More

    ಯೇ ದಿಲ್ ಮಾಂಗೇ ಮೋರ್: ‘ಶೇರ್ ಷಾ’ ಕ್ಯಾಪ್ಟನ್ ವಿಕ್ರಂ ಬಾತ್ರಾ..

    ಮಾತೃಭೂಮಿಯ ಸೇವೆಗಾಗಿ ಸೇನೆ ಸೇರಿದ ಎರಡೇ ವರ್ಷದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಮೂಲಕ ತಾಯ್ನೆಲದ ಋಣವನ್ನು ತೀರಿಸುವ ಅಪೂರ್ವ ಅವಕಾಶವನ್ನು ತನ್ನದಾಗಿಸಿಕೊಂಡು, ಕೆಚ್ಚೆದೆಯಿಂದ ಹೋರಾಡಿ ಯುದ್ಧಭೂಮಿಯಲ್ಲೇ ವೀರಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಅವರಂತೆ ಶಹೀದ್ ಜವಾನರು ಎಂದೆಂದಿಗೂ ಅಮರ… ಬಾತ್ರಾರ 22ನೇ ಹುತಾತ್ಮ ದಿನದಂದು (ಜುಲೈ7) ಭಾರತ ಮಾತೆಯ ವೀರ ಸುಪುತ್ರ, ರಾಷ್ಟ್ರ ಭಕ್ತ, ಕ್ಯಾಪ್ಟನ್ ವಿಕ್ರಂರನ್ನು ನೆನಪಿಸಿಕೊಂಡು ಅವರಿಗೆ ಅಕ್ಷರ ನಮನ.

    | ಕಿರಣ್ ಪೈ ಮಂಗಳೂರು

    ತ್ರಿವರ್ಣ ಧ್ವಜ ಅಲ್ಲಿ ಹಾರಿಸಿ ಬರುತ್ತೇನೆ, ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬರುವೆ. ಬರುವುದಂತೂ ಖಂಡಿತಾ ಬರುತ್ತೇನೆ. ಯೇ ದಿಲ್ ಮಾಂಗೇ ಮೋರ್ (ಹೃದಯ ಮತ್ತಷ್ಟು ಬಯಸುತ್ತಿದೆ) ಕ್ಯಾಪ್ಟನ್ ಬಾತ್ರಾರ ವೀರ ನುಡಿಗಳು. ಕೇವಲ 24ರ ವಯಸ್ಸು ಆಗತಾನೆ ವಿಜ್ಞಾನದ ಪದವಿ ಶಿಕ್ಷಣ ಪಡೆದು ಸೈನ್ಯಕ್ಕೆ ಆಯ್ಕೆಯಾದ ತಾಯಿ ಭಾರತಾಂಬೆಯ ವೀರಪುತ್ರ ‘ಕಾರ್ಗಿಲ್ ಹೀರೊ’ ‘ಶೇರ್ ಷಾ’ ಖ್ಯಾತಿಯ, ಪರಮವೀರ ಚಕ್ರ ಕ್ಯಾ.ವಿಕ್ರಂ ಬಾತ್ರಾ ನೆನಪಾಗುತ್ತಾರೆ.

    ಬಾಲ್ಯ, ಶಿಕ್ಷಣ ಹಾಗೂ ಭಾರತೀಯ ಸೈನ್ಯ

    1974, ಸೆಪ್ಟೆಂಬರ್ 9ರಂದು ಹಿಮಾಚಲದ ಬಾತ್ರಾ ದಂಪತಿಗಳಿಗೆ ವಿಕ್ರಮ್-ವಿಶಾಲ್ ಅವಳಿ ಮಕ್ಕಳು ಹುಟ್ಟಿದ ಸಂತಸ, ತಂದೆ ಪಾಲಂಪುರ ಗಿರಿಧರ್ ಲಾಲ್ ಬಾತ್ರಾ ಹಾಗೂ ತಾಯಿ ಕಮಲ್ ಕಾಂತ್ ಬಾತ್ರಾ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಪ್ರಾಥಮಿಕ ಶಾಲೆಯಲ್ಲಿ ತಾಯಿಯಿಂದಲೇ ಶಾಲೆಯಲ್ಲಿ ಶಿಕ್ಷಣ, ನಂತರ ಡಿ.ಎ.ವಿ ಪಬ್ಲಿಕ್ ಶಾಲೆಯ ಪ್ರೌಢ ಶಿಕ್ಷಣ ಹಾಗೂ ಸೆಂಟ್ರಲ್ ಸ್ಕೂಲ್ ಪಾಲಂಪುರನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ವಿಜ್ಞಾನದ ಪದವಿ ಛಂಡಿಗಢದ ಕಾಲೇಜಿನಲ್ಲಿ ಪೂರ್ಣ. ಬಾಲ್ಯದ ದಿನಗಳಲ್ಲಿ ಕ್ರೀಡಾಸಕ್ತಿ, ಕರಾಟೆಯಲ್ಲಿ ಗ್ರೀನ್ ಬೆಲ್ಟ್, ಟೇಬಲ್ ಟೆನ್ನಿಸ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

    ಭಾರತೀಯ ಸೈನ್ಯದ ಬಗ್ಗೆ ವಿಶೇಷ ಆಸಕ್ತಿ, ಅಭಿಮಾನ, ಪದವಿ ಶಿಕ್ಷಣದ ಮೊದಲ ವರ್ಷದಲ್ಲಿ ಎನ್​ಸಿಸಿ ವಾಯುದಳ ಸೇರ್ಪಡೆ. ಅವರು ಉತ್ತರ ಭಾರತದ ಬೆಸ್ಟ್ ಕೆಡೆಟ್ ಎಂದು ಆಯ್ಕೆಯಾದ ಕಾರಣ, ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್‌ಗೆ ಅವಕಾಶ ಸಿಕ್ಕಿತು. ಈ ನಡುವೆ 2 ತಿಂಗಳು ಕರ್ನಾಟಕದ ಬೆಳಗಾವಿಯಲ್ಲಿ ಕಮಾಂಡೋ ಟ್ರೈನಿಂಗ್ ನಂತರ ಲೆಫ್ಟಿನೆಂಟ್ ಆಗಿ ಬಾರಾಮುಲ್ಲ, ಜಮ್ಮು ಕಾಶ್ಮೀರ ರೈಫಲ್ಸ್ ವಿಭಾಗಕ್ಕೆ ಸೇರುವ ಮೂಲಕ ಸೇನಾ ಜೀವನ ಆರಂಭ. ಸೇರಿದ ಒಂದು ವರ್ಷದಲ್ಲಿ ಕ್ಯಾಪ್ಟನ್ ಪ್ರಮೋಷನ್. 24ರ ವಯಸ್ಸಿನಲ್ಲಿ ಇಂತಹ ಅತ್ಯುನ್ನತ ಸಾಧನೆ ನಿಜವಾಗಿಯೂ ಕಲ್ಪನೆಗೂ ಮೀರಿದ್ದು. ಅದೇ ಕಾರಣದಿಂದ ಇವರು ಎಲ್ಲರಿಗೂ ಸ್ಫೂರ್ತಿ. ವಿಕ್ರಮ್ ಯಾವತ್ತೂ ನಗು ಮುಖದ, ರಫ್ ಆ್ಯಂಡ್ ಟಫ್ ಹ್ಯಾಂಡ್ಸಮ್ ಕ್ಯಾಪ್ಟನ್ ಎಂದು ತಮ್ಮ ಗುಂಪಿನಲ್ಲಿ ಫೇಮಸ್.

    1999 ಕಾರ್ಗಿಲ್ ಯುದ್ಧ, ದೇಶದ ಮೂಡ್

    ಮೇ 3, 1999, ಇಂಡೋ ಪಾಕ್ ಕದನದ ಕಾರ್ಮೋಡ… ದೇಶಕಂಡ ಅತ್ಯಂತ ಶಾಂತಿಪ್ರಿಯ, ಅಜಾತಶತ್ರು ಪ್ರಧಾನಿ ವಾಜಪೇಯಿ ಮಾತೃಭೂಮಿ, ಗಡಿ, ಅಸ್ಮಿತೆ ಇವುಗಳ ತಂಟೆಗೆ ಬಂದರೆ ನನ್ನ ಇನ್ನೊಂದು ಮುಖ ನೋಡಬೇಕು ಎಂದು ತೋರಿಸಿ ಕೊಟ್ಟ ನಿದರ್ಶನ. ಅನೇಕ ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ, ಸಾಲದು ಅಂತ ಖುದ್ದು ಪಾಕಿಸ್ತಾನಕ್ಕೆ ಭೇಟಿ ಕೊಟ್ಟು ಅಟಲ್ ಅವರು ವ್ಯಾಪಾರ, ಬಾಂಧವ್ಯ ಸರಿಪಡಿಸೋ ಪ್ರಯತ್ನ ಮರೆತ ಪಾಕ್. 1965, 1971ರಲ್ಲಿ ಅನುಭವಿಸಿದ ಮುಖಭಂಗದ ಸೇಡು 1999ರಲ್ಲಿ ತೀರಿಸಿಕೊಳ್ಳವ ವ್ಯರ್ಥ ಪ್ರಯತ್ನ ಮಾಡಿತು. ದ್ರಾಸ್, ಕಾರ್ಗಿಲ್ ಗಡಿಯಲ್ಲಿ ಶತ್ರು ಪಾಳಯ ಬೀಡು ಬಿಟ್ಟಿತು. ಆ ದಿನಗಳ, ಟಿವಿಯಲ್ಲಿ ವಿವಿಧ ನ್ಯೂಸ್ ಚಾನಲ್ ಆಯ್ಕೆ ಇಲ್ಲ, ದೂರದರ್ಶನ ಬಿಟ್ಟರೆ ಒಂದೆರಡು ಖಾಸಗಿ ರಾಷ್ಟ್ರೀಯ ಮಾಧ್ಯಮಗಳು. ವಿಸ್ತೃತ ಮಾಹಿತಿ ಮೂಲ ಕೇವಲ ದಿನಪತ್ರಿಕೆ ಮತ್ತು ವಾರ ಪತ್ರಿಕೆ. ಎಲ್ಲ ಕಡೆ ಜನರ ಬಾಯಲ್ಲಿ ಯುದ್ಧದ ಚರ್ಚೆ. ಈಗಲೂ ನೆನಪಿದೆ, ಹೈಸ್ಕೂಲ್ ಹುಡುಗರಾದ ನಮಗೆಲ್ಲ ಕುತೂಹಲ, ಆತುರ, ಗೆಳೆಯರ ಚರ್ಚೆ. ಅನಗತ್ಯ ಜನ ಸೇರದಂತೆ ಸರ್ಕಾರದ ಆದೇಶ. ಕಾನ್ಪುರ, ಛಂಡೀಗಢ, ದೆಹಲಿ, ಅಲಹಾಬಾದ್, ಮಹಾರಾಷ್ಟ್ರದಿಂದ ಗಡಿಯತ್ತ ಯುದ್ಧ ವಿಮಾನ, ಹೆಲಿಕಾಪ್ಟರ್, ಟ್ಯಾಂಕರ್, ಜವಾನರ ಪಯಣ.

    ಸೈಬರ್ ವಾರ್, ಟ್ವಿಟ್ಟರ್ ವಾರ್, ಸೋಷಿಯಲ್ ಮೀಡಿಯಾ ವಾರ್, ವೈರಸ್ ವಾರ್ ಇತ್ಯಾದಿ ಇರಲಿಲ್ಲ. ಏನಿದ್ದರೂ ಬ್ಯಾಟಲ್ ಫೀಲ್ಡ್​​ನಲ್ಲಿ ನಾನಾ? ನೀನಾ?. ಕಣ್ಣಲ್ಲಿ ಕಣ್ಣಿಟ್ಟು, ಗುಂಡಿಗೆ ಎದೆ ಕೊಟ್ಟು ನೇರಾನೇರ ವಾರ್. ಅದೇ ಸಂದರ್ಭ ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಆಂಗ್ಲರ ನೆಲದಲ್ಲಿ ಸೋಲಿಸಿದಾಗ, 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ರೀತಿ ವಿಜಯೋತ್ಸವ. ಮ್ಯಾಚ್ ಗೆದ್ದಾಯಿತು, ಇನ್ನೇನು ‘ಕಾರ್ಗಿಲ್ ಕೂಡ ನಮ್ಮದೇ ಎಂಬ ಆತ್ಮವಿಶ್ವಾಸ’.

    ತರಗತಿ ನಂತರ ಸಂಜೆಯ ಆಟದ ಬಳಿಕ ಶತ್ರು ರಾಷ್ಟ್ರ ಪಾಕಿಸ್ತಾನ ವಿರೋಧಿ ಘೋಷಣೆ ಎಲ್ಲಿಯವರೆಗೆ ಅಂದ್ರೆ ಶಾಲಾ ಪ್ರಿನ್ಸಿಪಾಲರು ಕೋಲು ಹಿಡಿದು, ಬೈದು ಓಡಿಸೋತನಕ. ಇವೆಲ್ಲ ನಮ್ಮ ಬಾಲ್ಯದ ನೆನಪು. ಗಡಿಯ ಕಾಶ್ಮೀರದಲ್ಲಿ ಅನೇಕ ಭಾರತೀಯ ಸೈನಿಕರು ತಮ್ಮ ಶಕ್ತಿ ಮೀರಿ ಹೋರಾಡಿ ಜನ್ಮಭೂಮಿಗಾಗಿ ಅರ್ಪಿಸಿದ ಇತಿಹಾಸ. ಕಾರ್ಗಿಲ್ ಯುದ್ಧದಲ್ಲಿ ನೂರಾರು ಭಾರತೀಯ ಯೋಧರು ಶೌರ್ಯ, ಪರಾಕ್ರಮ, ಸಾಹಸ ಮೆರೆದು ವೀರ ಮರಣ ಹೊಂದಿದ ಕ್ಷಣ. ಹೆಸರಿಗೆ ತಕ್ಕಂತೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸದಾ ಜನಮಾನಸದಲ್ಲಿ ಅಮರ.

    ಆಪರೇಷನ್ ‘ಟೈಗರ್ ಹಿಲ್’, ಪಾಯಿಂಟ್ 5140

    1999 ಮೇ ಆರಂಭದಲ್ಲೇ ಪಾಕಿಸ್ತಾನದ ಸೈನ್ಯ ಮೋಸದಿಂದ ಅಕ್ರಮವಾಗಿ ಭಾರತದ ಗಡಿಯ ಎಲ್.ಒ.ಸಿ., ಕಾರ್ಗಿಲ್, ದ್ರಾಸ್‌ನ ಅನೇಕ ಶಿಖರ ಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿತ್ತು. ಶತ್ರುಗಳನ್ನು ಹಿಮ್ಮೆಟಿಸಲು ಭಾರತ ಸರ್ಕಾರದಿಂದ ಸೇನೆಗೆ ಪೂರ್ಣ ಸ್ವಾತಂತ್ರೃ ನೀಡಲಾಗುತ್ತದೆ.ಕಾರ್ಗಿಲ್ ಬೆಸ್ ಕ್ಯಾಂಪನಲ್ಲಿ ರಜಪೂತಾನ ರೈಫಲ್ ಉಸ್ತುವಾರಿ, ಹೆಚ್ಚುವರಿ ಕವರ್ ಕೊಡಲು, ಕ್ಯಾಪ್ಟನ್ ಬಾತ್ರಾ ಒಳಗೊಂಡ 13ನೇ ಜಮ್ಮು ಕಾಶ್ಮೀರ ರೈಫಲ್ಸ್ ನೇಮಿಸಲಾಗಿತ್ತು. ಮಿಷನ್ 5140 ವಿಕ್ರಮ್ ಹಾಗೂ ಅವರ ತಂಡಕ್ಕೆ ಆದೇಶ ಸಿಗುತ್ತದೆ. ಅಕ್ರಮವಾಗಿ ಪಾಕ್ ಸೈನಿಕರು ಶಿಖರದ ಮೇಲೆ ಬೀಡು ಬಿಟ್ಟಿರುವುದು ಅಲ್ಲದೇ ಆಧುನಿಕ ಶಸ್ತ್ರಾಸ್ತ್ರಗಳಿಂದ ಎತ್ತರದ ಲಾಭ ಪಡೆದು ಏಕಾಏಕಿ ದಾಳಿ ನಡೆಸುತ್ತಿದ್ದರು. ತೀರಾ ಕಷ್ಟ, ದುರ್ಗಮ ಕಡಿದಾದ ದಾರಿ ಬಾತ್ರಾ ನೇತೃತ್ವದಲ್ಲಿ 5 ಭಾರತೀಯ ವೀರ ಸೈನಿಕರ ತಂಡ ಶಿಖರವೆರಿತು, 3 ಪಾಕ್ ಸೈನಿಕರನ್ನು ವೀರಾವೇಶದಿಂದ ಬಾತ್ರಾ ಒಬ್ಬರೇ ಹೊಡೆದು ಹೋರಾಡಿ ಸಾಯಿಸಿದರು. ಕ್ಯಾಪ್ಟನ್‌ಗೆ ಇದರಿಂದ ತೀವ್ರ ಗಾಯಗಳಾದವು ನೋವನ್ನು ಲೆಕ್ಕಿಸದೆ, ಗಾಬರಿಗೊಳ್ಳದೆ ತಂಡಕ್ಕೆ ಉಳಿದಿರುವ ಪಾಕ್ ಸೈನಿಕರನ್ನು ಸದೆಬಡಿಯುವ ಆದೇಶಕೊಟ್ಟರು. ಕನಿಷ್ಠ 9-10 ಪಾಕ್ ಸೈನಿಕರು ಈ ಕಾಳಗದಲ್ಲಿ ಸೋತು ಜೀವ ಕಳೆದುಕೊಳ್ಳುತ್ತಾರೆ.

    ಕ್ಯಾಪ್ಟನ್ ಬಾತ್ರಾ ಆ್ಯಂಡ್ ಟೀಮ್ ಟೈಗರ್ ಹಿಲ್ 5140 ವಶಪಡಿಸಿಕೊಂಡು ತ್ರಿವರ್ಣ ಧ್ವಜ ಹಾರಿಸಿ, ‘ಚಾಣಕ್ಯ….. ಶೇರ್ ಷಾ ರಿಪೋರ್ಟಿಂಗ್…. ಟೈಗರ್‌ಹಿಲ್ 5140 ಇಸ್ ಇನ್ ಕಂಟ್ರೋಲ್, …ಐ ರಿಪಿಟ್ ಪೋಸ್ಟ್ ಅಂಡರ್ ಕಂಟ್ರೋಲ್… ಯೇ ದಿಲ್ ಮಾಂಗೇ ಮೋರ್’ ಎಂದು ಕಮಾಂಡಿಂಗ್​ ಆಫೀಸರ್‌ಗೆ ಮಾಹಿತಿ ರವಾನಿಸುತ್ತಾರೆ. ಬೇಸ್ ಕ್ಯಾಂಪ್‌ನಲ್ಲಿ ಹಬ್ಬದ ಸಡಗರ. ಅದೇ ದಿನ ಮುಂಜಾನೆ ಬಾತ್ರಾ ತಂದೆಗೆ ದೂರವಾಣಿ ಕರೆ ಮಾಡಿ ತಮ್ಮ ಸಾಧನೆ ಬಗ್ಗೆ ತಿಳಿಸುತ್ತಾರೆ, ನಾವೆಲ್ಲ ಫಿಟ್ ಆಗಿದ್ದೆವೆ ಅಂತಲೂ ಹೇಳುತ್ತಾರೆ. ಇದನ್ನು ಖಾಸಗಿ ವಾಹಿನಿಗೆ ಕೊಟ್ಟ ಸಂದರ್ಶನ ದಲ್ಲಿ ಗಿರಿಧರ್ ಲಾಲ್ ಉಲ್ಲೇಖಿಸಿದ್ದಾರೆ.

    ಮಿಷನ್ ಫೈನಲ್ ಪಾಯಿಂಟ್ 4875

    ಕೇವಲ 9 ದಿನಗಳ ಅಂತರದಲ್ಲಿ ತಮ್ಮ ಜೀವನದ ಬಹು ದೊಡ್ಡ ಕಾರ್ಯಚರಣೆಯ ಜವಾಬ್ದಾರಿ, ಈ ಸಲ ಇನ್ನಷ್ಟು ಹೆಚ್ಚು ಸಂಖ್ಯೆಯ ವೈರಿಗಳು 17000 ಸಾವಿರ ಅಡಿ ಎತ್ತರದ ಶಿಖರ ಪಾಯಿಂಟ್ 4875 ವಶಪಡಿಸಿಕೊಂಡಿದ್ದು, 16000 ಅಡಿಯಿಂದ ದಾಳಿ ಮಾಡುವ ರಣತಂತ್ರದಲ್ಲಿರುವ ಪಾಕ್ ಸೈನಿಕರು, ಇದನ್ನು ಹೇಗಾದರೂ ನಿಷ್ಕ್ರಿಯಗೊಳಿಸುವ ಪ್ರತಿತಂತ್ರದ ಪ್ಲಾನ್ ರೂಪಿಸಿ ಬಾತ್ರಾರ ಬೆಸ್ಟ್ ತಂಡ ಸನ್ನದ್ಧವಾಯಿತು. ಈ ಶಿಖರ ಕಠಿಣಾತಿ ಕಠಿಣ, ದಟ್ಟ ಹಿಮ, ದೇಹ ಮಾತ್ರವಲ್ಲದೆ, ಆತ್ಮ ಕಂಪಿಸುವಂತಹ ಶೀತಲ ಗಾಳಿಯಿಂದ ಉಸಿರಾಟದ ಸಮಸ್ಯೆ. ಒಮ್ಮೆ ದೃಶ್ಯ ಕಲ್ಪನೆ ಮಾಡಿ ನೋಡಿ ಹೆಮ್ಮೆ, ಗೌರವ, ಮೈ ರೋಮಾಂಚನಗೊಳ್ಳುವುದು ಖಂಡಿತ.

    ಈ ಕಾರ್ಯಾಚರಣೆಯ ತಂಡದಲ್ಲಿ, 4875 ಹೀರೊಗಳು ಎಂದು ಕರೆಸಿಕೊಳ್ಳೋ ಲೆಫ್ಟಿನೆಂಟ್ ಅನುನ್ ನಾಯರ್ ಮತ್ತು ಲೆಫ್ಟಿನೆಂಟ್ ನವೀನ್ ಅವರನ್ನೊಳಗೊಂಡಿತ್ತು. ಕಳೆದ ಬಾರಿಯ ಬಾತ್ರಾ ಸಾಹಸ ಕಾರ್ಯಾಚರಣೆ, ಪಾಕ್ ಪಾಳಯದಲ್ಲಿ ಭಯ ಉಂಟು ಮಾಡಿತ್ತು. ವೈರಿ ಸೈನಿಕರು ಹಾಗೂ ಉಗ್ರರು ಈ ಬಾರಿ ವಿಕ್ರಮ್ ತಂಡವನ್ನು ಸೋಲಿಸಲು ಉಪಾಯ, ರಣತಂತ್ರ ಹೆಣೆದಿತ್ತು. ಬಾತ್ರಾರ ತಂಡ ಕೂಡ ಮುಷ್ಕೋಹ್ ಕಣಿವೆ ಭಾಗದಲ್ಲಿದ್ದ ಈ 4875 ಪಾಯಿಟ್, ಅತಿಕ್ರಮಣಕಾರರಿಂದ ಮುಕ್ತಗೊಳಿಸಲು ತಯಾರಾಗಿಯೇ ಹೊರಟರು. ಪ್ರತಿಕೂಲ, ಕಷ್ಟದ ಪರಿಸ್ಥಿತಿಯಲ್ಲಿ ಒಂದು ಕ್ಷಣಕ್ಕೂ ಭಯದಿಂದ ವಿಚಲಿತರಾಗದ ನಮ್ಮ ಯೋಧರು ಜೈ ಮಾತಾದಿ, ಜೈ ದುರ್ಗಾ ಘೋಷ ಹಾಕುತ್ತಾ16 ಸಾವಿರ ಅಡಿಗಳಷ್ಟು ಎತ್ತರವಾಗಿದ್ದ ಶಿಖರವೆರುತ್ತಾರೆ. ವಿಕ್ರಮ್ ತಂಡವನ್ನು ಸದಾ ಹುರಿದುಂಬಿಸಲು ಯೇ ದಿಲ್ ಮಾಂಗೇ ಮೋರ್ ವಾಕ್ಯವನ್ನು ಹೇಳುತ್ತಿದ್ದರು.

    ಭಾರತೀಯ ಸೇನೆಯ ಈ ಪ್ರತಿತಂತ್ರ ಮನಗಂಡು ಕಂಗೆಟ್ಟ ಪಾಕ್ ಸೇನೆ ಮೊದಲೇ ಶಿಖರದ ಆಯಕಟ್ಟಿನ ಜಾಗಗಳನ್ನು ವಶಪಡಿಸಿ ಸೈನಿಕರ ನಿಯೋಜನೆ ಮಾಡಿತ್ತು. ಕಾಯುತ್ತಾ ಕುಳಿತಿದ್ದ ಪಾಕ್ ಯೋಧರು ಗುಂಡಿನ ಮಳೆಯನ್ನೇ ಸುರಿಸಲು ಆರಂಭಿಸಿದರು. ಇದನ್ನೆಲ್ಲಾ ಗಮನಿಸಿದ ಭಾರತೀಯ ತಂಡ ಹಿಮ್ಮೆಟ್ಟಿಕೊಂಡು, ಪಾರಾಗುತ್ತಾ ವೈರಿಪಡೆಯ ಮೇಲೆ ಮರುದಾಳಿ ಮಾಡುತ್ತಾ ಶಿಖರದ ಒಂದೊಂದೇ ಹಂತವನ್ನು ಏರುತ್ತಾರೆ. ಈ ನಡುವೆ ಅಚಾನಕ್ಕಾಗಿ ಶತ್ರು ಸೈನಿಕರ ಗುಂಡೊಂದು ಲೆಫ್ಟಿನೆಂಟ್ ನವೀನ್ ಅವರ ಕಾಲಿಗೆ ತಗಲುತ್ತದೆ. ಕಾಲಿಗೆ ಗುಂಡೇಟು ಬಿದ್ದು ನಡೆಯಲಾಗದ ಸ್ಥಿತಿ. ನವೀನ್ ಅವರನ್ನು ಹೇಗಾದರೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುಲು ಕ್ಯಾಪ್ಟನ್ ಬಾತ್ರಾ ಮುಂದಾದಾಗ ಶತ್ರುಗಳ ಕಣ್ಣು ಬಾತ್ರಾ ಮೇಲೆ ಬೀಳುತ್ತದೆ. ಕ್ಷಣ ಮಾತ್ರದಲ್ಲಿ ವಿಕ್ರಮ್ ಬಾತ್ರಾ ಅವರನ್ನು ಗುರಿಯಾಗಿಸಿ ಶತ್ರು ಸೈನಿಕರು ಅವರ ಮೇಲೆ ಗುಂಡಿನ ಮಳೆಗೈಯುತ್ತಾರೆ. ಒಂದೆಡೆ ಗಾಯಗೊಂಡು ಬಿದ್ದಿರುವ ತನ್ನ ಸಹಚರನ ಪ್ರಾಣ ಕಾಪಾಡುವ ಹೊಣೆಗಾರಿಕೆ ಇನ್ನೊಂದೆಡೆ ತನ್ನ ಪಡೆಗೆ ವಹಿಸಿರುವ ಈ ಶಿಖರವನ್ನು ಮರುವಶಪಡಿಸಿಕೊಳ್ಳಬೇಕಾದ ಜವಾಬ್ದಾರಿ ಅವರ ಮೇಲಿತ್ತು. ಇನ್ನೇನು ಗೆಲುವು ನಮ್ಮದೇ ಎನ್ನುವಷ್ಟರಲ್ಲಿ ಜುಲೈ 7ರ ನಡುರಾತ್ರಿ ವಿಕ್ರಮ್ ಮತ್ತು ಇನ್ನೊಬ್ಬ ಯುವ ಸೇನಾಧಿಕಾರಿ ಅನುಜ್ ನಾಯರ್ ಶತ್ರುಗಳ ಮೇಲೆ ದಾಳಿ ಆರಂಭಿಸಿದರು.

    ನರಿಯಂತೆ ಕುತಂತ್ರದಿಂದ ಬಿಸಾಕಿದ ಗ್ರೇನೆಡ್, ಮೊರ್ಟಾರ್ ಶೆಲ್ ದಾಳಿಯ ಕಾರಣ ಅನುಜ್ ಕಾಲುಗಳಿಗೆ ತೀವ್ರ ಗಾಯವಾದವು. ಆತನನ್ನು ಎತ್ತಿಕೊಂಡು ಬರಲು ಸುಬೇದಾರ್ ಒಬ್ಬರು ತಯಾರಾದಾಗ ವಿಕ್ರಮ್ ತಡೆದು ನಿನಗೆ ಮಕ್ಕಳು ಕುಟುಂಬ ಇದೆ, ಬಾ ಹಿಂದೆ ಹೇಳಿ, ಸ್ವತಃ ಅನುಜ್‌ನನ್ನು ತನ್ನ ಹೆಗಲ ಮೇಲೆ ಹೊತ್ತು ಮುಂದೆ ಸಾಗಿವಾಗ ಏಕಾಏಕಿ ಮಷಿನ್ ಗನ್ ಗುಂಡಿನ ಸುರಿಮಳೆ ವಿಕ್ರಮ್ ಎದೆ, ಸೊಂಟವನ್ನು ಹೊಕ್ಕಿತು. ಆದರೂ ನೆಲಕ್ಕುರುಳುವ ಮುನ್ನ ವಿಕ್ರಮ್ ಮಾಡಿದ ಫೈರ್ ಐವರು ವೈರಿಗಳನ್ನು ಹೊಡೆದು ಉರುಳಿಸಿತು. ಜುಲೈ 7, 1999 ಬೆಳಕು ಹರಿಯುವಷ್ಟರಲ್ಲಿ ಶಿಖರ ನಮ್ಮ ಕೈವಶವಾಯಿತು. ಆದರೆ ವಿಕ್ರಮ್ ಮತ್ತು ಅನುಜ್ ಹುತಾತ್ಮರಾಗಿದ್ದರು.

    ವೀರಾವೇಶ, ಶೌರ್ಯ, ಶಿಸ್ತು, ಸಾಹಸದಿಂದ ಭಾರತೀಯ ಸೇನಾ ಹುಲಿಗಳ ಹೋರಾಟದ ಫಲ, ಜುಲೈ 26, 1999 ಎಲ್ಲ ಆಕ್ರಮಿತ ಕಾಶ್ಮೀರದ ಗಿರಿ ಶೃಂಗ, ಶಿಖರ ಇಂಡಿಯನ್ ಆರ್ಮಿ ಮರಳಿ ವಶಪಡಿಸಿಕೊಂಡಿತು. ಸೇನಾ ತುಕಡಿಗಳಿಂದ ಶಿಖರದ ತುದಿಯಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿ ವಿಜಯೋತ್ಸವ ಸಂಭ್ರಮಾಚರಣೆ. ತಾಯ್ನಡ ರಕ್ಷಣೆಗೆ ತಮ್ಮ ಜೀವದ ಹಂಗು ಬಿಟ್ಟು, ದೇಶವೇ ನಮ್ಮ ಕುಟುಂಬ ಎಂಬ ಭಾವನೆಯಿಂದ ಗಡಿಯಲ್ಲಿ ಪ್ರತಿಯೊಬ್ಬ ಸೈನಿಕ ಮಾಡೋ ಸರ್ವೋಚ್ಚ ತ್ಯಾಗ, ಬಲಿದಾನ ಶ್ರೇಷ್ಠ. ವೀರರ ಕೆಚ್ಚೆದೆಯ ಕಥೆಗಳು ಅಚ್ಚಳಿಯದೆ ನಿರಂತರ ನೆನಪಿರುತ್ತವೆ. ಇಂತಹ ಸೇನಾನಿಗಳು ನಿತ್ಯ, ನಿರಂತರ, ಅಮರ…

    ಪರಮ್ ವೀರ ಚಕ್ರ ಗೌರವ ಪದಕ

    ಯುದ್ಧ ಕ್ಷೇತ್ರದಲ್ಲಿ ಪರಮೋಚ್ಚ ಗೌರವ ಪದಕ ಅದುವೇ ಪರಮ್ ವೀರ ಚಕ್ರ. ಕಾರ್ಗಿಲ್ ಯುದ್ಧಕ್ಕೆ 4 ಪದಕ ನೀಡಲಾಗಿದೆ. ಕ್ಯಾಪ್ಟನ್ ಬಾತ್ರಾ(24), ಲೆಫ್ಟಿನೆಂಟ್ ಮನೋಜ್ ಕುಮಾರ್ (25) ಮರಣಾನಂತರ ಹಾಗೂ ಸುಬೇದಾರ್ ಯೋಗೇಂದ್ರ ಯಾದವ್, ಸುಬೇದಾರ್ ಸಂಜಯ್ ಕುಮಾರ್ ಜೀವಿತಾವಧಿಯಲ್ಲಿಯೇ ಈ ಗೌರವಕ್ಕೆ ಪಾತ್ರರಾದರು.

    ಬಾತ್ರಾರ ಜೀವನಾಧಾರಿತ ಸಿನಿಮಾ

    ಕಾರ್ಗಿಲ್ ಆಧಾರಿತ 2003ರಲ್ಲಿ ತೆರೆಕಂಡ ಬಾಲಿವುಡ್ ಬಹುತಾರಾ ಚಿತ್ರ ‘ಎಲ್.ಒ.ಸಿ ಕಾರ್ಗಿಲ್’. ಈ ಚಿತ್ರದಲ್ಲಿ ಅಭಿಷೇಕ ಬಚ್ಚನ್ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರ ನಿರ್ವಹಿಸಿದ್ದರು. ಚಿತ್ರದಲ್ಲಿ ಬಾತ್ರಾರ ಈ ದಿಲ್ ಮಾಂಗೇ ಮೋರ್ ಅಂದರೆ ಈ ಹೃದಯ ಇನ್ನೂ ಬಯಸುತ್ತದೆ ವಾಕ್ಯವನ್ನು ಹೇಳುವುದು ತೋರಿಸಲಾಗಿದೆ. ಚಿತ್ರವು ಸಂಪೂರ್ಣ ಕಾರ್ಗಿಲ್ ಆಧರಿತ. ಆದರೆ ಇಲ್ಲಿ ಬಾತ್ರಾರ ಬಗ್ಗೆ ಸಂಪೂರ್ಣ ಕಥೆ/ ಮಾಹಿತಿ ಇಲ್ಲ. ಬಾತ್ರಾರ ಸಂಪೂರ್ಣ ಜೀವನಾಧಾರಿತ ಚಿತ್ರ ‘ಶೇರ್ ಷಾ’ ಬಾಲಿವುಡ್ ನಲ್ಲಿ ನಿರ್ಮಾಣವಾಗಿದೆ. ಕ್ಯಾಪ್ಟನ್ ಪಾತ್ರ ಸಿದ್ಧಾರ್ಥ ಮಲೋತ್ರಾ, ಡಿಂಪಲ್ ಪಾತ್ರದಲ್ಲಿ ಕೈರಾ ಅಡ್ವಾಣಿ. 22ನೇ ಕಾರ್ಗಿಲ್ ವಿಜಯ್ ದಿವಸ್, 2021ರ ಜುಲೈನಲ್ಲಿ ತೆರೆಕಾಣಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

    ಜೀವನ ಪರ್ಯಂತ ಕಾಯುವೆ

    ಇಂದಿಗೂ ಅವರಿಗಾಗಿ ಕಾಯುವ ಒಬ್ಬರಿದ್ದಾರೆ, ಅವರೇ ಕಾಲೇಜು ಗೆಳತಿ. ತಾನು ಜೀವನ ಪರ್ಯಂತ ಅವರಿಗಾಗಿ ಕಾಯುವೆ, ಬೇರೆ ಯಾರನ್ನೂ ಮದುವೆಯಾಗಲಾರೆ ಎಂದು ಕ್ಯಾಪ್ಟನ್ ಬಾತ್ರಾ ಶೌರ್ಯದ ಪ್ರಚಾರ ಮಾಡುವ ಅವರೇ ಡಿಂಪಲ್. ವಿಕ್ರಮ್ ಹಾಗೂ ಡಿಂಪಲ್ ನಡುವೆ ಕಾಲೇಜು ದಿನಗಳ ಗೆಳೆತನ ಪ್ರೀತಿಯಲ್ಲಿ ಬದಲಾಗಿತ್ತು. ಜೀವನಾಧಾರಿತ ಪುಸ್ತಕದಲ್ಲಿ ಅವರ ಲವ್ ಸ್ಟೋರಿಯ ಸುಂದರ ನೆನಪುಗಳಿವೆ.

    ‘ಬಾತ್ರಾ ಟಾಪ್’ ಹೆಸರು

    4875 ಶಿಖರಕ್ಕೆ ’ಬಾತ್ರಾ ಟಾಪ್’ಎಂದು ಹೆಸರಿಡಲಾಗಿದೆ. ಅಲಹಾಬಾದ್‌ನ ಮಿಲಿಟರಿ ಕ್ಯಾಂಪಸ್‌ನ ಹಾಲ್ ಗೆ ‘ವಿಕ್ರಮ್ ಬಾತ್ರಾ ಬ್ಲಾಕ್’ ಎಂಬ ನಾಮಕರಣ ಮಾಡಲಾಗಿದೆ. ಜಬಲ್ಪುರದ ಸೇನಾ ವಸತಿ ಸಮುಚ್ಚಯದ ಕಂಟೋನ್ಮೆಂಟ್‌ಗೆ ‘ಕ್ಯಾಪ್ಟನ್ ವಿಕ್ರಮ್ ಬಾತ್ರಾ ಎನ್ಕ್ಲೆವ್’ ಎಂದು ಹೆಸರಿಸಲಾಗಿದೆ. ಇಂಡಿಯನ್ ಮಿಲಿಟರಿ ಅಕಾಡೆಮಿಯ ಮೇಸ್ ಸಂಕೀರ್ಣ, ದೆಹಲಿ ಸರ್ಕಾರ 2019ರಲ್ಲಿ ಮುಕಾರ್ಬಾ ಚೌಕ ಹಾಗೂ ಅಲ್ಲಿನ ಫೈಓವರ್ ಶಹೀದ್ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಚೌಕ ಎಂದು ಮರುನಾಮಕರಣ ಮಾಡಿತು. ಈ ರೀತಿ ಹತ್ತು ಹಲವು ಕಡೆ ಅವರ ಹೆಸರು ಸ್ಥಿರಸ್ಥಾಯಿಯಾಗಿದೆ. ಜೀವ ಅಳಿದರು ಸಾಧನೆಯಿಂದ ಹೆಸರು ಅಜರಾಮರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts