ರಾಯಚೂರು: ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದರಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ ಎಂದು ಎಂಎಲ್ಸಿ ಎನ್.ಎಸ್.ಬೋಸರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ವಿರೋಧ ಪಕ್ಷಗಳು ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸದೆ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ರಾಜ್ಯ ಸರ್ಕಾರ ಕರೊನಾ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದರು.
ರಾಜ್ಯದ 162 ಎಪಿಎಂಸಿ ಹಾಗೂ 360 ಉಪ ಮಾರುಕಟ್ಟೆಯಲ್ಲಿ ರೈತರು ವಹಿವಾಟು ನಡೆಸುತ್ತಿದ್ದರು. ಆದರೆ ವ್ಯಾಪಾರಸ್ಥರು ಹಾಗೂ ಸಂಸ್ಥೆಗಳು ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದಾಗಿದೆ. ಇದರಿಂದ ವ್ಯಾಪಾರಸ್ಥರು ಹಾಗೂ ರೈತರಿಗೆ ತೊಂದರೆಯಾಗಲಿದ್ದು, ಕೂಡಲೇ ಸುಗ್ರೀವಾಜ್ಞೆ ಹಿಂಪಡೆಯಬೇಕು.
ಗ್ರಾಪಂಗಳ ಅವಧಿ ಪೂರ್ಣಗೊಳ್ಳುತ್ತಿದ್ದು, ಸದಸ್ಯರನ್ನು ಮುಂದುವರಿಸದೆ ಸಲಹಾ ಸಮಿತಿ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಪಕ್ಷಾತೀತವಾಗಿರುವ ಗ್ರಾಪಂಗಳಿಗೆ ತಮ್ಮ ಪಕ್ಷದ ಮುಖಂಡರನ್ನು ನೇಮಕ ಮಾಡಲು ಮುಂದಾಗಿದ್ದು, ಸದಸ್ಯರನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಕ್ಷದ ಮುಖಂಡರಾದ ಕೆ.ಶಾಂತಪ್ಪ, ಪಾರಸಮಲ್ ಸುಖಾಣಿ, ಜಯಣ್ಣ, ಜಿ.ಶಿವಮೂರ್ತಿ, ಜಿ.ಬಸವರಾಜರೆಡ್ಡಿ, ತಾಯಣ್ಣ ನಾಯಕ, ಅಮರೇಗೌಡ ಹಂಚಿನಾಳ, ಅಬ್ದುಲ್ ಕರೀಂ, ನರಸನಗೌಡ ಇದ್ದರು.