More

    ಕರೊನಾ ಪಾಸ್ ಹಣೆಪಟ್ಟಿ ಬೇಡ

    ತುಮಕೂರು: ನಿಮಗೆಲ್ಲ ಪರೀಕ್ಷೆ ಬೇಕೋ, ಬೇಡವೋ? ಪರೀಕ್ಷೆ ಇಲ್ಲದೆ ಪಾಸ್ ಮಾಡುವ ನಿರ್ಧಾರ ಕೈಗೊಳ್ಳಬೇಕೇ? ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಪ್ರಶ್ನಿಸಿದಾಗ ಮಠದ ವಿದ್ಯಾರ್ಥಿಗಳಿಂದ ಬಂದ ಉತ್ತರ ಪರೀಕ್ಷೆ ಬೇಕು!

    ಸಿದ್ಧಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ಓದುತ್ತಿರುವ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಸಚಿವರಿಗೆ ಮೊದಲು ಎದುರಾದ ಪ್ರಶ್ನೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ.
    ಸರ್ ಟಿವಿ ಚಾನೆಲ್ನಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಲಾಗುವುದೆಂದು ಸುದ್ದಿ ಬಂದಿದೆ. ಇದು ನಿಜಾನಾ ಸರ್ ಎಂದು ವಿದ್ಯಾರ್ಥಿಯೊಬ್ಬ ಕೇಳಿದ.

    ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಇಬ್ಬರೂ ಇದ್ದಾರೆ. ಪರೀಕ್ಷೆಗಳ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವುಗಳೇ ತೆಗೆದುಕೊಳ್ಳಬೇಕಲ್ಲವೇ? ಆದರೆ, ನಾವು ಆ ರೀತಿ ತೀರ್ಮಾನ ಕೈಗೊಂಡಿಲ್ಲ. ನಿಮಗೆಲ್ಲ ಪರೀಕ್ಷೆ ಬೇಕೋ, ಬೇಡವೋ? ಪರೀಕ್ಷೆ ಮಾಡದೆ ನಿಮ್ಮನ್ನೆಲ್ಲ ಪಾಸ್ ಮಾಡಬೇಕೆ ಎಂದು ಸಚಿವರು ಮಕ್ಕಳನ್ನು ಮರುಪ್ರಶ್ನಿಸಿದರು. ಇದಕ್ಕೆ ಒಕ್ಕೊರಲಿನಿಂದ ನಮಗೆಲ್ಲ ಪರೀಕ್ಷೆ ಬೇಕು ಎಂದರು. ವಿದ್ಯಾರ್ಥಿಯೊಬ್ಬ ಸಾರ್ ನಮ್ಗೆ ಕರೊನಾ ಪಾಸ್ ಎಂಬ ಹಣೆಪಟ್ಟಿ ಬೇಡ ಎಂದಾಗ ಸಚಿವರೇ ಅಚ್ಚರಿಗೊಳಗಾದರು.
    ವಿದ್ಯಾರ್ಥಿಗಳು ಕೇವಲ ಪ್ರಶ್ನೆ ಪತ್ರಿಕೆಗಳಿಗೆ ಸೀಮಿತವಾಗಿ ಅಧ್ಯಯನ ಮಾಡದೆ ಇಡೀ ಪಠ್ಯಪುಸ್ತಕವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಅಭ್ಯಾಸ ನಡೆಸಿ. ಪರೀಕ್ಷೆ ಯಾವಾಗಲಾದರೂ ನಡೆಯಲಿ ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎಂಬ ಮನೋಸ್ಥೈರ್ಯ ಮತ್ತು
    ಆತ್ಮವಿಶ್ವಾಸ ರೂಢಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ.ಜಗದೀಶ್ ಕಿವಿಮಾತು ಹೇಳಿದರು.

    ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ತುಮಕೂರು ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕಿ ಕಾಮಾಕ್ಷಮ್ಮ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ರೇವಣಸಿದ್ದಪ್ಪ ಇತರರಿದ್ದರು.

    ಮರು ಮನನ ತರಗತಿ ಪ್ರಾರಂಭ: ರಾಜ್ಯದಲ್ಲಿ 8.50 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಪೋನ್‌ಇನ್ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವುದರ ಜತೆಗೆ ಪರೀಕ್ಷೆ ನಡೆಯುವವರೆಗೆ ಸಂಯಮ ಕಾಪಾಡಿಕೊಳ್ಳುವಂತೆ ಧೈರ್ಯ ಹೇಳಲಾಗುತ್ತಿದೆ. ತಡವಾದರೂ ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಿ ಹಾಗೂ ಪರೀಕ್ಷೆಯ ಮುನ್ನ ಪುನರ್‌ಮನನ ತರಗತಿಗಳನ್ನು ನಡೆಸಿ ಪರೀಕ್ಷೆ ನಡೆಸುವ ದಿನವನ್ನು ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಪ್ರಕಟಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

    ಜೀವನ ಪರೀಕ್ಷೆ ಗೆಲ್ಲಿ: ಕರೊನಾ ಬಗ್ಗೆ ಯಾರೂ ಬೇಜಾರು ಮಾಡಿಕೊಳ್ಳಬೇಡಿ. ಸಂಯಮದಿಂದ ಇದ್ದು ಮಹಾಮಾರಿಯನ್ನು ಸಮರೋಪಾದಿಯಲ್ಲಿ ಗೆದ್ದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಯಾಗಿ. ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯದ ಬಗ್ಗೆಯೂ ಸಹ ಗಮನಹರಿಸಬೇಕು. ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವೇ ಧನ್ಯರು ಎಂದು ಸುರೇಶ್ ಕುಮಾರ್ ಹೇಳಿದರು. ಶ್ರೀಮಠದಲ್ಲಿ 1320 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.

    ವಿಷಯಾಧಾರಿತ ಮಾಲಿಕೆ ಪ್ರಸಾರ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಯು ಈ ವೇಳೆಗಾಗಲೆ ಮುಗಿದು ವಿದ್ಯಾರ್ಥಿಗಳು ರಜೆಯಲ್ಲಿ ಇರುತ್ತಿದ್ದರು. ಆದರೆ, ಲಾಕ್‌ಡೌನ್ ಜಾರಿಯಿಂದಾಗಿ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷೆ ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಚಂದನ ವಾಹಿನಿಯಲ್ಲಿ 2-3 ದಿನಗಳಲ್ಲಿ ಪರೀಕ್ಷೆ ಬರೆಯುವ ಕುರಿತು ವಿಷಯಾಧಾರಿತ ಸರಣಿ ಮಾಲಿಕೆ ಪ್ರಸಾರಪಡಿಸಲಾಗುವುದು ಎಂದರು.

    ಹಂಗಿಸ್ತಾರೆ ಸಾರ್!: ಪರೀಕ್ಷೆ ಏಕೆ ಮಾಡಬೇಕು? ಹಾಗೆಯೇ ಏಕೆ ಪಾಸ್ ಮಾಡಬಾರದು? ಎಂಬ ಸಚಿವ ಸುರೇಶ್ ಕುಮಾರ್ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ, ನಾವು ವರ್ಷವಿಡೀ ಓದಿದ್ದೇವೆ. ನಮ್ಮ ಪರಿಶ್ರಮದಿಂದಲೇ ನಮಗೆ ಫಲಿತಾಂಶ ಸಿಗಬೇಕು. ಇಲ್ಲದಿದ್ದರೆ ನಮ್ಮನ್ನು ಎಲ್ಲರೂ ಕರೊನಾ ಪಾಸ್ ಎಂದು ಹಂಗಿಸುತ್ತಾರೆ ಎಂದಾಗ ಸಚಿವರು ಆಶ್ಚರ್ಯಚಕಿತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts