More

    ಜಾತಿ ಪ್ರಮಾಣ ಪತ್ರ ನೀಡಿದರಷ್ಟೇ ಮತದಾನ

    ಕುಷ್ಟಗಿ: ಜಾತಿ ಪ್ರಮಾಣ ಪತ್ರ ನೀಡಿದರಷ್ಟೇ ಈ ಬಾರಿ ವಿಧಾನಸಭೆ ಚುಣಾವಣೆಯಲ್ಲಿ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ, ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಹಾಬಲಕಟ್ಟಿಯ ಭೋವಿ ಸಮುದಾಯದ ಪ್ರಮುಖರು ಚುನಾವಣಾಧಿಕಾರಿ ಚಿದಾನಂದಪ್ಪಗೆ ಬುಧವಾರ ಮನವಿ ನೀಡುವ ಮೂಲಕ ಒತ್ತಾಯಿಸಿದರು.

    ಭೋವಿ ಸಮುದಾಯಕ್ಕೆ ಸೇರಿದ್ದರೂ ಸಂಬಂಧಿಸಿದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಗ್ರಾಮದಲ್ಲಿ 60 ಕುಟುಂಬಗಳಿದ್ದು, 350ಕ್ಕೂ ಹೆಚ್ಚು ಮತದಾರರಿದ್ದಾರೆ. ಸಮುದಾಯಕ್ಕೆ 1954ರಿಂದ 2011ರವರೆಗೆ ಭೋವಿ ಎಂದು ಜಾತಿ ಪ್ರಮಾಣ ನೀಡುತ್ತ ಬರಲಾಗಿದೆ. 2011ರ ನಂತರ ಭೋವಿ ಸಮುದಾಯಕ್ಕೆ ಸೇರಿಲ್ಲ.

    ಹಕ್ಕು ಪಡೆಯಲು 101 ದಿನಗಳ ಕಾಲ ಧರಣಿ

    ಪ್ರವರ್ಗ 1ರಲ್ಲಿ ಬರುವ ಬೋವಿ ಸಮುದಾಯಕ್ಕೆ ಸೇರಿದ್ದೀರೆಂದು ಹೇಳಿದ ಅಧಿಕಾರಿಗಳು ಪರಿಶಿಷ್ಟ ಜಾತಿ ಮೀಸಲಾತಿಯಿಂದ ವಂಚಿತರಾಗುವಂತೆ ಮಾಡಿದ್ದಾರೆ. ಸಂವಿಧಾನ ನೀಡಿರುವ ಹಕ್ಕು ಪಡೆಯಲು ತಹಸಿಲ್ ಕಚೇರಿ ಎದುರು 101 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಯಿತು.

    ಈ ಸಂಬಂಧ ರಚನೆಯಾದ ಸದನ ಸಮಿತಿ ಸ್ಥಾನಿಕ ಪರಿಶೀಲನೆ ನಡೆಸಿ ಭೋವಿ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದರೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆಂದು ಸಮುದಾಯದ ಪ್ರಮುಖರಾದ ಶರಣಪ್ಪ ಭೋವಿ, ರಮೇಶ ಭೋವಿ, ತಿಳಿಸಿದರು.

    ಚುನಾವಣಾಧಿಕಾರಿ ಚಿದಾನಂದಪ್ಪ ಮಾತನಾಡಿ, ಮತದಾನ ಸಂವಿಧಾನ ನೀಡಿರುವ ಹಕ್ಕು. ಮತದಾನ ಮಾಡಿದರೆ ಮುಂದೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನಿಮಗಿರುತ್ತದೆ. ಚುನಾವಣೆ ನಂತರ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜಂಟಿ ಸಮಿತಿ ರಚಿಸಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮನವರಿಕೆ ಮಾಡಿದರು.

    ಸಹಾಯಕ ಚುನಾವಣಾಧಿಕಾರಿ ರಾಘವೇಂದ್ರರಾವ್, ಗ್ರೇಡ್ 2 ತಹಸೀಲ್ದಾರ್ ಮುರಳೀಧರ, ಪ್ರಮುಖರಾದ ಹನುಮಂತ ಭೋವಿ, ಮುತ್ತಪ್ಪ, ಕಾಳಿಂಗಪ್ಪ, ಭೀಮಪ್ಪ, ಶಶಿಕುಮಾರ, ಮಹಾಂತೇಶ, ಪರಶುರಾಮ ಇದ್ದರು.

    ಇದನ್ನೂ ಓದಿ: https://www.vijayavani.net/ramanagara-gopalpura-road-protest/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts