More

    ಸೆಲ್‌ಫೋನ್‌ ಸೇಲ್ ಫುಲ್ ಡೌನ್

    ಬೆಳಗಾವಿ: ಜಗತ್ತಿನಾದ್ಯಂತ ಕರಿನೆರಳು ಬೀರಿ ಜನಜೀವನವನ್ನೇ ಮಖಾಡೆ ಮಲಗಿಸಿದ ಕೋವಿಡ್-19 ಭಾರತದಲ್ಲಿ ಸ್ಮಾರ್ಟ್ ಫೋನ್‌ಗಳ ತಯಾರಿಕೆಗೂ ಬಲವಾದ ಹೊಡೆತ ನೀಡಿದೆ.

    ಮೂರು ವಾರಗಳ ಲಾಕ್‌ಡೌನ್‌ನಿಂದ ಸ್ಮಾರ್ಟ್ ಫೋನ್ ಕಂಪನಿಗಳು ಅಂದಾಜು 15 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದೆ. ದೇಶದ ಪ್ರಮುಖ ಕಂಪನಿಗಳಾದ ಫಾಕ್ಸೃ್ಕಾನ್, ಫ್ಲೆಕ್ಸೃ್ ಮತ್ತು ವಿಸ್ಟ್ರಾನ್ ಸೇರಿ ಇನ್ನಿತರ ಕಂಪನಿಗಳು ಉತ್ಪಾದನಾ ಘಟಕಗಳನ್ನು ಸಂಪೂರ್ಣ ಮುಚ್ಚಿವೆ.

    ಸಾಮಾನ್ಯವಾಗಿ ಪ್ರತಿದಿನ 500 ರಿಂದ 700 ಕೋಟಿ ರೂ. ವಹಿವಾಟು ನಡೆಸುತ್ತಿದ್ದ ಈ ಪ್ರಮುಖ ಕಂಪನಿಗಳು, ಲಾಕ್‌ಡೌನ್‌ನ 21 ದಿನಗಳಲ್ಲಿ ಯಾವುದೇ ವಹಿವಾಟು ನಡೆಸುತ್ತಿಲ್ಲ. ಇದರಿಂದ ಅಂದಾಜಿ 15,000 ಕೋಟಿಯಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಇಂಡಿಯನ್ ಸೆಲ್ಯುಲರ್ ಆ್ಯಂಡ್ ಇಲೆಕ್ಟ್ರಾನಿಕ್ ಅಸೋಸಿಯೇಷನ್ ಅಧ್ಯಕ್ಷ ಪಂಕಜ ಮೋಹಿಂದ್ರೋ ಆತಂಕ ವ್ಯಕ್ತಪಡಿಸಿದ್ದಾರೆ.

    ನಿದ್ದೆಗೆಡಿಸಿದ ದಿನಗಳು: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಮಾರ್ಚ್ ತಿಂಗಳಲ್ಲಿ ಮೊಬೈಲ್ ಮಾರಾಟ ಶೇ. 27ರಷ್ಟು ಕಡಿಮೆಯಾಗಿದೆ. ಏಪ್ರಿಲ್ 14ರ ವರೆಗೆ ಶೇ. 60ರಷ್ಟು ಮಾರಾಟದಲ್ಲಿ ನಷ್ಟವಾಗುವ ಸಾಧ್ಯತೆಯಿದೆ. ದೇಶದಲ್ಲಿ ಲಾಕ್‌ಡೌನ್ ಮುಂದುವರಿದರೆ ಈ ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗಲಿದ್ದು, ಈ ಆತಂಕವೀಗ ಸ್ಮಾರ್ಟ್ ೆನ್ ತಯಾರಿಸುವ ಕಂಪನಿಗಳ ನಿದ್ದೆಗೆಡಿಸಿದೆ.

    ಜೂನ್ ತಿಂಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಾಗಿ ಸ್ಮಾರ್ಟ್ ಫೋನ್‌ಗಳನ್ನು ಖರೀದಿಸುತ್ತಿದ್ದರು. ಇದರಿಂದ ವಹಿವಾಟು ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಹೆಚ್ಚಿನ ವಹಿವಾಟು ನಿರೀಕ್ಷಿಸುವಂತಿಲ್ಲ ಎನ್ನುವುದು ಸೆಲ್‌ಫೋನ್ ತಯಾರಿಕಾ ಕಂಪನಿಗಳ ಅಳಲಾಗಿದೆ.
    ‘ಕೋವಿಡ್ ಅಟ್ಟಹಾಸಕ್ಕೆ ಕೊನೆ ಯಾವಾಗ?’ ಎಂಬ ಪ್ರಶ್ನೆಗೆ ಸ್ಮಾರ್ಟ್‌ಫೋನ್ ಕಂಪನಿಗಳೂ ಹೊರತಾಗಿಲ್ಲ.

    ರಿಚಾರ್ಜ್‌ಗೂ ಆವರಿಸಿದ ಕಂಟಕ

    ಮನೆಯಿಂದ ಹೊರಬೀಳದ ಜನರಲ್ಲಿ ಅನೇಕರು ತಮ್ಮ ಮೊಬೈಲ್ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಲೂ ಆಸಕ್ತಿ ತೋರುತ್ತಿಲ್ಲ. ಪಟ್ಟಣಗಳಲ್ಲಿರುವವರು, ಸ್ಮಾರ್ಟ್‌ಫೋನ್ ಹೊಂದಿದವರು ಆನ್‌ಲೈನ್ ಮೂಲಕವಾದರೂ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಭಾರತದಲ್ಲಿ ಶೇ. 40ಕ್ಕೂ ಹೆಚ್ಚು ಜನ ಕೀಪ್ಯಾಡ್ ಮೊಬೈಲ್‌ಗಳನ್ನೇ ಬಳಸುತ್ತಿದ್ದು, ಸದ್ಯ ಅವರಿಗೆಲ್ಲ ಮನೆಯಿಂದ ಹೊರಗೆ ಹೋಗಿ ರಿಚಾರ್ಜ್ ಮಾಡಿಸಿಕೊಳ್ಳಲು ಆಗದ ಸ್ಥಿತಿಯಿದೆ. ಇದರಿಂದಲೂ ರಿಚಾರ್ಜ್ ಕಂಪನಿಗಳು ಮೂರು ವಾರಗಳಲ್ಲಿ ಅಂದಾಜು 15 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿವೆ ಎನ್ನಲಾಗಿದೆ.

    ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಮೊಬೈಲ್ ಅಂಗಡಿಗಳು ನನ್ನ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಪ್ರತಿದಿನ 15 ರಿಂದ 20 ಲಕ್ಷ ರೂಪಾಯಿ ವರೆಗೆ ಮೊಬೈಲ್ ಪೋನ್‌ಗಳು ಮಾರಾಟವಾಗುತ್ತಿದ್ದವು. ಆದರೆ, ಲಾಕ್‌ಡೌನ್‌ನಿಂದಾಗಿ ಮೊಬೈಲ್ ಮಾರಾಟ ಸಂಪೂರ್ಣ ಬಂದ್ ಆಗಿದೆ.
    | ಪ್ರಕಾಶ ಅಂಬಿಗೇರ ಏರಿಯಾ ಸೇಲ್ಸ್ ಮೆನೇಜರ್, ಸಂಗೀತಾ ಮೊಬೈಲ್ಸ್, ಉತ್ತರ ಕರ್ನಾಟಕ

    | ಧರ್ಮರಾಜ ಪಾಟೀಲ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts