More

    ಶ್ವಾನಗಳಿಗೆ ಮಿದುಳು, ಕರುಳು ಬೇನೆ

    ಗಣೇಶ್ ಮಾವಂಜಿ, ಸುಳ್ಯ
    ಇತ್ತೀಚಿನ ದಿನಗಳಲ್ಲಿ ಶ್ವಾನಗಳಲ್ಲಿ ಮಿದುಳು ಜ್ವರ(ಕೆನೈನ್ ಡಿಸ್ಟೆಂಪೆರ್) ಹಾಗೂ ಕರುಳು ಬೇನೆ(ಪಾರ್ವೋ ವೈರಲ್ ಗ್ಯಾಸ್ಟ್ರೋಂಟೆರೈಟಿಸ್) ರೋಗ ವಿಪರೀತವಾಗುತ್ತಿದ್ದು, ನಾಯಿಗಳು ಸಾಲು ಸಾಲಾಗಿ ಸಾವನ್ನಪ್ಪುತ್ತಿವೆ. ರೋಗ ಉಲ್ಬಣ ಬಳಿಕ ಜನರು ತಮ್ಮ ನಾಯಿಗಳನ್ನು ಪಶು ಆಸ್ಪತ್ರೆಗೆ ಕೊಂಡುಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು, ಇದರಿಂದ ನಾಯಿಗಳನ್ನು ಉಳಿಸಿಕೊಳ್ಳುವುದು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ.

    ರೋಗಲಕ್ಷಣ: ಮಿದುಳು ಜ್ವರಕ್ಕೆ ಈಡಾಗುವ ನಾಯಿಗಳ ದೇಹದ ಯಾವುದಾದರೂ ಒಂದು ಭಾಗದಲ್ಲಿ ಸ್ನಾಯು ಸೆಳೆತ ಉಂಟಾಗುತ್ತದೆ. ಅದರ ಕಣ್ಣಿನಿಂದ ಹಳದಿ ಬಣ್ಣದ ಕಲ್ಮಶ ಒಸರುತ್ತಿರುತ್ತದೆ. ಕಾಲಿನ ಅಡಿಭಾಗವೂ ಒರಟಾಗುತ್ತದೆ. ಉಸಿರಾಟದ ತೊಂದರೆಯಿಂದಲೂ ಬಳಲುವ ನಾಯಿ ಆಹಾರ ತ್ಯಜಿಸುತ್ತದೆ. ರೋಗ ಉಲ್ಬಣವಾದಾಗ ರಕ್ತದಲ್ಲಿ ಹಿಮೊಗ್ಲೋಬಿನ್‌ನ ಅಂಶ ಕಡಿಮೆಯಾಗಿ ಬಳಿಕ ರೋಗನಿರೋಧಕ ಶಕ್ತಿ ಕುಂದತೊಡಗುತ್ತದೆ. ಇದರಿಂದ ರೋಗ ಪೀಡಿತ ನಾಯಿಗೆ ಇತರ ರೋಗಗಳೂ ಬಂದು ಜೀವ ಕಳೆದುಕೊಳ್ಳುವಂತಾಗುತ್ತದೆ.
    ಕರುಳು ಬೇನೆ ರೋಗ ಸಾಮಾನ್ಯವಾಗಿ ಮರಿನಾಯಿಗಳಿಂದ ತೊಡಗಿ 13 ತಿಂಗಳ ವಯಸ್ಸಿನ ನಾಯಿಗಳಲ್ಲಿ ಕಂಡುಬರುತ್ತದೆ. ರೋಗಾಣು, ನಾಯಿಗಳ ಜಠರ ಹಾಗೂ ಕರುಳನ್ನು ಹೊಕ್ಕಾಗ ವಿಪರೀತ ರಕ್ತಸ್ರಾವ ಉಂಟಾಗುತ್ತದೆ. ಬಳಿಕ ನಿರ್ಜಲೀಕರಣ, ರಕ್ತಹೀನತೆ ಉಂಟಾಗಿ ಚಿಕಿತ್ಸೆಗೆ ಫಲಕಾರಿಯಾಗದ ಸ್ಥಿತಿಗೆ ತಲುಪುತ್ತದೆ. ಇದೇ ವೇಳೆ ರೋಗಪೀಡಿತ ನಾಯಿಗಳಲ್ಲಿ ವಾಂತಿ ಬೇಧಿಯೂ ಕಾಣಿಸಿಕೊಳ್ಳುತ್ತದೆ. ಈ ರೀತಿಯ ರೋಗ ಪೀಡಿತ ನಾಯಿಗಳ ಮಲ ಪ್ರಾರಂಭದಲ್ಲಿ ಹಸಿರು ಬಣ್ಣವಿದ್ದರೆ ಕೊನೆಕೊನೆಗೆ ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ.

    ಯಾವಾಗ ರೋಗ ಕಂಡುಬರುತ್ತದೆ ?: ಜೂನ್-ಜುಲೈ ಹಾಗೂ ಡಿಸೆಂಬರ್-ಜನವರಿಯಲ್ಲಿ ನಾಯಿಗಳಲ್ಲಿ ಸಂತಾನೋತ್ಪತ್ತಿಯಾಗುವ ಕಾಲ. ಈ ತಿಂಗಳುಗಳಲ್ಲಿ ರೋಗಾಣು ನಾಯಿಯಿಂದ ನಾಯಿಗೆ ಹರಡುತ್ತದೆ. ಜೂನ್, ಜುಲೈ ಬಳಿಕದ ಮೂರು ತಿಂಗಳು ಹಾಗೂ ಜನವರಿ ಬಳಿಕದ ಮೂರು ತಿಂಗಳಲ್ಲಿ ರೋಗ ಅಧಿಕವಾಗಿರುತ್ತದೆ.

    ಲಸಿಕೆಯೊಂದೇ ಪರಿಹಾರ: ಸಾಮಾನ್ಯವಾಗಿ ನಾಯಿಗಳಲ್ಲಿ ಕಂಡುಬರುವ ಯಾವುದೇ ರೋಗಗಳಿಗೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ಅದಕ್ಕೆ ಲಸಿಕೆ ನೀಡುವುದೊಂದೇ ಪರಿಹಾರ. ಪಶು ವೈದ್ಯರ ಪ್ರಕಾರ ಆರೋಗ್ಯವಂತ ನಾಯಿಗಳಿಗೆ ಮೂರು ಬಾರಿ ಲಸಿಕೆ ಹಾಕಿಸಬೇಕು. ಸರ್ಕಾರ ಈ ಚುಚ್ಚುಮದ್ದನ್ನು ಪುಕ್ಕಟೆಯಾಗಿ ಪಶುವೈದ್ಯಕೀಯ ಆಸ್ಪತ್ರೆಗೆ ಪೂರೈಕೆ ಮಾಡುತ್ತಿಲ್ಲ. ಆದ್ದರಿಂದ ಜನರು ನಾಯಿಗಳಿಗೆ ಈ ಲಸಿಕೆ ಕೊಡಲು ದುಬಾರಿ ಹಣ (700 ರೂ.ರಂತೆ ಮೂರು ಬಾರಿ) ತೆರಲೇಬೇಕಾಗುತ್ತದೆ.

    ನಾಯಿ ಆಹಾರ ತಿನ್ನದಿರುವಾಗ ಮಾಮೂಲಿ ಹೊಟ್ಟೆನೋವು ಅಥವಾ ಅಜೀರ್ಣ ಆಗಿರಬಹುದೆಂದು ಭಾವಿಸಿದ್ದೆ. ಆದರೆ ಎರಡು ದಿನಗಳ ಬಳಿಕವೂ ಆಹಾರ ಮುಟ್ಟದಿದ್ದಾಗ ವೈದ್ಯರಿಗೆ ರೋಗ ಲಕ್ಷಣ ತಿಳಿಸಿದಾಗ ಮಿದುಳು ಜ್ವರದ ಬಗ್ಗೆ ತಿಳಿಸಿದರು. ಆದರೆ ಮರುದಿನ ನಾಯಿ ಸತ್ತು ಹೋಯಿತು.
    -ರಾಘವೇಂದ್ರ ಕೆ.ಕೆ, ಸುಳ್ಯ

    ಸಾಮಾನ್ಯವಾಗಿ ಮಿದುಳು ಜ್ವರ ಬಾಧಿಸುವ ನಾಯಿಗಳನ್ನು ಜನರು ರೇಬಿಸ್ ರೋಗವಿರಬೇಕೆಂದು ತಪ್ಪಾಗಿ ಭಾವಿಸಿ ಕೊಲ್ಲುತ್ತಾರೆ. ನಾಯಿಗಳಲ್ಲಿ ಇದು ಸಾಂಕ್ರಾಮಿಕ ರೋಗವಾದರೂ ಮನುಷ್ಯರಿಗೆ ಹರಡುವುದಿಲ್ಲ. ರೋಗ ಬರುವ ಮೊದಲೇ ನಾಯಿಗಳಿಗೆ ಲಸಿಕೆ ಹಾಕಿಸಿಕೊಂಡರೆ ಸಂಭಾವ್ಯ ಸಾವಿನಿಂದ ರಕ್ಷಿಸಬಹುದು. ಈ ರೋಗದಿಂದ ನಾಯಿಯ ದೇಹಕ್ಕಾದ ಹಾನಿ ಹಾಗೂ ಅದು ಹೊರಹಾಕುವ ರೋಗಾಣುಗಳು ಅದರ ಜೀವಿತ ಅವಧಿಯವರೆಗೂ ಮುಂದುವರಿಯುತ್ತದೆ.
    -ಡಾ.ನಿತಿನ್ ಪ್ರಭು, ಪಶು ವೈದ್ಯಾಧಿಕಾರಿ (ಆಡಳಿತ),
    ತಾಲೂಕು ಪಶುವೈದ್ಯಕೀಯ ಆಸ್ಪತ್ರೆ, ಸುಳ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts