More

    ಕ್ಲೈಮ್ಯಾಕ್ಸ್ ಹಂತದಲ್ಲಿ ಯೋಗೀಶಗೌಡ ಹತ್ಯೆ ಪ್ರಕರಣ

    ಧಾರವಾಡ: ಜಿಲ್ಲೆಯ ಹೆಬ್ಬಳ್ಳಿ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

    ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ತಮ್ಮದೇ ಒಡೆತನದ ಉದಯ ಜಿಮ್ಲ್ಲಿ ಯೋಗೀಶಗೌಡ ಅವರ ಕೊಲೆ 2016ರ ಜೂನ್ 15ರಂದು ನಡೆದಿತ್ತು. ಕೊಲೆಯಾದ ಮೂರೇ ದಿನಗಳಲ್ಲಿ ಬಸವರಾಜ ಮುತ್ತಗಿ, ವಿನಾಯಕ ಕಟಗಿ, ಸಂದೀಪ ಸವದತ್ತಿ, ವಿಕ್ರಂ ಬಳ್ಳಾರಿ, ಕೀರ್ತಿ ಕುರಹಟ್ಟಿ, ಮುದಕಪ್ಪ ಹೊಂಗಲ್ ಎಂಬುವವರನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆದರೆ, ಇವರು ನಿಜವಾದ ಕೊಲೆಗಾರರಲ್ಲ ಎಂದು ಆರೋಪಿಸಿದ್ದ ಯೋಗೀಶಗೌಡ ಗೌಡರ ಕುಟುಂಬಸ್ಥರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು.

    ಗುರುವಾರ ಬೆಳಗ್ಗೆ 7 ಗಂಟೆಗೆ ಮಾಜಿ ಸಚಿವ ವಿನಯ ಕುಲಕರ್ಣಿ, ಅವರ ಸಹೋದರ ವಿಜಯ ಕುಲಕರ್ಣಿ ಸೇರಿ ಐವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಸುದೀರ್ಘ 12 ಗಂಟೆಗಳ ವಿಚಾರಣೆ ಬಳಿಕ ವಿನಯ ಕುಲಕರ್ಣಿ ಅವರನ್ನು ಬಂಧಿಸಿದೆ. ಬಳಿಕ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಎಚ್. ಪಂಚಾಕ್ಷರಿ ಅವರು ವಿನಯ ಕುಲಕರ್ಣಿಗೆ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಿದರು. ಸಿಬಿಐ ತಂಡವು ನ್ಯಾಯಾಧೀಶರೆದುರು ಹಾಜರುಪಡಿಸುವ ಮೊದಲು ವಿನಯ ಕುಲಕರ್ಣಿ ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಿತು. ಇದಕ್ಕೂ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿದಾಗ ಅವರ ವರದಿ ನೆಗಟಿವ್ ಬಂದಿತು. ನಂತರ ಅವರನ್ನು 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಹಾಲ್​ನಲ್ಲಿ ಕಿಕ್ಕಿರಿದಿದ್ದ ಸಾರ್ವಜನಿಕರನ್ನು ನ್ಯಾಯಾಧೀಶರು ಹೊರಹಾಕಿ ವಿಚಾರಣೆ ಆರಂಭಿಸಿದರು. ‘ನಿಮ್ಮ ಬಂಧನದ ವಿಷಯ ನಿಮಗೆ ತಿಳಿದಿದೆಯೇ? ಎಷ್ಟು ಗಂಟೆಗೆ ವಶಕ್ಕೆ ಪಡೆಯಲಾಯಿತು?’ ಎಂದು ನ್ಯಾಯಾಧೀಶರು ಕೇಳಿದರು. ತಮ್ಮನ್ನು ಬೆಳಗ್ಗೆ 7 ಗಂಟೆಗೆ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವಿನಯ ಹೇಳಿದರು. ಸಿಬಿಐ ಅಧಿಕಾರಿಗಳು ಕಿರುಕುಳ ನೀಡಿದರಾ? ಎಂದು ನ್ಯಾಯಾಧೀಶರ ಪ್ರಶ್ನೆಗೆ ವಿನಯ, ಇಲ್ಲ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ 3 ದಿನಗಳವರೆಗೆ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಸದ್ಯ ಶುಕ್ರವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಧೀಶರಾದ ಎಚ್. ಪಂಚಾಕ್ಷರಿ ಆದೇಶಿಸಿದರು. ವಿನಯ ಪರ ವಕೀಲ ಬಾಹುಲಿ ಧನವಾಡಿ ವಾದಿಸಿದರು. ಭದ್ರತಾ ದೃಷ್ಟಿಯಿಂದ ವಿನಯ ಕುಲಕರ್ಣಿ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಶುಕ್ರವಾರ ಹಿಂಡಲಗಾ ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ವಿನಯ ಕುಲಕರ್ಣಿ ವಿಚಾರಣೆ ನಡೆಯಲಿದೆ. ಅವರ ನ್ಯಾಯಾಂಗ ಬಂಧನ ಅವಧಿ ಮುಂದುವರಿಯುವುದೋ ಅಥವಾ ಸಿಬಿಐ ವಶಕ್ಕೆ ನೀಡಲಿದ್ದಾರೆಯೇ ಎಂಬುದು ಶುಕ್ರವಾರ ನಿರ್ಧಾರವಾಗಲಿದೆ.

    ಟಿಂಗರೀಕರ ಕಾಣೆ?

    ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಉಪನಗರ ಠಾಣೆ ಇನ್​ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ ಸಿಬಿಐ ಕೈಗೆ ಸಿಗದಿರುವುದು ಹಲವು ಅನುಮಾನ ಮೂಡಿಸಿದೆ. ಕೆಲ ದಿನಗಳ ಹಿಂದೆ ಅವರ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಹುಬ್ಬಳ್ಳಿಯ ಸಿಸಿಬಿ ವಿಭಾಗದಲ್ಲಿ ಇನ್​ಸ್ಪೆಕ್ಟರ್ ಆಗಿರುವ ಟಿಂಗರೀಕರ, ಕೆಲ ದಿನಗಳಿಂದ ವೈದ್ಯಕೀಯ ರಜೆ ಮೇಲಿದ್ದಾರೆ. ಅವರಿಗಾಗಿ ಸಿಬಿಐ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

    ಸಚಿವರಿದ್ದಾಗ ಉದ್ಘಾಟಿಸಿದ ಠಾಣೆಯಲ್ಲೇ ವಿಚಾರಣೆ

    ಧಾರವಾಡ: ನಗರದಲ್ಲಿ ಈ ಮೊದಲಿದ್ದ ಉಪನಗರ ಪೊಲೀಸ್ ಠಾಣೆ ಕಟ್ಟಡ ನವೀಕರಣ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಟ್ಟಡ ಉದ್ಘಾಟನೆ ನಡೆಸಿದ್ದ ವಿನಯ ಕುಲಕರ್ಣಿ ಅವರನ್ನು ಗುರುವಾರ ಅದೇ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಠಾಣೆಯನ್ನು ನವೀಕರಣ ನಡೆಸಿದ ಬಳಿಕ 2017ರ ಜುಲೈ 7ರಂದು ಉದ್ಘಾಟಿಸಲಾಗಿತ್ತು. ಆದರೆ, ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿನಯ ಅವರನ್ನು ಇದೇ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು. ಅಲ್ಲದೆ, ಇದೇ ಠಾಣೆಯಿಂದ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ದರು.

    ಹಿಂಡಲಗಾ ಜೈಲಲ್ಲಿ ಕೈದಿ ನಂ.16635

    ಬೆಳಗಾವಿ: ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸೇರಿಸಿದ್ದಾರೆ. ಕುಲಕರ್ಣಿ ಅವರಿಗೆ ವಿಚಾರಣಾಧೀನ ಕೈದಿ ನಂಬರ್ 16635 ನೀಡಲಾಗಿದೆ ಎಂದು ಜೈಲರ್ ತಿಳಿಸಿದ್ದಾರೆ. ಈ ವೇಳೆ ಸುದ್ದಿಗಾರರು ಮಾತನಾಡಿಸಲು ಪ್ರಯತ್ನಿಸಿದಾಗ ‘ನೋ ಕಮೆಂಟ್ಸ್ ಎನ್ನುತ್ತಲೇ’ ವಿನಯ ಕುಲಕರ್ಣಿ ಜೈಲಿನೊಳಕ್ಕೆ ಹೆಜ್ಜೆ ಹಾಕಿದರು. ಜೈಲು ಅಧಿಕಾರಿಗಳು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ವಿಚಾರಣಾಧೀನ ಕೈದಿಯಾಗಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದಾರೆ. ಶುಕ್ರವಾರ ಕಾರಾಗೃಹದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡು ವಿಚಾರಣೆ ಎದುರಿಸಲಿದ್ದಾರೆ. ಪ್ರತ್ಯೇಕ ಕೊಠಡಿಗೆ ವಿನಯ ಅವರನ್ನು ಸೇರಿಸಿದ ನಂತರ ಸಿಬಿಐ ಅಧಿಕಾರಿಗಳಾದ ರಾಜೇಂದ್ರ ಸಿಂಗ್, ರಾಕೇಶ ಸಿಂಗ್, ಭುಪೇಂದ್ರ ಸಿಂಗ್ ಸೇರಿ ಧಾರವಾಡ ಉಪನಗರ ಠಾಣೆ ಪೊಲೀಸರು ಮತ್ತೆ ಧಾರವಾಡಕ್ಕೆ ತೆರಳಿದರು. ಈ ವೇಳೆ ಸಚಿವರು ಬಿಪಿ ಮಾತ್ರೆ ಮರೆತಿದ್ದಾರೆ ಎಂದು ಅವರ ಬಟ್ಟೆ, ಮಾತ್ರೆಗಳ ಸಮೇತ ಕಾರಾಗೃಹಕ್ಕೆ ಬಂದ ವಿನಯ ಕುಲಕರ್ಣಿ ಆಪ್ತರು, ಕಾರಾಗೃಹದ ಮುಂಭಾಗದಲ್ಲಿ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತ ಕುಳಿತಿದ್ದರು.

    ಈ ಪ್ರಕರಣದಲ್ಲಿ ಮಾಜಿ ಸಚಿವರ ಕೈವಾಡವಿದ್ದರೆ ಹೊರ ಬರಲಿ. ಕೊಲೆ ಹಿಂದೆ ಜಮೀನು ವಿವಾದ ಇಲ್ಲವೇ ಇಲ್ಲ. ನಾವು ಯಾರ ಜಮೀನನ್ನೂ ಕಸಿದುಕೊಂಡಿಲ್ಲ. ನನ್ನ ಗಂಡ ನಿಯತ್ತಿನಿಂದ ಗಳಿಸಿದ್ದ. ರಾಜಕೀಯದಿಂದಲೇ ಇದೆಲ್ಲ ಆಗಿದೆ. ನಾನು ಹಣಕ್ಕಾಗಿ ಕಾಂಗ್ರೆಸ್ ಸೇರಿಲ್ಲ. ನನ್ನ ಗಂಡ ನನಗೇನೂ ಕಡಿಮೆ ಮಾಡಿಲ್ಲ. ಬಿಜೆಪಿಯವರು ಸರಿಯಾಗಿ ಸ್ಪಂದಿಸದ ಕಾರಣ ಪಕ್ಷ ಬಿಟ್ಟಿದ್ದೆ. ಮಕ್ಕಳ ಭವಿಷ್ಯದ ಧೈರ್ಯಕ್ಕಾಗಿ ಕಾಂಗ್ರೆಸ್ ಸೇರಿದೆ. ಬಿಜೆಪಿಯವರು ಏನೂ ಸಹಾಯ ಮಾಡಿಲ್ಲ. ನನ್ನ ಗಂಡನಿಂದ ಬಿಜೆಪಿಯವರು ಬೇಳೆ ಬೇಯಿಸಿಕೊಂಡಿದ್ದರು. ಇವತ್ತಿಗೂ ನಾನು ರಾಜಕೀಯ ದ್ವೇಷದ ಕೊಲೆ ಅನ್ನುವುದಕ್ಕೆ ಬದ್ಧವಾಗಿದ್ದೇನೆ. ಗಂಡನ ಕೊಲೆಗೆ ನ್ಯಾಯ ಸಿಗಲಿದೆ.

    | ಮಲ್ಲಮ್ಮ ಗೌಡರ ಯೋಗೀಶಗೌಡ ಪತ್ನಿ

    ಖುಷಿ ತಂದಿದೆ

    ಸಹೋದರ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ವಿಜಯ ಕುಲಕರ್ಣಿ ಅವರ ವಿಚಾರಣೆ ನಡೆಸಿದ್ದು ಖುಷಿ ತಂದಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಗಣ್ಯ ವ್ಯಕ್ತಿಗಳಿದ್ದಾರೆ ಅವರನ್ನು ವಿಚಾರಣೆ ಮಾಡಬೇಕು.

    | ಅಕ್ಕಮಹಾದೇವಿ ಯೋಗೀಶಗೌಡರ ಅಕ್ಕ

    ಆತ್ಮಕ್ಕೆ ಶಾಂತಿ ಸಿಗುವ ಭರವಸೆ

    ನನ್ನ ಮಗನ ಹತ್ಯೆಯಾಗಿ 4 ವರ್ಷವಾಯ್ತು. ಅವನ ಆತ್ಮಕ್ಕೆ ಶಾಂತಿ ಸಿಗೋ ಭರವಸೆ ಇದೆ. ಮಗ ಗುರುನಾಥಗೌಡ ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದಾನೆ. ಹೀಗಾಗಿ ನನ್ನ ಮಗನ ಸಾವಿಗೆ ನ್ಯಾಯ ಸಿಗುವ ಭರವಸೆ ಇದೆ. ವಿನಯ ಕುಲಕರ್ಣಿ ಅವರನ್ನು ವಿಚಾರಣೆಗೊಳಪಡಿಸಿದ್ದು ಖುಷಿ ತಂದಿದೆ.

    | ತುಂಗಮ್ಮ

    ಯೋಗೀಶಗೌಡರ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts