More

    ಕಂಗೆಡಿಸಿದ ಚರ್ಮಗಂಟು ರೋಗ ; ಕೋಲಾರ ಜಿಲ್ಲೆಯಲ್ಲಿ ಈವರೆಗೆ 34 ಜಾನುವಾರುಗಳಲ್ಲಿ ಪತ್ತೆ

    ಕೋಲಾರ: ಕರೊನಾ ಅಪ್ಪಳಿಸಿ ಆತಂಕದಿಂದಲೇ ದಿನದೂಡುವ ಪರಿಸ್ಥಿತಿಯಲ್ಲಿ ಜಿಲ್ಲೆಯ ಹಸುಗಳಲ್ಲಿ ಇದೇ ಮೊದಲ ಬಾರಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದು ಹೈನುಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ.

    ಜಿಲ್ಲೆಯಲ್ಲಿ ಸುಮಾರು 2,15,533 ಜಾನುವಾರುಗಳಿವೆ. ನೀರಿಗೆ ಬರವಿದ್ದರೂ ಹಾಲಿಗೆ ಬರ ಇಲ್ಲ ಎಂಬಂತೆ ಕ್ಷೀರ ಉತ್ಪಾದನೆಯಲ್ಲಿ ಕೋಚಿಮುಲ್ ಎರಡನೇ ಸ್ಥಾನದಲ್ಲಿದೆ. ಕರೊನಾ ಸಂಕಷ್ಟದ ಸಂದರ್ಭದಲ್ಲೂ ರೈತರನ್ನು ಆರ್ಥಿಕವಾಗಿ ಕಾಪಾಡಿದ್ದು ಇದೇ ಹೈನೋದ್ಯಮ. ಆದರೆ ಇದೀಗ ಜಾನುವಾರುಗಳಿಗೇ ರೋಗ ಬಾಧಿಸಲಾರಂಭಿಸಿರುವುದು ಗೋಪಾಲಕರನ್ನು ಕಂಗೆಡಿಸಿದೆ. ನಗರದ ಕೋಟೆ ಪ್ರದೇಶ, ಶ್ರೀನಿವಾಸಪುರದ ಕೆಲ ಭಾಗಗಳ 34ಕ್ಕೂ ಹೆಚ್ಚು ಜಾನುವಾರುಗಳು ರೋಗಕ್ಕೆ ತುತ್ತಾಗಿವೆ.

    ರೋಗ ಲಕ್ಷಣಗಳು: ಹಸುವಿಗೆ ಮೊದಲು ಜ್ವರ ಕಾಣಿಸಿಕೊಂಡು ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು ಆರಂಭಿಸುತ್ತವೆ. ಚರ್ಮದಲ್ಲಿ 2ರಿಂದ 5 ಸೆಂಮೀ ಗಾತ್ರದ ಗಂಟು ಕಾಣಿಸಿಕೊಳ್ಳುತ್ತದೆ. ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಆಹಾರ, ನೀರು ತಿನ್ನುವುದನ್ನು ಬಿಡುತ್ತವೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸದಿದ್ದರೆ ಕ್ರಮೇಣ ಕೀವು ಸೋರಲಾರಂಭಿಸುತ್ತದೆ. ರೋಗ ಉಲ್ಬಣಿಸಿದಲ್ಲಿ ಸಾವು ಸಂಭವಿಸಬಹುದು. ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ಕಚ್ಚುವ ನೊಣಗಳಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಹರಡುತ್ತದೆ. ರೋಗದಿಂದ ಬಳಲುತ್ತಿರುವ ಜಾನುವಾರುಗಳು ತಿಂದು ಬಿಟ್ಟ ಮೇವು, ಕುಡಿದ ನೀರಿನ ಸೇವನೆಯಿಂದಲೂ ರೋಗ ಹರಡುವ ಸಾಧ್ಯತೆ ಇದೆ. ಸೋಂಕು ತಗಲಿದ ಒಂದು ವಾರದಿಂದ 5 ವಾರದೊಳಗೆ ರೋಗ ಲಕ್ಷಣ ಪ್ರಾರಂಭವಾಗುತ್ತದೆ. ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿ.

    ಚಿಕಿತ್ಸೆ: ರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಬೇರ್ಪಡಿಸಿ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡಬೇಕು, ಸೊಳ್ಳೆ, ನೊಣಗಳ ಹಾವಳಿ ತಡೆಯಲು ನೊಣ ನಿವಾರಕ ಮುಲಾಮು ಹಚ್ಚಬೇಕು, ಮೇಕೆ ಸಿಡುಬು ನಿರೋಧಕ ಲಸಿಕೆಯನ್ನು 4ರಿಂದ 6 ತಿಂಗಳ ಮೇಲ್ಪಟ್ಟ ಜಾನುವಾರುಗಳಿಗೆ 2 ಎಂಎಲ್ ಪ್ರಮಾಣದಲ್ಲಿ ಹಾಕುವುದರಿಂದ ರೋಗ ಬರದಂತೆ ತಡೆಯಬಹುದು ಎನ್ನುತ್ತಾರೆ ಪಶುಪಾಲನೆ ಇಲಾಖೆ ಅಧಿಕಾರಿಗಳು.

    ವೈರಾಣುವಿನಿಂದ ಬರುವ ಕಾಯಿಲೆಯಾದ್ದರಿಂದ ಸೂಕ್ತ ಚಿಕಿತ್ಸೆ ಇಲ್ಲ. ಲಕ್ಷಣ ಆಧರಿಸಿ ಚಿಕಿತ್ಸೆ ನೀಡಬೇಕು. ಗಾಯಗಳ ಸೂಕ್ತ ಉಪಚಾರದ ಜತೆಗೆ ಖನಿಜ ಮಿಶ್ರಣ, ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧ ಬಳಕೆಯಿಂದ ಜಾನುವಾರುಗಳು ನಿಶ್ಯಕ್ತಿಗೊಳ್ಳುವುದನ್ನು ತಪ್ಪಿಸಬಹುದು.

    ಗಿಡಮೂಲಿಕೆ ಔಷಧವಾಗಿ ವೀಳ್ಯದೆಲೆ 5-10, ಕಡಿಮೆಣಸು 10 ಗ್ರಾಂ, ಕಲ್ಲುಪ್ಪು 10 ಗ್ರಾಂ, ಬೆಲ್ಲ 5-10 ಗ್ರಾಂ ಚೆನ್ನಾಗಿ ರುಬ್ಬಿ ಸಣ್ಣ ಉಂಡೆ ಮಾಡಿ ಮೊದಲ ದಿನ ಪ್ರತಿ 3 ಗಂಟೆಗೊಮ್ಮೆ, ಎರಡನೇ ದಿನದಿಂದ ಪ್ರತಿ ದಿನಕ್ಕೆ 3 ಬಾರಿಯಂತೆ ಎರಡು ವಾರದವರೆಗೆ ತಿನ್ನಿಸಬೇಕು, ಗಂಟು, ಹುಣ್ಣುಗಳಿಗೆ (ಅರಶಿನ ಪುಡಿ 20 ಗ್ರಾಂ, ಬೆಳ್ಳುಳ್ಳಿ 10 ಗ್ರಾಂ, ಗೋರಂಟಿ/ಮದರಂಗಿ ಎಲೆ, ಬೇವಿನ ಎಲೆ ತಿಳಸಿ ಎಲೆ ಒಂದು ಬೊಗಸೆ ರುಬ್ಬಿ 500 ಎಂಎಲ್ ಎಳ್ಳೆಣ್ಣೆಯೊಂದಿಗೆ ಕುದಿಸಿ, ಆರಿಸಿ ಗಾಯ ತೊಳೆದು ಒಣಬಟ್ಟೆಯಿಂದ ಒರೆಸಿ ಎಣ್ಣೆ ಹಚ್ಚಬೇಕು ಎಂದು ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಾರೆ.

    ಹಸುವಿನ ಮೈಮೇಲೆ ಕಾಣಿಸಿಕೊಂಡ ಗಂಟುರೋಗ ಆತಂಕಕ್ಕೀಡುಮಾಡಿತ್ತು. ಕೂಡಲೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ ಆರೈಕೆ ಮಾಡುತ್ತಿದ್ದೇನೆ.
    ಅಪ್ಪುಸಿಂಗ್, ಗೋಪಾಲಕ ಕೋಲಾರ

    ರೋಗ ಕಂಡು ಬಂದ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸ ಆರಂಭವಾಗಿದೆ. ಚಿಕಿತ್ಸೆ ನೀಡಿದ ಜಾನುವಾರುಗಳು ಗುಣಹೊಂದಿದೆ. ಈಗಾಗಲೆ ರೋಗಪೀಡಿತ ಹಸುವಿನ ರಕ್ತದ ಮಾದರಿಯನ್ನು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ನಿರೀಕ್ಷಿಸಲಾಗುತ್ತಿದೆ.
    ಡಾ. ಜಗದೀಶ್‌ಕುಮಾರ್, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts