More

    ನೀರು ನಿಲ್ಲಿಸುವ ಭರವಸೆ ನೀಡದ ಸಿಎಂ: ಕಾವೇರಿ ಹೋರಾಟ ಮುಂದುವರೆಸಲು ತೀರ್ಮಾನ

    ಮಂಡ್ಯ: ಕಾವೇರಿ ಕಣಿವೆ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎನ್ನುವ ಹೋರಾಟಗಾರರ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಚಳವಳಿಯನ್ನು ಮುಂದುವರೆಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.
    ಮಂಗಳವಾರ ಧರಣಿ ಸ್ಥಳಕ್ಕೆ ಆಗಮಿಸಿದ್ದ ಸಿಎಂ ಅವರು ರೈತರ ಹಿತ ಕಾಪಾಡುವುದಾಗಿ ಹೇಳಿದ್ದರು. ಆದರೆ ತ.ನಾಡಿಗೆ ನೀರು ಹರಿಸುವುದಿಲ್ಲ ಎನ್ನುವ ಸ್ಪಷ್ಟತೆ ನೀಡಲಿಲ್ಲ. ಇದರಿಂದ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಸಂಬಂಧ ಬುಧವಾರ ಚರ್ಚೆ ಮಾಡಲಾಯಿತು. ಇದಕ್ಕೂ ಮುನ್ನ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಯಶಸ್ವಿಯಾಗದ ಶಾಸಕರ ಮನವೊಲಿಕೆ: ರೈತ ಹಿತರಕ್ಷಣಾ ಸಮಿತಿಯು ಮಂಡ್ಯದಲ್ಲಿ ನಡೆಸುತ್ತಿರುವ ಹೋರಾಟವನ್ನು ಕೈಬಿಡುವಂತೆ ಶಾಸಕ ರವಿಕುಮಾರ್ ಗಣಿಗ ಮನವಿ ಮಾಡಿದರು.
    ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿರುವ ನೀರನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಎಲ್ಲ ಕೆರೆ ಕಟ್ಟೆ ತುಂಬಿಸಿ ರೈತರ ಬೆಳೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಆದ್ದರಿಂದ ಹೋರಾಟ ಹಿಂಪಡೆಯುವಂತೆ ಕೇಳಿದರು. ಆದರೆ ಇದಕ್ಕೆ ಆಕ್ಷೇಪಿಸಿದ ಹೋರಾಟಗಾರರು, ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಿಲ್ಲ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಹೋರಾಟ ಮುಂದುವರೆಸುತ್ತೇವೆಂದು ಸ್ಪಷ್ಟಪಡಿಸಿದರು.
    ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಹೋರಾಟ ಮುಂದುವರಿಸಲು ನಿರ್ಣಯ ಮಾಡಲಾಗಿದೆ. ಸಿಎಂ ಧರಣಿ ಸ್ಥಳಕ್ಕೆ ಬಂದಾಗಲೂ ಹೋರಾಟ ಕೈ ಬಿಡಲು ಮನವಿ ಮಾಡಿಲ್ಲ. ಜತೆಗೆ ರಾಜ್ಯಸರ್ಕಾರ ತನ್ನ ದೃಢ ನಿರ್ಧಾರ ಪ್ರಕಟಿಸಿಲ್ಲ. ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಪ್ರಕಟಿಸುವವರೆಗೂ ಹೋರಾಟ ನಡೆಯಲಿದೆ. ಎಂದಿನಂತೆ ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
    59ನೇ ದಿನಕ್ಕೆ ಕಾಲಿಟ್ಟ ಧರಣಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ನಡೆ ಖಂಡಿಸಿ ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅನಿರ್ದಿಷ್ಟಾವಧಿ ಧರಣಿ ಬುಧವಾರ 58ನೇ ದಿನ ಪೂರೈಸಿತು.
    ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಜಿ.ಬಿ.ಶಿವಕುಮಾರ್, ಕನ್ನಡಸೇನೆ ಮಂಜುನಾಥ್, ಕೆ.ಬೋರಯ್ಯ, ಗುರುಪ್ರಸಾದ್ ಕೆರಗೋಡು, ಮುದ್ದೇಗೌಡ, ಹಲ್ಲೇಗೆರೆ ಶಿವರಾಂ, ನಾರಾಯಣ್, ಎಂ.ವಿ.ಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts