More

    ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

    ಹಾವೇರಿ: ಜಿಲ್ಲೆಯ ನಾಲ್ಕು ತಾಲೂಕುಗಳ 105 ಗ್ರಾಪಂಗಳಿಗೆ 2ನೇ ಹಂತದಲ್ಲಿ ಭಾನುವಾರ ನಡೆದ ಮತದಾನದಲ್ಲಿ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತ ಮತದಾನವಾಗಿದೆ.

    ಬೆಳಗ್ಗೆ ಸ್ವಲ್ಪ ಮಂದಗತಿಯಲ್ಲಿದ್ದ ಮತದಾನ ಬೆಳಗ್ಗೆ 10ರ ನಂತರ ಚುರುಕುಗೊಂಡಿತು. ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸಿದ್ದ ಅಭ್ಯರ್ಥಿಗಳು ಸೀರೆ, ಬೆಳ್ಳಿ, ಬಂಗಾರದ ಆಭರಣಗಳ ಉಡುಗೊರೆ ನೀಡಿದ್ದು, ಉಪಾಹಾರ ಹಂಚಿಕೆ ಹಾಗೂ ಮದ್ಯದ ಘಮಲು, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್​ನಿಂದ ತಪಾಸಣೆ ನಡೆಸಲಾಯಿತು.

    ಜಿಲ್ಲೆಯ ನಾಲ್ಕು ತಾಲೂಕುಗಳ 105 ಗ್ರಾಪಂಗಳ 1,461 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೊಷಣೆಯಾಗಿತ್ತು. ಇದರಲ್ಲಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 1,386 ಸ್ಥಾನಗಳ ಆಯ್ಕೆಗೆ ಮತದಾನ ನಡೆಯಿತು. ಒಟ್ಟು 4,969 ಅಭ್ಯರ್ಥಿಗಳು ಕಣದಲ್ಲಿದ್ದರು. ಭಾನುವಾರ 4,37,693 ಮತದಾರರಲ್ಲಿ ಶೇ. 85 ರಷ್ಟು ಮತದಾರರು ಹಕ್ಕು ಚಲಾಯಿಸಿದರು.

    ಬ್ಯಾಡಗಿ ತಾಲೂಕಿನ 18 ಗ್ರಾಪಂಗಳ 83 ಕ್ಷೇತ್ರಗಳ 243 ಸ್ಥಾನಗಳಲ್ಲಿ 16 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 227 ಸ್ಥಾನಗಳಿಗೆ, ಸವಣೂರು 21 ಗ್ರಾಪಂಗಳ 112 ಕ್ಷೇತ್ರಗಳ 313 ಸ್ಥಾನಗಳಲ್ಲಿ 28 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 285 ಸ್ಥಾನಗಳಿಗೆ, ಶಿಗ್ಗಾಂವಿ 27 ಗ್ರಾಪಂಗಳ 120 ಕ್ಷೇತ್ರಗಳ 346 ಸ್ಥಾನಗಳಲ್ಲಿ 21 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 325 ಸ್ಥಾನಗಳಿಗೆ, ಹಾನಗಲ್ಲ 39 ಗ್ರಾಪಂಗಳ 202 ಕ್ಷೇತ್ರಗಳ 559 ಸ್ಥಾನಗಳಲ್ಲಿ 10 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 549 ಸ್ಥಾನಗಳಿಗೆ ಚುನಾವಣೆ ನಡೆಯಿತು.

    ಜಿಲ್ಲೆಯ ನಾಲ್ಕು ತಾಲೂಕುಗಳ ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದವರೆಗೂ ಮತದಾರರು ಸರದಿಯಲ್ಲಿ ನಿಂತಿದ್ದರು. ಮತಗಟ್ಟೆಯ ಹೊರಗಡೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಗುಂಪಾಗಿ ಮತಯಾಚನೆಗೆ ಕೊನೆಯ ಕ್ಷಣದ ಕಸರತ್ತು ನಡೆಸಿದರು. ಮತ ಚಲಾಯಿಸದಿರುವ ಮತದಾರರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಕರೆ ತರುತ್ತಿದ್ದ ದೃಶ್ಯಗಳು ಕಂಡುಬಂದವು.

    ಬೆಳಗ್ಗೆ 9 ಗಂಟೆಗೆ ನಾಲ್ಕು ತಾಲೂಕುಗಳಲ್ಲಿ ಶೇ. 7.40ರಷ್ಟು ಮತದಾನವಾಗಿದ್ದರೆ, 11ಕ್ಕೆ ಶೇ. 22.57ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ. 45.09ರಷ್ಟು, ಮಧ್ಯಾಹ್ನ 3ರ ವೇಳೆಗೆ ಶೇ. 64.66ರಷ್ಟು ಮತದಾನವಾಗಿತ್ತು. ಮೊದಲ ಹಂತದ ಮತದಾನಕ್ಕೆ ಹೋಲಿಕೆ ಮಾಡಿದರೆ 2ನೇ ಹಂತದಲ್ಲಿ ಮಧ್ಯಾಹ್ನ 3ರವರೆಗೆ ಹೆಚ್ಚಿನ ಪ್ರಮಾಣದ ಮತದಾನವಾಗಿದೆ.

    ಸವಣೂರ ತಾಲೂಕು ಕುಣಿಮೆಳ್ಳಿಹಳ್ಳಿ, ಕುರುಬರಮಲ್ಲೂರ, ಮನ್ನಂಗಿ ಗ್ರಾಮದ ಬೂತ್​ಗಳಲ್ಲಿ ಬೆಳಗ್ಗೆ 10ರ ಸುಮಾರು ಶೇ. 10ರಿಂದ 15ರಷ್ಟು ಮತದಾನವಾಗಿತ್ತು. 10 ಗಂಟೆಯ ವೇಳೆಯಲ್ಲಿ ಮತಗಟ್ಟೆಯ ಎದುರು ಯಾರೂ ಸರದಿಯಲ್ಲಿ ನಿಂತಿರಲಿಲ್ಲ. ಹಾನಗಲ್ಲ ತಾಲೂಕು ಬೊಮ್ಮನಹಳ್ಳಿಯಲ್ಲಿ ಬೂತ್​ನ ಹೊರಗಡೆ ಜನಜಾತ್ರೆಯೇ ಸೇರಿತ್ತು. ಅಲ್ಲದೆ, ಮತಗಟ್ಟೆಯ ಎದುರು 25ಕ್ಕೂ ಅಧಿಕ ಜನರು ಸರದಿಯಲ್ಲಿ ನಿಂತಿದ್ದರು. ಈ ಮತಗಟ್ಟೆಯಲ್ಲಿ ಯಾವುದೇ ಪರಸ್ಪರ ಅಂತರ ಪಾಲನೆ ಇರಲಿಲ್ಲ. ಮತಗಟ್ಟೆ ಅಧಿಕಾರಿಗಳು, ಪೊಲೀಸರು ಪರಸ್ಪರ ಕನಿಷ್ಠ 3 ಅಡಿ ಅಂತರದಲ್ಲಿ ನಿಲ್ಲುವಂತೆ ಹೇಳಿದರೂ ಯಾರೂ ಅದನ್ನು ಪಾಲಿಸಲಿಲ್ಲ.

    ಅಕ್ಕಿಆಲೂರ ಹಾಗೂ ಆಡೂರ ಗ್ರಾಮದ ಮತಗಟ್ಟೆಯ ಹೊರಗಡೆ ರಾಜ್ಯ ಹೆದ್ದಾರಿಯಲ್ಲಿಯೇ ಅಭ್ಯರ್ಥಿಗಳು ಟೇಬಲ್ ಹಾಕಿಕೊಂಡು ಮತದಾರರಿಗೆ ಮತ ಚೀಟಿ ಬರೆದುಕೊಡುತ್ತಿದ್ದರು. ಅಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಿ ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸಿದರು.

    ಆರೋಗ್ಯ ತಪಾಸಣೆ…

    ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಗಟ್ಟೆಗೆ ಆಗಮಿಸಿದ ಪ್ರತಿಯೊಬ್ಬ ಮತದಾರರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸಿ ಕೈಗೆ ಸ್ಯಾನಿಟೈಸರ್ ಹಾಕಿ ಮತಗಟ್ಟೆ ಬಳಿ ಬಿಡಲಾಗುತ್ತಿತ್ತು. ಮಾಸ್ಕ್ ಧರಿಸದೇ ಬಂದವರಿಗೆ ಕರವಸ್ತ್ರ ಹಾಗೂ ಸೀರೆ, ವಸ್ತ್ರವನ್ನೇ ಮಾಸ್ಕ್ ಮಾಡಿಕೊಂಡು ಸರದಿಯಲ್ಲಿ ನಿಲ್ಲುವಂತೆ ಸೂಚಿಸಲಾಗುತ್ತಿತ್ತು. ಕೆಲವರು ಆಶಾ ಕಾರ್ಯಕರ್ತೆಯರು ಹೇಳಿದ ಸಮಯದಲ್ಲಿ ವಸ್ತ್ರವನ್ನು ಮಾಸ್ಕ್ ರೀತಿ ಧರಿಸಿ ನಂತರ ಮತಗಟ್ಟೆ ಪ್ರವೇಶಿಸುತ್ತಿದ್ದಂತೆಯೇ ಅದನ್ನು ತೆಗೆಯುತ್ತಿದ್ದರು.

    ಮತಗಟ್ಟೆಯ ಬಳಿಯೇ ಮತಯಾಚನೆ

    ಜಿಲ್ಲೆಯ ನಾಲ್ಕು ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ನಿಯಮ ಮೀರಿ 100 ಮೀ ಪ್ರದೇಶದೊಳಗೆ ಮತದಾರರ ಬಳಿ ತಮಗೆ ಮತ ನೀಡುವಂತೆ ವಿನಂತಿಸುತ್ತಿದ್ದರು. ಕೆಲವೊಮ್ಮೆ ಪೊಲೀಸರು ಇಲ್ಲಿಂದ ದೂರ ಹೋಗಿ ಮತಯಾಚಿಸಿ ಎಂದು ಬೆದರಿಸಿ ಕಳಿಸುತ್ತಿದ್ದರು.

    ಆಟೋ, ಬೈಕ್​ಗಳ ಸಂಚಾರ ಜೋರು

    ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ವೃದ್ಧರು, ಮಹಿಳೆಯರನ್ನು ಆಟೋಗಳಲ್ಲಿ ಮತಗಟ್ಟೆಗಳಿಗೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೊಮ್ಮನಹಳ್ಳಿ, ಕುರುಬರಮಲ್ಲೂರ, ಹುರಳಿಕುಪ್ಪಿಯ ಮತಗಟ್ಟೆಯವರೆಗೂ ಕಾರು, ಆಟೋ, ಬೈಕ್​ಗಳ ಸಂಚಾರ ನಿರಾಂತಕವಾಗಿತ್ತು.

    ಮಾಯವಾದ ಕೋವಿಡ್ ನಿಯಮ

    ಚುನಾವಣೆ ಸಮಯದಯಲ್ಲಿ ಕೋವಿಡ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಯೋಗವು ಸೂಚನೆ ನೀಡಿತ್ತು. ಆದರೆ, ಎಲ್ಲ ಮತಗಟ್ಟೆಗಳಲ್ಲಿ ಜನ ನಿಯಮ ಮರೆತು ಪರಸ್ಪರ ಅಂತರವಿಲ್ಲದೆ ಸರದಿಯಲ್ಲಿ ನಿಂತಿದ್ದರು. ಕೆಲವರು ಮಾಸ್ಕ್ ಧರಿಸಿದ್ದರೆ, ಕೆಲವರು ಧರಿಸಿರಲಿಲ್ಲ. ಅಲ್ಲದೆ, ಮತಗಟ್ಟೆಯೊಳಗೆ ಮೂರು ಜನರಿಗೆ ಮಾತ್ರ ಬಿಡಲು ಅವಕಾಶವಿದ್ದರೂ ಐದಾರು ಜನರು ಒಮ್ಮೆಲೆ ಹೋಗಿ ಅಲ್ಲಿಯೂ ಗುಂಪುಗೂಡಿರುವುದು ಕಂಡುಬಂತು.

    ಕಾಂಚಾಣ ಸದ್ದು ಜೋರು

    ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಕೆಲವರು ಮತದಾರರ ಮನವೊಲಿಕೆಗೆ ಶನಿವಾರ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರು. ಮಹಿಳಾ ಮತದಾರರಿಗೆ ಸೀರೆ, ಕುಕ್ಕರ್ ಹಂಚಿಕೆ ಜೊತೆಗೆ ಮತವೊಂದಕ್ಕೆ 1 ಸಾವಿರದಿಂದ 2 ಸಾವಿರ ರೂ.ಗಳವರೆಗೆ ಹಂಚಿಕೆ ಮಾಡಿರುವುದು ಕೇಳಿಬಂತು.

    ಮದ್ಯದ ವಾಸನೆ: ಪುರುಷ ಮತದಾರರಲ್ಲಿ ಅದರಲ್ಲಿಯೂ ಮತಗಟ್ಟೆಯ ಹೊರಗೆ ಸುತ್ತಾಡುತ್ತಿದ್ದ ಕೆಲವರಲ್ಲಿ ಮದ್ಯದ ಅಮಲು ಜೋರಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts