More

    ನಿರ್ಲಕ್ಷ್ಯ ಧೋರಣೆ ತಳೆದ ಸಿಬ್ಬಂದಿ – ಬಿಸಿಯೂಟಕ್ಕೆ ಕಳಪೆ ಧಾನ್ಯ ಬಳಕೆ

    ಜಮಖಂಡಿ(ಗ್ರಾ): ತಾಲೂಕಿನ ಹುನ್ನೂರು ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಕಳಪೆ ಧಾನ್ಯ ಬಳಕೆ ವಿಷಯ ಈಗ ತೀವ್ರ ಚರ್ಚೆ ಹುಟ್ಟು ಹಾಕಿದೆ.

    ಕಳೆದ ವರ್ಷ ಕರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲೆಂದು ಸರ್ಕಾರ ಪೂರೈಸಿದ ಅಕ್ಕಿ ಹಾಗೂ ಬೇಳೆಯನ್ನು ಮಕ್ಕಳಿಗೆ ಹಂಚದೆ ಬಿಸಿಯೂಟದ ಸಂಗ್ರಹಣಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿದ್ದು, ಶಾಲೆ ಹಾಗೂ ಅಡುಗೆ ಸಿಬ್ಬಂದಿ ಸಮರ್ಪಕವಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ಧೋರಣೆ ತಾಳಿದ್ದರಿಂದ ಅಕ್ಕಿಗೆ ಗೊಂಡಿ ಜತೆಗೆ ಹುಳು ಹಿಡಿದಿವೆ. ತೊಗರಿ ಬೇಳೆ ಪುಡಿ ಪುಡಿಯಾಗಿವೆ. ಪ್ರೌಢಶಾಲೆ ಮುಖ್ಯಶಿಕ್ಷಕ, ಬಿಸಿಯೂಟದ ಮೇಲ್ವಿಚಾರಕ ಹಾಗೂ ದಾಸೋಹ ಸಿಬ್ಬಂದಿ ಮುಖ್ಯಸ್ಥರು ಧಾನ್ಯದ ಗುಣಮಟ್ಟ ಪರಿಶೀಲಿಸದೆ ಸಂಗ್ರಹದಲ್ಲಿರುವ ಕಳಪೆ ಧಾನ್ಯವನ್ನೇ ಸ್ವಚ್ಛ ಮಾಡಿಸಿ ಆಹಾರ ಪದಾರ್ಥಕ್ಕೆ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಕರೊನಾ ವೇಳೆ ವಿದ್ಯಾರ್ಥಿಗಳಿಗೆ ಹಂಚದೆ ಉಳಿದ ಧಾನ್ಯದ ಬಗ್ಗೆ ಮೇಲಧಿಕಾರಿಗಳಿಗೂ ಮಾಹಿತಿ ನೀಡಿಲ್ಲ.

    ಪ್ರೌಢಶಾಲೆ ಆವರಣದಲ್ಲಿ ಗುರುವಾರ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಂಡಿದ್ದ ವೇಳೆ ಊರಿನ ಗಣ್ಯರು, ಯುವಕರು ಹಾಗೂ ಗ್ರಾಮಸ್ಥರು ಬಿಸಿಯೂಟದ ಕೊಠಡಿಯತ್ತ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕಳಪೆ ಧಾನ್ಯ ಸಂಗ್ರಹಿಸಿದ್ದ ಕೊಠಡಿಯಿಂದ ಹರಡಿದ ದುರ್ವಾಸನೆ ಹಿನ್ನೆಲೆಯಲ್ಲಿ ಅಲ್ಲಿಗೆ ಹೋದಾಗ ಧಾನ್ಯವೆಲ್ಲ ಹಾಳಾಗಿದ್ದನ್ನು ನೋಡಿ ಗ್ರಾಮಸ್ಥರು ಹೌಹಾರಿದ್ದಾರೆ. ನಮ್ಮ ಮಕ್ಕಳ ಬಿಸಿಯೂಟಕ್ಕೆ ದನಗಳು ಸಹ ಸೇವಿಸದಂತಹ ಧಾನ್ಯ ಬಳಸುತ್ತಿರುವುದನ್ನು ಕಂಡು ಶಾಲೆ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂಗ್ರಹದಲ್ಲಿರುವ ಕಳಪೆ ಧಾನ್ಯವನ್ನು ಬಿಸಿಯೂಟ ತಯಾರಿಸಲು ಬಳಸದಂತೆ ಎರಡ್ಮೂರು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಸದಸ್ಯರು ಶಾಲೆ ಮುಖ್ಯಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿಗೆ ಸೂಚಿಸಿದ್ದರು. ಅವರ ಸೂಚನೆ ಹಿನ್ನೆಲೆಯಲ್ಲಿ ಒಂದು ವಾರದಿಂದ ಕಳಪೆ ಬೇಳೆ ಬದಲು ಹೊಸ ಸ್ಟಾಕ್‌ನಲ್ಲಿದ್ದ ಧಾನ್ಯ ಬಳಸಲಾಗುತ್ತಿತ್ತು. ಆದರೆ, ಅನ್ನ ತಯಾರಿಸಲು ಕಳಪೆ ಅಕ್ಕಿಯನ್ನೇ ಸ್ವಚ್ಛಗೊಳಿಸಿ ಬಳಸಲಾಗುತ್ತಿತ್ತು ಎಂದು ಅಡುಗೆ ಸಿಬ್ಬಂದಿ ಮುಖ್ಯಸ್ಥಳು ಗ್ರಾಮಸ್ಥರ ಎದುರು ಬಾಯಿ ಬಿಟ್ಟಿದ್ದಾಳೆ.

    ಕರೊನಾ ಸಂದರ್ಭದಲ್ಲಿ ಮಕ್ಕಳಿಗೆ ವಿತರಿಸದೆ ಉಳಿಕೆಯಾದ ಧಾನ್ಯದ ಬಗ್ಗೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಸಿಯೂಟ ಆರಂಭಿಸಿದ ಬಳಿಕ ಸರ್ಕಾರ ಶಾಲೆಗೆ ವಿತರಿಸಿದ ಧಾನ್ಯದ ಬಗ್ಗೆಯೂ ಸರಿಯಾದ ಮಾಹಿತಿ ದಾಖಲಿಸಿಲ್ಲ. ಸಂಗ್ರಹದಲ್ಲಿದ್ದ ಕಳಪೆ ಧಾನ್ಯವನ್ನೇ ಬಿಸಿಯೂಟಕ್ಕೆ ಬಳಸಿ ಇತ್ತೀಚೆಗೆ ಪೂರೈಕೆಯಾದ ಧಾನ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.

    ಹಾಳಾದ ಧಾನ್ಯ: ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡದೆ ಅಂದಾಜು ಅಂದಾಜು 2.5ಕ್ವಿಂಟಾಲ್ ಬೇಳೆ, 9.5 ಕ್ವಿಂಟಾಲ್ ಅಕ್ಕಿ ಹಾಳಾಗಿದ್ದು, ಇದಕ್ಕೆ ಯಾರು ಹೊಣೆ ಎಂಬ ಗ್ರಾಮಸ್ಥರ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
    ನಮೂದಾಗದ ಮಾಹಿತಿ: ಬಿಸಿಯೂಟಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ದಿನನಿತ್ಯ ಬಳಕೆಯಾದ ಧಾನ್ಯ, ಊಟ ಮಾಡಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ಕೂಡ ದಾಖಲೆ ಪುಸ್ತಕದಲ್ಲಿ ಸಮರ್ಪಕವಾಗಿ ನಮೂದಿಸಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಸಿಯೂಟಕ್ಕೆ ಪೂರೈಕೆಯಾದ 14 ಕ್ವಿಂಟಾಲ್ ಅಕ್ಕಿಯಲ್ಲಿ 11ಕ್ವಿಂಟಾಲ್ ಅಕ್ಕಿ ಉಳಿದಿದೆ. ಹಾಲಿನ ಪಾಕೆಟ್‌ಗಳ ಸ್ಟಾಕ್ ಅಧಿಕವಿದ್ದು, ಆದರೆ ಎಣ್ಣೆ, ಬೇಳೆ ಸಂಗ್ರಹ ಮಾತ್ರ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts