More

    ಜಪ್ಪಿನಮೊಗರು ಸೇತುವೆ ತಡೆ ಬೇಲಿ ಸಿಸಿ ಕ್ಯಾಮರಾ ಉದ್ಘಾಟನೆ

    ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ನಡೆಯುತ್ತಿರುವ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ತಡೆಬೇಲಿ ಮತ್ತು 5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ಮತ್ತು ಶಾಸಕ ಡಿ.ವೇದವ್ಯಾಸ ಕಾಮತ್ ಬುಧವಾರ ಉದ್ಘಾಟಿಸಿದರು.

    ಈ ಸಂದರ್ಭ ಮಾತನಾಡಿದ ರವಿಶಂಕರ ಮಿಜಾರ್ ಅವರು, ಎರಡು ವರ್ಷಗಳಿಂದ ಈ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿದವರ ಸಂಖ್ಯೆ 20ಕ್ಕಿಂತಲೂ ಹೆಚ್ಚಾದ ಕಾರಣ ಆತ್ಮಹತ್ಯೆಯ ತಾಣ ಎಂದು ಹೆಸರು ಪಡೆದಿತ್ತು. ಶಾಸಕ ವೇದವ್ಯಾಸ ಕಾಮತ್ ಆಸಕ್ತಿ ವಹಿಸಿ ಸೇತುವೆಗೆ ತಡೆಬೇಲಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡು ಇದೀಗ ಪೂರ್ಣಗೊಂಡಿದೆ. ಸೇತುವೆಯ ಎರಡೂ ಬದಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಈ ಕಾಮಗಾರಿ ಸಾರ್ವಜನಿಕವಾಗಿ ಹೆಚ್ಚು ಪ್ರಯೋಜನಕಾರಿ ಆಗಿದೆ. ಕಾಮಗಾರಿ ಮುಡಾ ವ್ಯಾಪ್ತಿಗೆ ಬಾರದಿದ್ದರೂ ಜನೋಪಯೋಗಿ ಕಾರ್ಯ ಎಂದು ಪರಿಗಣಿಸಿ ಇದನ್ನು ಮಾಡಲಾಗಿದೆ ಎಂದರು.

    ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ತಡೆಬೇಲಿಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ತಿಳಿಸಿದರು.
    ಕಾರ್ಪೊರೇಟರ್‌ಗಳಾದ ವೀಣಾಮಂಗಳ, ಭಾಸ್ಕರಚಂದ್ರ ಶೆಟ್ಟಿ, ರೇವತಿ ಶ್ಯಾಮ್‌ಸುಂದರ್, ಭಾನುಮತಿ, ಮುಡಾ ಆಯುಕ್ತ ದಿನೇಶ್ ಕುಮಾರ್, ಇಂಜಿನಿಯರ್‌ಗಳಾದ ಅಕ್ಬರ್ ಪಾಷಾ ಮತ್ತು ಭಾರತಿ, ಕಂಕನಾಡಿ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

    800 ಮೀ. ಉದ್ದದ ರಕ್ಷಣಾ ಬೇಲಿ: ಎರಡೂ ಸೇತುವೆಗಳ 800 ಮೀಟರ್ ಉದ್ದಕ್ಕೆ, ಎರಡೂ ಬದಿಗಳಲ್ಲಿ, ಅಂದರೆ ಒಟ್ಟು 3200 ಮೀ. ಉದ್ದಕ್ಕೆ ಕಬ್ಬಿಣದ ಸರಳುಗಳಿಂದ ತಯಾರಿಸಿದ ರಕ್ಷಣಾ ಬೇಲಿ ಅಳವಡಿಸಲಾಗಿದೆ. ಎರಡೂ ಸೇತುವೆಗಳ ಎರಡೂ ದಿಕ್ಕುಗಳಲ್ಲಿ ತಲಾ ಎರಡರಂತೆ ಒಟ್ಟು 4 ವೈರ್‌ಲೆಸ್ ವಿಶೇಷ ಸಿಸಿ ಕ್ಯಾಮರಾಗಳಿವೆ. ಒಂದು ಭಾಗದ ಸಿಸಿ ಕ್ಯಾಮರಾ 500 ಮೀಟರ್ ತನಕ ದೃಶ್ಯಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ಬೇಲಿಯ ಅಂದಾಜು ವೆಚ್ಚ 55 ಲಕ್ಷ ರೂ. ಹಾಗೂ ಸಿಸಿ ಕ್ಯಾಮರಾ ವೆಚ್ಚ 5 ಲಕ್ಷ ರೂ.. ಕಂಕನಾಡಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಈ ಸಿಸಿ ಕ್ಯಾಮರಾಗಳ ನಿರ್ವಹಣೆ ಮಾಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts