More

    1.62 ಲಕ್ಷ ಅಮ್ಮಂದಿರಿಗೆ ವ್ಯಾಕ್ಸಿನ್ ; 6 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ

    ಗುಬ್ಬಿ : ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಲಾಗಿದ್ದು, 0-6 ವರ್ಷದ 162451 ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಲಸಿಕಾ ಮೇಳ ಆರಂಭದಲ್ಲಿ ಸಾಕಷ್ಟು ಗೊಂದಲದ ಗೂಡಾಗಿತ್ತು. ದೇಶಾದ್ಯಂತ ಸೋಮವಾರದಿಂದ ಸರ್ವರಿಗೂ ಉಚಿತ ಲಸಿಕೆ ಅಭಿಯಾನ ಆರಂಭವಾಗಿದ್ದು, ಜಿಲ್ಲೆಯಲ್ಲಿ 6 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಆ ಮೂಲಕ ಕರೊನಾ 3ನೇ ಅಲೆ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಸರ್ವರಿಗೂ ಉಚಿತ ಲಸಿಕೆ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟವರಿಗೆಲ್ಲ ಲಸಿಕೆ ಹಾಕಲಾಗುತ್ತಿದ್ದು, ಆದ್ಯತೆಯಾಗಿ ಸಣ್ಣ ಮಕ್ಕಳ ತಾಯಂದಿರನ್ನು ಪರಿಗಣಿಸಲಾಗಿದೆ.

    1.62 ಲಕ್ಷ ತಾಯಂದಿರು: ಜಿಲ್ಲೆಯಲ್ಲಿ 0-6 ವರ್ಷದ 1,62,451 ಮಕ್ಕಳ ತಾಯಂದಿರಿಗೆ ಲಸಿಕೆ ನೀಡಲಾಗುತ್ತಿದ್ದು, ಸೋಮವಾರ ಲಸಿಕಾ ಕೇಂದ್ರಗಳಲ್ಲಿ ದೊಡ್ಡಮಟ್ಟದ ಗೊಂದಲ ಏರ್ಪಟ್ಟಿತ್ತು. ತಾಯಂದಿರಿಗೆ ಕಡ್ಡಾಯವಾಗಿ ಪಿಡಿಒ ಶಿಫಾರಸು ಪತ್ರ ತರುವಂತೆ ತಾಲೂಕಿನ ಕೆಲವು ಲಸಿಕಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ವಾಗ್ವಾದ ನಡೆಯಿತು. ಕೊನೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಗೊಂದಲ ತಿಳಿಗೊಂಡಿತು.
    ಅದೇರೀತಿ 14 ವರ್ಷದೊಳಗಿನ 3,28,296 ಮಕ್ಕಳಿದ್ದು ಅಷ್ಟು ತಾಯಂದಿರಿಗೆ ಲಸಿಕಾ ಮೇಳದಲ್ಲಿ ಆದ್ಯತೆ ನೀಡಲಾಗುತ್ತಿದೆ. 18 ವರ್ಷ ಹಾಗೂ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕಲಾಗುತ್ತಿದ್ದು, ವಿಶ್ವದ ಅತಿದೊಡ್ಡ ಅಭಿಯಾನದಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುವುದು. 3ನೇ ಅಲೆಯಲ್ಲಿ ಕರೊನಾ ಸೋಂಕು ಮಕ್ಕಳನ್ನು ಬಾಧಿಸಲಿದ್ದು ಈ ಮಕ್ಕಳ ತಾಯಂದಿರಿಗೆ ಲಸಿಕಾಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ.\

    18 ಸಾವಿರ ಹಾಲುಣಿಸುವ ತಾಯಂದಿರು : ಕರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 18 ಸಾವಿರ ಹಾಲುಣಿಸುವ ತಾಯಂದಿರನ್ನು ಗುರುತಿಸಿದ್ದು ಅವರಿಗೆ ಆದ್ಯತೆ ಮೇಲೆ ಲಸಿಕೆ ಹಾಕಲಾಗುವುದು. ಅದೇ ರೀತಿ 6 ವರ್ಷದೊಳಗಿನ 162451 ಮಕ್ಕಳು ಜಿಲ್ಲೆಯಲ್ಲಿದ್ದು, ಅವರಲ್ಲಿ 8136 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 1ರಿಂದ 10ನೇ ತರಗತಿಯ 191289 ಗಂಡು ಮಕ್ಕಳು, 174450 ಹೆಣ್ಣು ಮಕ್ಕಳು, ಒಟ್ಟು 365739 ಮಕ್ಕಳಿದ್ದು ಅವರೆಲ್ಲರನ್ನೂ ತೀವ್ರ ನಿಗಾವಹಿಸಲು ಕ್ರಮವಹಿಸಲಾಗಿದೆ.

    ಅಂಗನವಾಡಿ ಕೇಂದ್ರಗಳ ಫಲಾನುಭವಿ 0-6 ವರ್ಷದೊಳಗಿನ 162451 ಮಕ್ಕಳ ತಾಯಂದಿರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಆರಂಭದಲ್ಲಿ ಪಿಡಿಒ ಶಿಫಾರಸು ಪತ್ರ ತರಬೇಕೆಂಬ ಗೊಂದಲ ಕೆಲವು ಕಡೆ ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಸರಿಪಡಿಸಲಾಗಿದೆ.
    ಎಸ್.ನಟರಾಜು, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts