More

    ಮೊದಲ ಕರೊನಾ ಪಾಸಿಟಿವ್ ಗುಣಮುಖ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್‌ಗಳು ಸೇರ್ಪಡೆಯಾಗುತ್ತಲೇ ಇರುವ ಮಧ್ಯೆ ಒಂದು ಶುಭ ಸುದ್ದಿ. ಜಿಲ್ಲೆಯಲ್ಲಿ ದಾಖಲಾದ ಮೊದಲ ಪಾಸಿಟಿವ್ ರೋಗಿ, ಭಟ್ಕಳದ ಯುವಕ ಗುಣಮುಖರಾಗಿದ್ದು, ಏ.6ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

    ಭಾನುವಾರ 28 ಮಾದರಿ ಪರೀಕ್ಷೆಗಳು ನೆಗೆಟಿವ್ ಆಗಿವೆ. ಓರ್ವ ಗುಣಮುಖರಾಗಿರುವ ಕಾರಣ ಒಟ್ಟು ಪಾಸಿಟಿವ್ ಸಂಖ್ಯೆ 11ಕ್ಕೆ ಇಳಿಕೆಯಾಗಿದೆ. ಭಟ್ಕಳ ಮೂಲದ 22 ವರ್ಷದ ಯುವಕ ಮಾರ್ಚ್ 19ರಂದು ದುಬೈನಿಂದ ಸ್ಪೈಸ್‌ಜೆಟ್ ವಿಮಾನದಲ್ಲಿ ಆಗಮಿಸಿದ್ದು, ಸ್ಕ್ರೀನಿಂಗ್ ವೇಳೆ ಕರೊನಾ ಲಕ್ಷಣಗಳು ಕಂಡುಬಂದಿದ್ದರಿಂದ ವೆನ್ಲಾಕ್‌ನ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. 20ರಂದು ಗಂಟಲು ಕೋಶ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 22ರಂದು ಅದು ಪಾಸಿಟಿವ್ ಎಂದು ದೃಢಪಟ್ಟಿತ್ತು. ಕರೊನಾದಿಂದ ಮುಕ್ತರಾಗಿರುವುದನ್ನು ದೃಢಪಡಿಸಲು ಏ.2, 3ರಂದು ಗಂಟಲು ಕೋಶ ಮಾದರಿ ಮತ್ತೆ ಪರೀಕ್ಷೆಗೆ ಕಳುಹಿಸಲಾಗಿತ್ತು, ಇದು ನೆಗೆಟಿವ್ ಬಂದಿದ್ದು, ಅವರನ್ನು ಸೋಮವಾರ ಬಿಡುಗಡೆಗೊಳಿಸಲಾಗುವುದು ಎಂದು ಡಿಸಿ ಸಿಂಧೂ ಬಿ.ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸೋಂಕಿತರ ಸ್ಥಿತಿ ತೃಪ್ತಿಕರ: 86 ಮಂದಿಯನ್ನು ಭಾನುವಾರ ತಪಾಸಣೆಗೊಳಪಡಿಸಲಾಗಿದೆ. 4461 ಮಂದಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ, 15 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿದ್ದಾರೆ. 1342 ಮಂದಿ 28 ದಿನಗಳ ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ. ಭಾನುವಾರ 21 ಮಂದಿಯ ಗಂಟಲು ಕೋಶ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಇತರ ಎಲ್ಲ ಪಾಸಿಟಿವ್ ಆಗಿರುವ ರೋಗಿಗಳ ಸ್ಥಿತಿಯೂ ತೃಪ್ತಿಕರವಾಗಿದೆ. ಅವರೂ ತಮ್ಮ ನಿಗದಿತ ಕ್ವಾರಂಟೈನ್ ಅವಧಿ ಮುಗಿಸಿ, ವರದಿ ನೆಗೆಟಿವ್ ಬಂದೊಡನೆ ಡಿಸ್‌ಚಾರ್ಜ್ ಆಗಲಿದ್ದಾರೆ.

    ಉಡುಪಿಯಲ್ಲಿ 12 ನೆಗೆಟಿವ್:
    ಉಡುಪಿ:
    ಜಿಲ್ಲಾಡಳಿತ ಭಾನುವಾರ ಸ್ವೀಕರಿಸಿದ ಎಲ್ಲ 12 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದ್ದು, ಮತ್ತೆ ಐದು ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 40 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಭಾನುವಾರಕ್ಕೆ 12 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೋಲೇಶನ್ ವಾರ್ಡ್‌ನಿಂದ ಒಬ್ಬರು ಸೇರಿದಂತೆ ಇಲ್ಲಿವರೆಗೆ 132 ಮಂದಿ ಡಿಸ್‌ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ ಮೂವರು ಭಾನುವಾರ ಬಿಡುಗಡೆಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂರ್ನಾಲ್ಕು ದಿನಗಳಿಂದ ಎಲ್ಲ ವರದಿಗಳು ನೆಗೆಟಿವ್ ಬರುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಕರೊನಾ ಆತಂಕ ದೂರವಾಗುತ್ತಿದೆ.

    ಕೇರಳದಲ್ಲಿ ಮತ್ತೆ ಎಂಟು ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ ಒಂದು ಪ್ರಕರಣ ಸೇರಿದಂತೆ ಕೇರಳದಲ್ಲಿ ಭಾನುವಾರ ಮತ್ತೆ ಎಂಟು ಮಂದಿಯಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿದೆ. ಕೋಯಿಕ್ಕೋಡ್ ಜಿಲ್ಲೆಯಲ್ಲಿ ಐವರು, ಕಾಸರಗೋಡು, ಕಣ್ಣೂರು, ಪತ್ತನಂತಿಟ್ಟ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾದ ಐದು ಪ್ರಕರಣದಲ್ಲಿ ನಾಲ್ವರು ನಿಜಾಮುದ್ದೀನ್ ಮತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ವಾಪಸಾದವರು ಹಾಗೂ ಇನ್ನೊಬ್ಬಾತ ದುಬೈನಿಂದ ಆಗಮಿಸಿದ ವ್ಯಕ್ತಿ. ಪತ್ತನಂತಿಟ್ಟದಲ್ಲಿ 19ರ ಹರೆಯದ ಯುವತಿಯಲ್ಲಿ ಸೋಂಕು ಖಚಿತಗೊಂಡಿದೆ. ಈಕೆ ದೆಹಲಿಯಲ್ಲಿ ವಿದ್ಯಾರ್ಥಿನಿ. ಈ ಮೂಲಕ ಕೇರಳದಲ್ಲಿ ಒಟ್ಟು 314 ಮಂದಿಯಲ್ಲಿ ಸೋಂಕು ಖಚಿತಗೊಂಡಂತಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,58,617 ಮಂದಿ ನಿಗಾದಲ್ಲಿದ್ದಾರೆ. ಇದರಲ್ಲಿ 1,57,841 ಮಂದಿ ಮನೆಗಳಲ್ಲಿ ಹಾಗೂ 776 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 58 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

    ಕಾಸರಗೋಡು ಒಟ್ಟು ಸಂಖ್ಯೆ 139: ಕಾಸರಗೋಡು ಜಿಲ್ಲೆಯಲ್ಲಿ 139 ಮಂದಿಯಲ್ಲಿ ಕೋವಿಡ್-19 ವೈರಸ್ ಖಚಿತಗೊಂಡಿದೆ. ನೆಲ್ಲಿಕುನ್ನು ನಿವಾಸಿ, ಏಳರ ಹರೆಯದ ಬಾಲಕನಿಗೆ ಹೊಸದಾಗಿ ಸೋಂಕು ಪತ್ತೆಯಾಗಿದೆ. ಬಾಲಕನ ತಾಯಿ ಮತ್ತು ತಂದೆ ವೈರಸ್ ತಗುಲಿ ಚಿಕಿತ್ಸೆಯಲ್ಲಿದ್ದಾರೆ. ಮೂವರ ಆರೋಗ್ಯವೂ ತೃಪ್ತಿಕರವಾಗಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ ರಾಮ್‌ದಾಸ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 10,731 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10,499 ಮಂದಿ ಮನೆಗಳಲ್ಲಿ ಹಾಗೂ 232 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಹೊಸದಾಗಿ 43 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹೋಂ ಕ್ವಾರಂಟೈನ್ ಉಲ್ಲಂಘನೆ ಪ್ರಕರಣ
    ಉಡುಪಿ: ದುಬೈನಿಂದ ಆಗಮಿಸಿ, ಕ್ವಾರಟೈಂನ್ ಉಲ್ಲಂಘಿಸಿ ಓಡಾಡಿದ್ದ ಕಾಪು ತಾಲೂಕಿನ ಕರೊನಾ ಸೋಂಕಿತನ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವವರೆಗೆ ಹಲವು ಬಾರಿ ಹೋಂ ಕ್ವಾರಟೈಂನ್ ಉಲ್ಲಂಘಿಸಿ ಓಡಾಡಿದ್ದು, ಸೋಂಕು ದೃಢವಾದ ನಂತರ ಈತನ ಸಂಪರ್ಕಕ್ಕೆ ಬಂದಿದ್ದ ಪ್ರತಿಯೊಬ್ಬರನ್ನೂ ಗುರುತಿಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವವರು ಹೊರಗಡೆ ಓಡಾಡುವುದು ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 9663957222, 9663950222ಗೆ ಮಾಹಿತಿ ನೀಡಬಹುದು. ಸಹಾಯವಾಣಿಯ ಸಹಾಯ ಕೋರಿ ಇದುವರೆಗೆ 1136 ಕರೆಗಳು ಬಂದಿವೆ. ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಮೇಲೂ ಸಹ ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎಂದಿದ್ದಾರೆ.

    ಪುನರ್ವಸತಿ ಕೇಂದ್ರ ತಪಾಸಣಾಧಿಕಾರಿ : ಉಡುಪಿ: ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರಿಗೆ ಊಟೋಪಚಾರ ಸಲುವಾಗಿ ಜಿಲ್ಲಾಡಳಿತ ವತಿಯಿಂದ ಬೈಂದೂರು, ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆದು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರಗಳಲ್ಲಿನ ವ್ಯವಸ್ಥೆ ಪರಿಶೀಲಿಸಿ ವರದಿ ನೀಡಲು ತಪಾಸಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ತಾಲೂಕು ತಹಸೀಲ್ದಾರ್ ಹಾಗೂ ಉಡುಪಿ ನಗರಸಭೆ ಆಯುಕ್ತರ ಸಮನ್ವಯದೊಂದಿಗೆ ಪುನರ್ವಸತಿ ಕೇಂದ್ರಗಳನ್ನು ಚೆಕ್‌ಲಿಸ್ಟ್ ಪ್ರಕಾರ ತಪಾಸಣೆ ನಡೆಸಿ ವರದಿ ನೀಡಲಿದ್ದಾರೆ. ಕೇಂದ್ರಗಳ ಪರಿಶೀಲನೆಗೆ ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿಯಾಗಿ ಆನಂದಪ್ಪ ನಾಯ್ಕ(ದೂ.ಸಂ. 9901531594) ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts