More

    ರಸ್ತೆ ಸರಿಪಡಿಸದಿದ್ದರೆ ಮತದಾನ ಬಹಿಷ್ಕಾರಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ನಾಗರಿಕರಿಂದ ಪ್ರತಿಭಟನೆ

    ರಾಮನಗರ

    ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗೋಪಾಲಪುರ, ರಾಂಪುರದೊಡ್ಡಿ, ಇರುಳಿಗರ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ನೂತನ ರಸ್ತೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ರಸ್ತೆಯಲ್ಲಿ ಪ್ರತಿಭಟಿಸಿ ಎಚ್ಚರಿಕೆ ನೀಡಿದರು.
    ಬೆಂಗಳೂರು-ಮೈಸೂರು ರಸ್ತೆ ವಡೇರಹಳ್ಳಿಯಿಂದ ಗೋಪಾಲಪುರ-ರಾಂಪುರದೊಡ್ಡಿ ಗ್ರಾಮ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ಗ್ರಾಮಗಳಿಗೆ ಸಂಪರ್ಕ ಇದೆ. ಹಂದಿಗೊಂದಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕಾರಣ ಈ ಭಾಗದ ಗ್ರಾಮಗಳಿಗೆ ಬಸ್ ಸಂಪರ್ಕ ಇಲ್ಲ.
    ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ವಡೇರಹಳ್ಳಿಯಿಂದ ಗೋಪಾಲಪುರ, ರಾಂಪುರದೊಡ್ಡಿವರೆಗೆ ರಸ್ತೆ ಹದಗೆಟ್ಟಿದೆ. ಈಗಿರುವ ರಸ್ತೆ ಮೂಲ ಪಥ ಬೇರೆಯಾಗಿದ್ದು, ಜಮೀನು ಮಾಲೀಕರು ರಸ್ತೆ ಅಭಿವೃದ್ಧಿಗೆ ವಿರೋಧವಾಗಿದ್ದಾರೆ. ಆದ ಕಾರಣ ಜಿಲ್ಲಾಡಳಿತ ಮತ್ತೊಮ್ಮೆ ಸರ್ವೇ ನಡೆಸಿ ಪಥ ಬದಲಾವಣೆ ಮಾಡಿಕೊಟ್ಟರೆ ಜಮೀನು ಮಾಲೀಕರು ರಸ್ತೆ ಅಭಿವೃದ್ಧಿಗೆ ತಡೆ ಒಡ್ಡುವುದಿಲ್ಲ. ಈ ಬಗ್ಗೆ ಹಲವು ಬಾರಿ ತಾಲೂಕು, ಜಿಲ್ಲಾಡಳಿತಕ್ಕೆ ರಸ್ತೆ ಅಭಿವೃದ್ಧಿ, ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡುತ್ತಾ ಬಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
    ಮಳೆಗಾಲ ಬಂದರೆ ರಸ್ತೆ ಗುಂಡಿಮಯವಾಗುವ ಕಾರಣ ನೀರು ನಿಂತು ರಸ್ತೆ ಕಾಣದೆ ವಾಹನ ಸವಾರರು ಬಿದ್ದ ನಿದರ್ಶನಗಳಿವೆ. ಜತೆಗೆ ಹಂದಿಗೊಂದಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳು ಆಗಿರುವ ಕಾರಣ ಆನೆ ಕರಡಿ, ಚಿರತೆ ಸೇರಿ ಮುಂತಾದ ವನ್ಯ ಪ್ರಾಣಿಗಳ ಉಪಟಳವಿದ್ದು, ಸಂಜೆಯಾದರೆ ಸಾಕು ಕಾಡು ಪ್ರಾಣಿಗಳು ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿದ್ದು ಅವುಗಳಿಂದ ತಪ್ಪಿಸಿಕೊಳ್ಳಲು ಪರದಾಡಬೇಕಿದೆ.

    ರಸ್ತೆ ನಿರ್ಮಿಸಲು ಸರ್ಕಾರಕ್ಕೆ ಚೆಂದಾ ಎತ್ತಿ ಕೊಡುತ್ತೇವೆ

    ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಗ್ರಾಮಸ್ಥರೇ ಚಂದಾ ಎತ್ತಿ ಹಣ ನೀಡುತ್ತೇವೆ. ಮೊದಲು ರಸ್ತೆ ಸಮಸ್ಯೆ ಬಗೆಹರಿಸಿಕೊಡಿ ರಸ್ತೆ ಸರಿಯಿಲ್ಲದ ಕಾರಣ ಈ ಭಾಗದಲ್ಲಿ ಓಡಾಟ ನಡೆಸಲು ಆಗುವುದಿಲ್ಲ. ಜಿಲ್ಲಾಡಳಿತ ಪಥ ಬದಲಾವಣೆ ಮಾಡಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು, ಇಲ್ಲದಿದ್ದರೆ ಮೇ 10ರ ಚುನಾವಣೆಯಲ್ಲಿ ನಾವು ಮತದಾನ ಮಾಡುವುದಿಲ್ಲ. ಅಲ್ಲದೆ ಮತ ಕೇಳಲು ಬರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಗ್ರಾಮದಿಂದ ಬಹಿಷ್ಕಾರ ಹಾಕುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
    ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಕಚೇರಿಗೆ ಗ್ರಾಮದ ಮುಖಂಡರು ಭೇಟಿ ನೀಡಿ ಮನವಿ ಸಲ್ಲಿಸಿದರು. ಜಯಮ್ಮ, ರಾಮಯ್ಯ, ಜಗದೀಶ್, ಚಂದ್ರು, ವೆಂಕಟೇಶ್, ಸಿದ್ದರಾಮಯ್ಯ ಇಂದ್ರಮ್ಮ, ವಿಜಿಯಮ್ಮ, ಶಂಕರಯ್ಯ ಇತರರಿದ್ದರು.

    ರಸ್ತೆ ಪಥ ಬದಲಾವಣೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಕಳೆದ ತಿಂಗಳು ಐದಾರು ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿ ಹೋದವರು ಇತ್ತ ಸುಳಿದಿಲ್ಲ. ಈ ಕಾರಣದಿಂದ ನಾವು ಮೇ 10 ಮತದಾನ ಬಹಿಷ್ಕಾರಕ್ಕೆ ತೀರ್ಮಾನ ಮಾಡಿದ್ದೇವೆ.
    ಲಕ್ಷ್ಮಣ್, ಗೋಪಾಲಪುರ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts