಸಂಚಾಲನಾ ಸಮಿತಿ ಸದಸ್ಯ ಬಿ.ಆರ್.ಜಯಂತ್ ಹೇಳಿದರು.

    ಸಮೀಪದ ಕಾಗೋಡಿನ ಡಾ. ರಾಮಮನೋಹರ್ ಲೋಹಿಯಾ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಚಲೋದಲ್ಲಿ ಮಾತನಾಡಿ, ಕಾಗೋಡು ರೈತ ಚಳವಳಿ ಇಡೀ ದೇಶದ ರೈತರ ಬದುಕಿಗೆ ಬುನಾದಿ ಹಾಕಿಕೊಡುವ ಚಳವಳಿಯಾಗಿ ಹೊರಹೊಮ್ಮಿತ್ತು. ಈ ನೆಲದಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಟ ಆರಂಭಿಸಿದ್ದೇವೆ ಎಂದರು.

    1974ರಲ್ಲಿ ದೇವರಾಜು ಅರಸು ಸಿಎಂ ಆಗಿದ್ದಾಗ ಸಮಾಜವಾದಿ ಹೋರಾಟಗಾರರ ಚಿಂತನೆ ಮತ್ತು ಸಿದ್ಧಾಂತ ಗೌರವಿಸಿ ಉಳುವವನೇ ಒಡೆಯ ಎಂಬ ಭೂ ಸುಧಾರಣೆ ಕಾನೂನು ಜಾರಿಗೊಳಿಸಿದರು. ಪ್ರಸ್ತುತ ರಾಜ್ಯ ಸರ್ಕಾರ ಇಂತಹ ಐತಿಹಾಸಿಕ ಕಾನೂನಿಗೆ ತಿದ್ದುಪಡಿ ತಂದು ರೈತರ ಬದುಕನ್ನೇ ಮಣ್ಣು ಪಾಲು ಹೊರಟಿದೆ ಎಂದು ದೂರಿದರು.

    ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು. ಕಾಗೋಡಿನಿಂದ ಹೊರಟ ಜಾಥಾ ಡಿ.7ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶಗೊಳ್ಳಲಿದೆ. ವಿವಿಧ ಜಿಲ್ಲೆಯ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

    ಕಾಗೋಡು ಚಳವಳಿ ಹೋರಾಟಗಾರ ಕಾಗೋಡಿನ ದೊಡ್ಮನೆ ಬೀರಪ್ಪ ಚಾಲನೆ ನೀಡಿದರು. ಜಿಪಂ ಸದಸ್ಯೆ ಅನಿತಾ ಕುಮಾರಿ, ರೈತ ಸಂಘದ ಎನ್.ಡಿ.ವಸಂತ್​ಕುಮಾರ್, ಸೇನಾಪತಿ ಗೌಡ, ನಗರಸಭಾ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಲಲಿತಮ್ಮ, ಮುಖಂಡರಾದ ಕೆ.ಹೊಳಿಯಪ್ಪ, ಉಮೇಶ್ ಕಾಗೋಡು, ತುಕರಾಮ್ ಶಿರವಾಳ, ಪರಮೇಶ್ವರ ದೂಗೂರು, ಎಚ್.ಬಿ.ರಾಘವೇಂದ್ರ, ವೈ.ಎನ್.ಹುಬ್ಳಿ, ವಸಂತ ಕುಗ್ವೆ, ರವಿಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts