More

    ಸೀಸನ್‌ನಲ್ಲೇ ಕರೊನಾ ಹೊಡೆತ

    ಮಂಗಳೂರು: ಸಾಲುಸಾಲು ಮದುವೆ, ಉಪನಯನ, ಬ್ರಹ್ಮಕಲಶ, ಜಾತ್ರೆ ಎಂದು ಕ್ಯಾಟರಿಂಗ್, ಶಾಮಿಯಾನ, ಫೋಟೋಗ್ರಾಫರ್ಸ್‌ ಮೊದಲಾದವರಿಗೆ ಒಂದಷ್ಟು ವ್ಯವಹಾರ ಕುದುರಲಾರಂಭಿಸುತ್ತಿದ್ದಾಗಲೇ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುಢತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಬರಸಿಡಿಲಿನಂತೆ ಬಂದೆರಗಿದೆ.
    ಏಪ್ರಿಲ್ ಅಂತ್ಯ ಹಾಗೂ ಮೇ ಮೊದಲ ವಾರ ಬಹಳಷ್ಟು ಮದುವೆಗಳು, ದೇವಾಲಯಗಳಲ್ಲಿ ವರ್ಷಾವಧಿ ಜಾತ್ರೆ, ಉತ್ಸವಗಳು ನಡೆಲಿದ್ದವು. ಉಪನಯನ, ಗೃಹಪ್ರವೇಶ, ವಿವಾಹ ನಿಶ್ಚಿತಾರ್ಥ ಮೊದಲಾದ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. ಆದರೆ ಪ್ರಸಕ್ತ ಸರ್ಕಾರದ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕೆಲವೊಂದು ಕಾರ್ಯಕ್ರಮಗಳು ಮುಂದೂಡಲ್ಪಟ್ಟರೆ, ಇನ್ನು ಕೆಲವು ರದ್ದಾಗಿವೆ. ನಿಗದಿಯಾದ ದಿನವೇ ನಡೆಯುವುದಾದರೆ ಕೇವಲ 50 ಜನರಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

    ಚೇತರಿಕೆ ಹಾದಿಯಲ್ಲಿದ್ದ ಉದ್ಯಮ: ಮದುವೆ, ಉಪನಯನ ಮೊದಲಾದ ಶುಭ ಕಾರ್ಯಕ್ರಮಗಳಿಗೆ ಊಟದ ವ್ಯವಸ್ಥೆ ಕ್ಯಾಟರಿಂಗ್ ಮೂಲಕವೇ ಮಾಡುವುದು ಸಾಮಾನ್ಯ. ಈಗಾಗಲೇ ಇಂಥ ಕಾರ್ಯಕ್ರಮಗಳಿಗೆ ಊಟ, ಉಪಾಹಾರದ ವ್ಯವಸ್ಥೆ ಕಲ್ಪಿಸಲು ಮುಂಗಡ ಪಡೆದ ಕ್ಯಾಟರಿಂಗ್ ಮಾಲೀಕರಿಗೆ ಹೊಡೆತ ಬಿದ್ದಿದೆ. ಕಳೆದ ಒಂದು ವರ್ಷದಿಂದ ವ್ಯವಹಾರ ಕುಸಿತ ಕಂಡಿದ್ದ ಕ್ಯಾಟರಿಂಗ್ ಕ್ಷೇತ್ರ ಇತ್ತೀಚಿನ ಕೆಲವು ಸಮಯದಿಂದ ಚೇತರಿಕೆ ಹಾದಿಯಲ್ಲಿ ನಡೆಯುತ್ತಿದ್ದಾಗಲೇ ಪಾತಾಳಕ್ಕೆ ಕುಸಿಯಲಾರಂಭಿಸಿದೆ. ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳು ನಿಗದಿಯಾದ ದಿನದಂದೇ ನಡೆಯುವುದಾದರೆ ಅಲ್ಲಿ ಕೇವಲ 50 ಜನರಿಗಷ್ಟೇ ಊಟದ ವ್ಯವಸ್ಥೆ ಸಾಕಾಗುತ್ತದೆ. ಇದರಿಂದ ಕ್ಯಾಟರಿಂಗ್ ಮಾಲೀಕರಿಗೆ ಲಾಭಕ್ಕಿಂತ ನಷ್ಟವೇ ಅಧಿಕ.

    ಮುಂಗಡ ನೀಡಿದ್ದೂ ರದ್ದು: ಶಾಮಿಯಾನ ಮಾಲೀಕರದ್ದೂ ಇದೇ ಸ್ಥಿತಿ. ಹೆಚ್ಚು ಜನ ಸೇರಲು ಅವಕಾಶ ಇಲ್ಲದಿರುವುದರಿಂದ ಶಾಮಿಯಾನದ ಅವಶ್ಯಕತೆ ಇರುವುದಿಲ್ಲ. ಮದುವೆಗಳು ಸಭಾಂಗಣದಲ್ಲಿ ನಡೆಯುತ್ತವೆ. ಮನೆಯಲ್ಲಿ ಹೆಚ್ಚು ಜನ ಸೇರದ ಕಾರಣ ಶಾಮಿಯಾನಕ್ಕೆ ಮುಂಗಡ ನೀಡಿದವರೂ ರದ್ದುಪಡಿಸಿದ್ದಾರೆ. ಚೇರ್, ಪಾತ್ರೆ, ಟೇಬಲ್‌ಗಳ ಅವಶ್ಯಕತೆಯೂ ಇಲ್ಲದೆ ಇರುವುದರಿಂದ ಬಾಡಿಗೆಗೆ ಪಡೆಯುವ ಪ್ರಮೇಯವೂ ಇಲ್ಲದಂತಾಗಿದೆ. ವೇದಿಕೆ ಅಲಂಕಾರ, ಹೂವು ಮಾರಾಟಗಾರರು, ಫೋಟೋಗ್ರಾಫರ್, ವಿಡಿಯೋಗ್ರಾಫರ್, ಅಡುಗೆ ಮಾಡುವವರು, ಪುರೋಹಿತರು, ಟ್ಯಾಕ್ಸಿ, ಬಸ್, ವ್ಯಾನ್ ಚಾಲಕ, ಮಾಲೀಕರಿಗೆ ಈ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯ ಲಾಕ್‌ಡೌನ್ ಬಹಳಷ್ಟು ನಷ್ಟ ಉಂಟು ಮಾಡಿದೆ.

    ಹೂವು, ಫೋಟೋಗೂ ‘ಲಾಕ್’: ವಾರಾಂತ್ಯ ಲಾಕ್‌ಡೌನ್ ಸಂದರ್ಭ ಹೂವು ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಶುಭ ಕಾರ್ಯಕ್ರಮಗಳನ್ನು ಮನೆಯಲ್ಲಿ ಸೀಮಿತ ಸದಸ್ಯರೊಂದಿಗೆ ನಡೆಸುವುದಾದರೂ ಹೂವಿನ ಅವಶ್ಯವಿರುತ್ತದೆ. ಇದರಿಂದ ಹೂವು ಮಾರಾಟಗಾರರಿಗೂ, ಖರೀದಿದಾರರಿಗೂ ಸಮಸ್ಯೆ ಎದುರಾಗಿದೆ. ಫೋಟೋಗ್ರಾಫರ್, ವಿಡಿಯೋಗ್ರಾಫರ್‌ಗೆ ಪ್ರಸ್ತುತ ಮದುವೆಯಂಥ ಸಮಾರಂಭಗಳ ಬೇಡಿಕೆಯಷ್ಟೇ ಇದೆ. ಸ್ಟುಡಿಯೋಗಳಲ್ಲಿ ಫೋಟೋ ತೆಗೆಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಮದುವೆ, ಉಪನಯನ ಮೊದಲಾದ ಸಮಾರಂಭಗಳಿಗೆ ಹಲವು ಸಮಯದ ಬಳಿಕ ಮುಂಗಡ ಕಾದಿರಿಸಿದ್ದರು. ವಾರಾಂತ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ಜನ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಇನ್ನು ಕೆಲವರು ಸರಳವಾಗಿ ಇರುವುದರಿಂದ ಮತ್ತು ಆಡಳಿಕ್ಕೆ ಲೆಕ್ಕ ಕೊಡಬೇಕಾದ ಕಾರಣ ಹೆಚ್ಚಿನ ಛಾಯಾಚಿತ್ರಗ್ರಾಹಕರಿಗೆ ಅವಕಾಶ ನೀಡಿಲ್ಲ.

    ಕಳೆದ ವರ್ಷದ ಲಾಕ್‌ಡೌನ್‌ನಿಂದ ಕ್ಯಾಟರಿಂಗ್ ಕ್ಷೇತ್ರಕ್ಕೆ ಬಹು ದೊಡ್ಡ ನಷ್ಟ ಉಂಟಾಗಿದೆ. ಈ ವರ್ಷ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಮೌಢ್ಯ ಕಳೆದು ಈಗಷ್ಟೇ ಸೀಸನ್ ಆರಂಭವಾಗಿತ್ತು. ಬಹಳಷ್ಟು ಆರ್ಡರ್‌ಗಳೂ ಬಂದಿದ್ದವು. ಲಾಕ್‌ಡೌನ್‌ನಿಂದ ಅವೆಲ್ಲವೂ ರದ್ದುಗೊಂಡಿದೆ. ನಮ್ಮ ಸಂಘದ ಸದಸ್ಯರೊಬ್ಬರಿಗೆ 62 ಆರ್ಡರ್ ಬಂದಿತ್ತು. ಈಗ ಎಲ್ಲವೂ ರದ್ದಾಗಿದೆ. ನಮ್ಮ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ನೆಚ್ಚಿಕೊಂಡ ಉದ್ಯೋಗಿಗಳು ಬೀದಿಗೆ ಬೀಳುವ ಸ್ಥಿತಿ ಇದೆ.
    ಅನೀಶ್ ಅಧ್ಯಕ್ಷ, ಕ್ಯಾಟರಿಂಗ್ ಮಾಲೀಕರ ಸಂಘ

    ನಿಗದಿಯಾಗಿದ್ದ ಶುಭ ಸಮಾರಂಭಗಳು ರದ್ದಾದ ಕಾರಣ ನಮ್ಮಲ್ಲಿ ಶಾಮಿಯಾನ, ಪಾತ್ರೆ, ಚೇರ್‌ಗಳನ್ನು ಕಾದಿರಿಸಿದವರು ರದ್ದು ಮಾಡಿದ್ದಾರೆ. ಇದರಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ವಾರಾಂತ್ಯದಲ್ಲಿ ಲಾಕ್‌ಡೌನ್ ಇರುವುದರಿಂದ ಸೋಮವಾರದ ಕಾರ್ಯಕ್ರಮಗಳಿಗೆ ಶುಕ್ರವಾರವೇ ಶಾಮಿಯಾನ ಅಳವಡಿಸಿದ್ದೇವೆ.
    ಸುರೇಶ್ ಕಾಣಿಯೂರು ಶಾಮಿಯಾನ ಅಂಗಡಿ ಮಾಲೀಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts