More

    ಪರಿಸರ ಸ್ನೇಹಿ ದೀಪಾವಳಿ ಆಚರಿಸಿ

    ಬಳ್ಳಾರಿ : ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರು ನಿಷೇಧಿತ ಪಟಾಕಿ, ಸಿಡಿಮದ್ದುಗಳನ್ನು ಬಿಟ್ಟು ಹಸಿರು ಪಟಾಕಿಯನ್ನು ಬಳಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರು ಮನವಿ ಮಾಡಿದ್ದಾರೆ.

    ಈ ಕುರಿತು ಗುರುವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳ ಅನಧಿಕೃತ ತಯಾರಿ ಹಾಗೂ ಮಾರಾಟ ಮಾಡುವ ವ್ಯಕ್ತಿ ಅಥವಾ ಅಂಗಡಿಗಳನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ದೀಪಾವಳಿ ಹಬ್ಬದ ದಿನಗಳಂದು ಪಟಾಕಿಗಳಿಂದಾಗುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹಸಿರು ಪಟಾಕಿಯಲ್ಲದ, ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಅಂತಹವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಕಾನೂನು ರೀತಿ ಸೂಕ್ತ ಕ್ರಮ ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು, ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸಾರ್ವಜನಿಕರು ಬಳಸುವಂತೆ ಜಾಗೃತಿ ಮೂಡಿಸಬೇಕು. ಪ್ರಮುಖವಾಗಿ ಹಸಿರು ಪಟಾಕಿ ತಯಾರಿಸುವವರು ಹಾಗೂ ಮಾರಾಟ ಮಾಡುವವರು ಮತ್ತು ನಿಗದಿತ ಏಜೆಂಟ್‌ಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ತಿಳಿಸಿದ್ದಾರೆ.

    ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಕುರಿತಂತೆ ಸಾರ್ವಜನಿಕರಿಗೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುವುದು. ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ನಾವುದೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸ್ಫೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ, ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಕಡ್ಡಾಯವಾಗಿ ಪಾಲಿಸಬೇಕೆಂದು ನಿರ್ದೇಶಿಸಿದ್ದಾರೆ.

    ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಕುರಿತು ಸಾರ್ವಜನಿಕ ಸ್ಥಳಗಳಾದ ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣ, ಮಾಲ್ಗಳಲ್ಲಿ ಕರಪತ್ರ, ಭಿತ್ತಿ ಪತ್ರಗಳನ್ನು ಹಂಚುವ ಮೂಲಕ, ವಿಡಿಯೋ ಮತ್ತು ಆಡಿಯೋ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದ್ದಾರೆ.

    ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳನ್ನು ಸಾಗಾಟ ಮಾಡುತ್ತಿದ್ದಲ್ಲಿ ಕೂಡಲೇ ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ರಾಜ್ಯದ ಗಡಿಗಳಲ್ಲಿರುವ ತಮ್ಮ ತಮ್ಮ ತನಿಖಾ ಠಾಣೆಗಳ ಮುಖಾಂತರ ನಿಷೇಧಿತ ಪಟಾಕಿಗಳು ಹಾಗೂ ಸಂಬಂಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾಗಾಟ ಮಾಡುವ ವಾಹನವನ್ನು ಸಾರಿಗೆ ಇಲಾಖೆಯಿಂದ ವಶಕ್ಕೆ ಪಡೆಯಬೇಕು. ಈ ಕಾರ್ಯಕ್ಕೆ ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಹಕಾರ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts