More

    ಕ್ಯಾಮರಾದಲ್ಲಿ ಹೊಸ ಪ್ರಾಣಿಗಳು ಸೆರೆ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹುಲಿಗಳ ಚಲನವಲನ ಗುರುತಿಸುವ ಹಾಗೂ ದಾಖಲಿಸುವ ಕ್ಯಾಮರಾ ಟ್ರ್ಯಾಪ್ ಸಮೀಕ್ಷೆ ವೇಳೆ ಈ ಭಾಗದಲ್ಲಿ ಹೊಸಬಗೆಯ ಪ್ರಾಣಿಗಳನ್ನು ಕೂಡ ಗುರುತಿಸಲಾಗಿದೆ.

    ಹುಲಿ ಗಣತಿ ನಿಮಿತ್ತ ಈಗಾಗಲೇ ಕ್ಯಾಮರಾ ಟ್ರ್ಯಾಪ್ ಸಮೀಕ್ಷೆ ಪೂರ್ಣಗೊಂಡಿದೆ. ಮೂರು ವಾರಗಳ ಕಾಲ ಆಯಾ ಅರಣ್ಯದ ವಿಸ್ತೀರ್ಣಕ್ಕೆ ಅನುಗುಣವಾಗಿ 100ರಿಂದ 500 ಕ್ಯಾಮರಾ ಅಳವಡಿಸಿ ಹುಲಿಗಳ ಜತೆಜತೆಗೆ ಇತರ ವನ್ಯಜೀವಿಗಳ ಚಿತ್ರ ದಾಖಲಿಸಲಾಗಿದೆ. ಮೊದಲ ಹಂತದಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಓಡಾಟಗಳ ಕುರಿತಾದ ಗುರುತುಗಳು, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಪರಚಿದ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗಿದೆ.

    ಎರಡನೆಯ ಹಂತದಲ್ಲಿ ಕ್ಯಾಮರಾಗಳಲ್ಲಿ ಸೆರೆ ಹಿಡಿಯಲಾಗುವ ಚಿತ್ರಗಳನ್ನು ಆಧರಿಸಿ ಹುಲಿಗಳ ಅಧಿಕೃತ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ದತ್ತಾಂಶವನ್ನು ಕೇಂದ್ರ ಕಚೇರಿಗೆ ರವಾನಿಸಲಾಗಿದೆ. ಇನ್ನಷ್ಟೇ ಹುಲಿಗಳ ಅಧಿಕೃತ ಸಂಖ್ಯೆ ಘೊಷಣೆ ಆಗಬೇಕಿದೆ. ಜತೆಗೆ ಉಳಿದ ಪ್ರಾಣಿಗಳ ಮಾಹಿತಿಯೂ ಅಧಿಕೃತವಾಗಿ ಇಲಾಖೆ ಅಧಿಕಾರಿಗಳ ಕೈಸೇರಲಿದೆ.

    ಮೊದಲ ಬಾರಿಗೆ ಕಂಡ ಕರಡಿ:

    ಸಿದ್ದಾಪುರ ತಾಲೂಕಿನ ತ್ಯಾಗಲಿ ಭಾಗದಲ್ಲಿ ಮೊದಲ ಬಾರಿಗೆ ಕರಡಿಗಳು ಗೋಚರಿಸಿವೆ. ಜೊಯಿಡಾ, ದೇವಿಮನೆ ಘಟ್ಟ ಭಾಗದಲ್ಲಿ ಕಪ್ಪು ಚಿರತೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಜಿಂಕೆಗಳು, ಅಳಿವಿನಂಚಿನಲ್ಲಿದ್ದ ಸಿಂಗಳಿಕಗಳ ಸಂತತಿ ಹೆಚ್ಚಿರುವ ಅಂಶ ಬೆಳಕಿಗೆ ಬಂದಿದೆ ಎಂಬುದು ಅರಣ್ಯ ಇಲಾಖೆ ಮೂಲದ ಮಾಹಿತಿಯಾಗಿದೆ.

    ಸಸ್ಯಹಾರಿಗಳ ಜನನ ಸಂಖ್ಯೆಯಲ್ಲಿ ಸುಧಾರಣೆ:

    ಕೇವಲ ಹುಲಿಗಳ ದಾಖಲೀಕರಣವಲ್ಲದೆ ಇತರ ವನ್ಯಜೀವಿಗಳ ಗುರುತಿಸುವಿಕೆ ಕೂಡ ಮಹತ್ವದ ಕಾರ್ಯವಾಗಿದೆ. ಸಸ್ಯಹಾರಿಗಳ ಜನನ ಸಂಖ್ಯೆಯಲ್ಲಿ ಸುಧಾರಣೆ ಕಂಡು ಬಂದಿದೆ. ಮೀಸಲು ಪ್ರದೇಶದಲ್ಲಿ ಇವುಗಳ ಸಂಖ್ಯೆ ಉತ್ತಮವಾಗಿದೆ. ಲೈನ್ ಟ್ರ್ಯಾನ್ಸೆಕ್ಟ್ ಸಮೀಕ್ಷೆ ಮತ್ತು ನೇರ ಚಿಹ್ನೆ ಸಮೀಕ್ಷೆ ಮೌಲ್ಯಮಾಪನದಲ್ಲಿ ಇದು ನಿರ್ಣಾಯಕ ಭಾಗವಾಗಿದೆ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯವಾಗಿದೆ.

    ಹುಲಿಗಳ ಗಣತಿ ಕೇವಲ ಹುಲಿಗಳ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿಲ್ಲ. ಹುಲಿ ಕೇಂದ್ರಿತವಾಗಿ ಅದರ ಆಹಾರ ಸರಪಳಿಗಳ ಬಗೆಯನ್ನೂ ಒಳಗೊಂಡಿದೆ. ಹೀಗಾಗಿ ಅಳಿವಿನಂಚಿನಲ್ಲಿರುವ ಎಲ್ಲ ಪ್ರಾಣಿಗಳು, ದೇವನಮನೆ-ಅಸೊಳ್ಳಿ-ನೀಲಕುಂದ ಭಾಗದಲ್ಲಿ ಕ್ಷೀಣಿಸುತ್ತಿರುವ ಕಾಡೆಮ್ಮೆಗಳ ಬದುಕಿನ ಬಗೆಗೂ ಈ ಸಮೀಕ್ಷೆಯಲ್ಲಿ ಸ್ಥಾನ ನೀಡಬೇಕು. ಹುಲಿಗಳ ಸಂಖ್ಯೆ ಘೊಷಿಸಿದಂತೆ ಅಳಿವಿನಂಚಿನ ಇತರ ಪ್ರಾಣಿಗಳ ಸಂಖ್ಯೆ ಘೊಷಿಸುವ ಕೆಲಸ ಆಗಬೇಕು.

    |ಶಿವಾನಂದ ಕಳವೆ- ಪರಿಸರ ತಜ್ಞ

    ನಿಯಮಿತ ಗಸ್ತು, ಬೇಟೆ ವಿರೋಧಿ ಶಿಬಿರದ ತಂಡಗಳಿಂದ ಜಾಗರೂಕತೆ ಮತ್ತು ಸ್ಥಳೀಯರನ್ನು ಒಳಗೊಂಡ ಸಂಘಟಿತ ಪ್ರಯತ್ನಗಳು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿವೆ. ಪ್ರಸ್ತುತ ರಕ್ಷಣಾ ಕ್ರಮಗಳು ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಈ ಪ್ರದೇಶವು ಹೆಚ್ಚಿನ ಜೀವ ವೈವಿಧ್ಯತೆ ಹೊಂದಬಹುದು.

    | ಎಸ್.ಜಿ. ಹೆಗಡೆ- ಡಿಎಫ್​ಒ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts