More

    ಮತದಾರರ ಓಲೈಕೆಗೆ ಜೋರು ಕಸರತ್ತು

    ಆಲ್ದೂರು (ಚಿಕ್ಕಮಗಳೂರು ತಾ.): ಗ್ರಾಪಂ ಚುನಾವಣಾ ಕಣ ಸ್ಪಷ್ಟವಾಗಿದ್ದು, ಮತದಾರರ ಓಲೈಕೆಗೆ ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ. ಇನ್ನೊಂದೆಡೆ ಮಲೆನಾಡು ಭಾಗದಲ್ಲಿ ಕಾಫಿ ಕೊಯ್ಲು ಭರದಿಂದ ಸಾಗಿದ್ದು, ಚುನಾವಣೆಯ ಗೊಡವೆ ಇಲ್ಲದೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

    ಒಂದೊಂದು ವಾರ್ಡ್​ನಲ್ಲೂ ಆರೇಳು ಮಂದಿ ಸ್ಪರ್ಧೆ ಮಾಡಿದ್ದಾರೆ. ಊರಲ್ಲಿ ಎಲ್ಲರೂ ಪರಸ್ಪರ ಪರಿಚಯಸ್ಥರೇ. ಯಾರನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಗೊಂದಲ ಉಂಟುಮಾಡಿದೆ.

    ಮತದಾರರು ಅಭ್ಯರ್ಥಿಗಳ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಬೆಳಗ್ಗೆ ಬಾಗಿಲು ತೆರೆಯುವುದನ್ನೇ ಕಾಯುವಂತಾಗಿದೆ. ಬಹುತೇಕ ಮತದಾರರು ಕಾಫಿ ತೋಟ ಮತ್ತು ಭತ್ತ ಕೊಯ್ಲು ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಮನೆ ಸೇರುವುದೇ ಕತ್ತಲಾದ ಮೇಲೆ. ಇಂತಹ ಸಮಯದಲ್ಲಿ ಅವರನ್ನು ಮಾತನಾಡಿಸಲು ಸಾಧ್ಯವಾಗುವುದಿಲ್ಲ. ಕೆಲವು ಅಭ್ಯರ್ಥಿಗಳು ಭತ್ತದ ಗದ್ದೆಗಳಿಗೂ ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

    ಉದ್ಯೋಗ, ಶಿಕ್ಷಣದ ನಿಮಿತ್ತ ಬೇರೆಡೆ ಇರುವ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಅವರ ಆಪ್ತರ ಬಳಿ ಫೋನ್ ಮಾಡಿಸಿ ಮತದಾನದ ದಿನ ಬಸ್ ಚಾರ್ಜ್ ಕೊಡಿಸುತ್ತೇನೆ, ಬನ್ನಿ ಮತಹಾಕಿ ಎಂದು ಕೇಳುತ್ತಿದ್ದಾರೆ. ನಾಲ್ಕೈದು ಮತಗಳಿದ್ದರೆ ನಿಮಗೆ ಬಾಡಿಗೆ ವಾಹನ ಮಾಡಿ ಕಳಿಸುತ್ತೇವೆ. ನನಗೆ ಮತಹಾಕಿ ಎಂದು ಕೆಲ ಅಭ್ಯರ್ಥಿಗಳು ಓಲೈಕೆಯಲ್ಲಿ ತೊಡಗಿದ್ದಾರೆ.

    ಚರಂಡಿಗಳೆಲ್ಲವೂ ಸ್ವಚ್ಛ: ಪಟ್ಟಣದ ಬಹುತೇಕ ವಾರ್ಡ್​ಗಳಲ್ಲಿ ಚರಂಡಿಗಳಲ್ಲಿ ಕೊಳಚೆ ತುಂಬಿ ದುರ್ನಾತ ಉಂಟಾಗಿದ್ದರೂ ಗಮನಹರಿಸದ ವಾರ್ಡ್ ಸದಸ್ಯರು ಈಗ ತಾವೇ ನಿಂತು ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಕೊಡ ನೀರಿಗಾಗಿ ಪರದಾಡುತ್ತಿದ್ದ ಸಂದರ್ಭ ತಿರುಗಿಯೂ ನೋಡದ ಸದಸ್ಯರು ಈಗ ಮತದಾರರ ಮನೆ ಬಾಗಿಲಿಗೆ ಬಂದು ನಿಮಗೆ ನೀರಿನ ವ್ಯವಸ್ಥೆ ಸಮರ್ಪಕವಾಗಿದೆಯೇ? ಸಮಸ್ಯೆ ಇದ್ದರೆ ಹೇಳಿ ಸರಿಪಡಿಸೋಣ ಎಂದು ಹೇಳಿ ಮನವೋಲೈಸಲಯ ಯತ್ನಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts