More

    ಚೆಪಾಕ್‌ನಲ್ಲಿ ಇಂದು ದಕ್ಷಿಣ ಆಫ್ರಿಕಾ-ಪಾಕ್ ಮುಖಾಮುಖಿ: ವಿಶ್ವಕಪ್ ಬಳಿಕ ಬಾಬರ್ ತಲೆದಂಡ?

    ಚೆನ್ನೈ: ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲಿನ ಬಳಿಕ ಸಂಪೂರ್ಣವಾಗಿ ಲಯ ತಪ್ಪಿರುವ ಪಾಕಿಸ್ತಾನ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 6ನೇ ಲೀಗ್ ಪಂದ್ಯದಲ್ಲಿ ಶುಕ್ರವಾರ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಟೂರ್ನಿಯ ನೀರಸ ನಿರ್ವಹಣೆಯಿಂದ ನಾಯಕ ಬಾಬರ್ ಅಜಮ್ ತಲೆದಂಡದ ಭೀತಿಯಲ್ಲಿದ್ದಾರೆ. ಚೆಪಾಕ್ ಅಂಗಣದಲ್ಲಿ ಮಾಜಿ ಚಾಂಪಿಯನ್ನರ ಭವಿಷ್ಯ ನಿರ್ಧಾರವಾಗಲಿದೆ.
    ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿರುವ ಹರಿಣ ಪಡೆ, ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಸೆಮೀಸ್‌ಗೆ ಸಮೀಪದಲ್ಲಿದೆ. ಆಫ್ರಿಕನ್ನರಿಗೆ ಕ್ವಿಂಟನ್ ಡಿಕಾಕ್, ಏಡೆನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್ ಬಲವಿದೆ. 4 ಪಂದ್ಯಗಳಲ್ಲಿ 300ಕ್ಕೂ ಅಧಿಕ ರನ್ ಪೇರಿಸಿರುವ ಆಫ್ರಿಕಾ ಬ್ಯಾಟರ್‌ಗಳಿಗೆ ಬೌಲಿಂಗ್ ವಿಭಾಗ ಸೂಕ್ತ ಬೆಂಬಲ ಒದಗಿಸಿದೆ. ಕಗಿಸೋ ರಬಾಡ, ಮಾರ್ಕೋ ಜಾನ್ಸೆನ್ ಉತ್ತಮ ಲಯದಲ್ಲಿದ್ದಾರೆ.
    ಇತ್ತ ಟೂರ್ನಿಯ ಸೆಮೀಸ್ ಹಾದಿ ಕಠಿಣ ಎನಿಸಿದರೂ, ಪಾಕಿಸ್ತಾನಕ್ಕೆ ಇನ್ನೊಂದು ಸೋಲು ಸಂಪೂರ್ಣ ಬಾಗಿಲು ಮುಚ್ಚಲಿದೆ. ಕಳಪೆ ಪ್ರದರ್ಶನದ ಬಿಸಿ ಎದುರಿಸುತ್ತಿರುವ ಬಾಬರ್ ಪಡೆ ಮುಂದಿನ 4 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಚಿದಂಬರಂ ಅಂಗಣದಲ್ಲೇ ಆ್ಘನ್ ಎದುರು ಕಂಡ ಆಘಾತಕಾರಿ ಸೋಲಿನ ಬಳಿಕ ಪಾಕಿಸ್ತಾನ ಪುಟಿದೇಳಬೇಕಿದೆ. ಆಫ್ರಿಕಾ ತಂಡ ಕೇಶವ್ ಮಹಾರಾಜ್ ಜತೆಗೆ ಮತ್ತೋರ್ವ ಸ್ಪಿನ್ನರ್ ತಬರೇಜ್ ಶಮ್ಸಿಯನ್ನೂ ಕಣಕ್ಕಿಳಿಸುವ ನಿರೀಕ್ಷೆ ಇದೆ.

    ವಿಶ್ವಕಪ್ ಬಳಿಕ ಬಾಬರ್ ತಲೆದಂಡ?: ವಿಶ್ವಕಪ್‌ಗೆ ಪಾಕ್ ತಂಡ ರಚನೆಗೆ ನಾಯಕ ಬಾಬರ್ ಅಜಮ್ ಹಾಗೂ ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರೂ, ಇದೀಗ ಲೀಗ್ ಹಂತದಲ್ಲೇ ಹೊರಬೀಳುವ ಭೀತಿ ಎದುರಾಗಿದೆ. ಪಾಕ್ ಸೆಮೀಸ್‌ಗೇರಲು ವಿಲವಾದರೆ ಬಾಬರ್ ಅಜಮ್‌ರನ್ನು ನಾಯಕತ್ವದಿಂದ ಕೆಳಗಿಳಿಸಲಾಗುವುದು ಎಂದು ಪಾಕ್ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.

    ವಿಶ್ವಕಪ್ ಮುಖಾಮುಖಿ-5
    ಪಾಕ್-2
    ದ.ಆಫ್ರಿಕಾ-3

    ಏಕದಿನ ಮುಖಾಮುಖಿ-82
    ಪಾಕ್ -30
    ದ.ಆಫ್ರಿಕಾ- 51
    ರದ್ದು-1
    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts