More

    ಹೊಸನಗರ ಕ್ಷೇತ್ರ ರದ್ದು ಘೋರ ಅನ್ಯಾಯ

    ಹೊಸನಗರ: ನಾಡಿಗಾಗಿ ಸರ್ವ ತ್ಯಾಗ ಮಾಡಿದ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರವನ್ನು ರದ್ದು ಮಾಡಿರುವುದು ಘೋರ ಅನ್ಯಾಯ ಎಂದು ಸಮ್ಮೇಳನಾಧ್ಯಕ್ಷ ಹ.ಅ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
    ತಾಲೂಕಿನ ಬಟ್ಟೆಮಲ್ಲಪ್ಪ ಶ್ರೀ ವ್ಯಾಸಮಹರ್ಷಿ ಗುರುಕುಲದ ಆವರಣದ ಖ್ಯಾತ ಯಕ್ಷಗಾನ ಕಲಾವಿದ ನಗರ ಜಗನ್ನಾಥ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಿದ್ದ ಹೊಸನಗರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
    ವಿದ್ಯುತ್ ಬೆಳಕಿಗಾಗಿ ಹೊಸನಗರ ಸರ್ವ ತ್ಯಾಗ ಮಾಡಿದೆ. ಜನಸಂಖ್ಯೆ ಬರಿದು ಮಾಡಿಕೊಂಡಿದೆ. ಇದನ್ನು ಪರಿಗಣಿಸಿ ಹೊಸನಗರಕ್ಕೆ ವಿಶೇಷ ಆದ್ಯತೆ ನೀಡುವುದನ್ನು ಬಿಟ್ಟು ವಿಧಾನಸಭಾ ಕ್ಷೇತ್ರದ ಮಾನ್ಯತೆಯನ್ನು ರದ್ದು ಮಾಡಿ ಅನ್ಯಾಯ ಮಾಡಲಾಯಿತು. ತಾಲೂಕನ್ನು ಎರಡು ವಿಭಾಗ ಮಾಡಿ ಹರಿದು ಹಂಚಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
    ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಆಗಬೇಕು. ಆಗ ಮಾತ್ರ ಹೊಸನಗರಕ್ಕೆ ನ್ಯಾಯ ಸಿಗುತ್ತದೆ. ಈ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಮಾಡುವಂತೆ ಅವರು ಸಲಹೆ ನೀಡಿದರು. 1972ರಲ್ಲಿ ಬದುಕನ್ನು ಅರಸಿ ಇಲ್ಲಿಗೆ ಬಂದೆ. ಶಿವಮೊಗ್ಗ, ತೀರ್ಥಹಳ್ಳಿ, ಬಾಳೂರು, ಕಾರ್ಗಲ್ ನ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದೆ. ಈ ನಡುವೆ ಸಾಹಿತ್ಯ ಕೃಷಿಯಲ್ಲಿ ತೊಡಗಿದೆ. ಇದನ್ನು ಪರಿಗಣಿಸಿ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿರುವುದು ಬದುಕಿನ ಅವಿಸ್ಮರಣೀಯ ಕ್ಷಣವಾಗಿದೆ ಎಂದರು.
    ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನ ಆರಂಭಕ್ಕು ಮುನ್ನ ರಾಷ್ಟ್ರ ಧ್ವಜ, ನಾಡ ಧ್ವಜ, ಪರಿಷತ್ತಿನ ಧ್ವಜಾರೋಹಣ ನೇರವೇರಿಸಲಾಯಿತು. ಬಳಿಕ ಶ್ರೀರಾಮಕೃಷ್ಣ ವಿದ್ಯಾಲಯದ ಕಲಾತಂಡದೊಂದಿಗೆ ಸಮ್ಮೇಳನಾಧ್ಯಕ್ಷ ಮೆರವಣಿಗೆ ನಡೆಯಿತು. ಹರಿದ್ರಾವತಿ ಗ್ರಾಪಂ ಸದಸ್ಯ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ಮಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ.ನರಸಿಂಹ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಯಕ್ಷಗಾನ ಕಲಾವಿದ ನಗರ ಪ್ರಕಾಶ ಶೆಟ್ಟಿ, ಮಾರುತಿಪುರ ಗ್ರಾಪಂ ಅಧ್ಯಕ್ಷೆ ದೀಪಿಕಾ ಕೃಷ್ಣ, ಉಪಾಧ್ಯಕ್ಷ ಶಂಕರ ಶೆಟ್ಟಿ, ಸದಸ್ಯ ಚಿದಂಬರ ಮಾರುತಿಪುರ, ಪೋಷಕ ಸಮಿತಿ ಅಧ್ಯಕ್ಷೆ ಲತಾ ಕುಮಾರ್, ಸಂತೋಷ ಮಳವಳ್ಳಿ, ಗಣಪತಿ ಮಾಕನಕಟ್ಟೆ, ಇಕ್ಬಾಲ್, ಬಸವರಾಜು, ಪೂರ್ಣಿಮ ಬಸವರಾಜು, ಆರ್.ನಾಗಭೂಷಣ, ಆರ್.ಕುಬೇಂದ್ರಪ್ಪ, ಎಚ್.ಆರ್.ಪ್ರಕಾಶ್, ವೆಂಕಟೇಶಮೂರ್ತಿ, ಉಮೇಶ ಭಟ್ ಇದ್ದರು. ಗುರುಕುಲದ ಮುಖ್ಯಸ್ಥ ಮಂಜುನಾಥ ಬ್ಯಾಣದ ಕಾರ್ಯಕ್ರಮ ನಿರೂಪಿಸಿದರು.
    ಶಿಕ್ಷಣ ಪೇಟೆಯ ಗುಲಾಮರನ್ನಾಗಿಸುತ್ತಿದೆ:
    ಸಮ್ಮೇಳನ ಉದ್ಘಾಟಿಸಿದ ರಂಗಕರ್ಮಿ ಪ್ರಸನ್ನ ಚರಕ, ಶಿಕ್ಷಣ ಎನ್ನುವುದು ಜ್ಞಾನವನ್ನು ಹೆಚ್ಚಿಸಬೇಕು, ಉತ್ತಮ ಪ್ರಜೆಯನ್ನು ರೂಪಿಸಬೇಕು. ಆದರೆ ಇಂದಿನ ಶಿಕ್ಷಣ ಪೇಟೆಯ ಗುಲಾಮಿತನವನ್ನು ಪ್ರೇರೇಪಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಭ್ರಮಾಚರಣೆ ಎಂದರೆ ನಾವು ಕಳೆದುಕೊಂಡಿದ್ದನ್ನು ನೆನಪಿಸಿಕೊಂಡು ಆಚರಿಸುವುದಾಗಿದೆ. ಕನ್ನಡದ ಭಾಷೆ ಅವನತಿಗೆ ಇಳಿದಿದ್ದರೆ, ಕನ್ನಡದ ಗ್ರಾಮಗಳು ಅವನತಿಗೆ ಮುಖ ಮಾಡಿದ್ದರೆ, ಕಾಯಕ ಜೀವಿಗಳು ಇನ್ನಷ್ಟು ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದ್ದರೆ ಕಾರಣ ಏನು ಎಂದು ಹುಡುಕ ಬೇಕಿದೆ. ಗ್ರಾಮಗಳಲ್ಲಿ ಶಕ್ತಿವಂತ ಯುವಕರಿಲ್ಲ. ವೃದ್ಧರ ಆವಾಸಸ್ಥಾನವಾಗುತ್ತಿದೆ. ಕಾರಣ ನಗರೀಕರಣ, ನಗರೀಕರಣದ ವ್ಯಾಮೋಹ ಇದಕ್ಕೆಲ್ಲ ಕಾರಣ ಇದರ ಹಿಂದೆ ಶಿಕ್ಷಣವೂ ಕಾರಣ ಎಂದು ಅಭಿಪ್ರಾಯಿಸಿದರು. ಗಾಂಧಿ, ಅಂಬೇಡ್ಕರ್, ಬಸವಣ್ಣನಾಗಲಿ ಅವರಿಗೆ ಕಣ್ಣುಮುಚ್ಚಿ ನಮಸ್ಕರಿಸುವುದನ್ನು ಮೊದಲು ಬಿಡಿ. ಅವರು ಏಕೆ ಮಹಾತ್ಮರಾದರು. ಅವರ ಬದುಕು ಹೇಗಿತ್ತು. ಅವರ ಬಗ್ಗೆ ಮೊದಲು ತಿಳಿದು ನಂತರ ಕೈಮುಗಿದರೇ ಅದಕ್ಕೊಂದು ಅರ್ಥ ಎಂದು ಸಲಹೆ ನೀಡಿದರು.
    ಬಿದನೂರಿನಲ್ಲಿ ಸ್ತಬ್ಧಚಿತ್ರಕ್ಕೆ ಚಾಲನೆ:
    ತಾಲೂಕು ಸಮ್ಮೇಳನದ ಅಂಗವಾಗಿ ಹೊಸನಗರ ವಿಧಾನಸಭಾ ಕ್ಷೇತ್ರದ ಬಗ್ಗೆ ಜಾಗೃತಿಗಾಗಿ ನೂಲಿಗ್ಗೇರಿ ಗೆಳೆಯರ ಬಳಗ ನಿರ್ಮಿಸಿದ ಆಕರ್ಷಕ ಸ್ತಬ್ಧಚಿತ್ರಕ್ಕೆ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು. ಐತಿಹಾಸಿಕ ಬಿದನೂರು ಕೋಟೆ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಹೊಸನಗರ ಕ್ಷೇತ್ರ ಮರು ಪಡೆಯಲು ಹೋರಾಟ ಅನಿವಾರ್ಯ. ಇಂದು ಹೋರಾಟದ ನೆಲ ಬಿದನೂರಿನಿಂದ ಸ್ತಬ್ಧಚಿತ್ರ ಹೊರಟಿದೆ. ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ನಾಂದಿ ಹಾಡಲಿ ಎಂದು ಹಾರೈಸಿದರು. ಹೊಸನಗರದ್ದು ತ್ರಿಶಂಕು ಸ್ಥಿತಿ. ಅತ್ತ ಸಾಗರವೂ ಅಲ್ಲ. ಇತ್ತ ತೀರ್ಥಹಳ್ಳಿಯೂ ಅಲ್ಲ. ತಾಲೂಕು ಕೇಂದ್ರಕ್ಕೆ ಪೂರಕವಾಗಿ ಕ್ಷೇತ್ರ ಮಾನ್ಯತೆ ಇದ್ದಲ್ಲಿ ಅಭಿವೃದ್ಧಿ ಸಾಧ್ಯ ಎಂದರು. ಬಿದನೂರಿನಿಂದ ಹೊರಟ ಸ್ತಬ್ಧಚಿತ್ರದ ಮೆರವಣಿಗೆ ಹೊಸನಗರ ಮಾರ್ಗವಾಗಿ ಬಟ್ಟೆಮಲ್ಲಪ್ಪದ ಸಮ್ಮೇಳನದ ಅಂಗಳದವರೆಗೆ ಸಾಗಿತು. ಹೊಸನಗರ ಬಸ್ ನಿಲ್ದಾಣದ ಬಳಿ ಪ್ರಮುಖರಾದ ಎನ್.ಆರ್.ದೇವಾನಂದ್, ಶ್ರೀಧರ ಉಡುಪ, ಬಿ.ಎಸ್.ಸುರೇಶ್, ಸಂಕೂರು ಶಾಂತಮೂರ್ತಿ, ಕೆ.ಜಿ.ನಾಗೇಶ್, ಕೇಶವ್ ನೇತೃತ್ವದಲ್ಲಿ ಮೆರವಣಿಗೆಗೆ ಜಯಘೋಷ ಮೊಳಗಿಸುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಪ್ರಮುಖರಾದ ಕರುಣಾಕರ ಶೆಟ್ಟಿ, ಸಾಹಿತಿ ಅಂಬ್ರಯ್ಯಮಠ, ನಾಡಗಂಟಿ ಚಂದ್ರಶೇಖರ್, ಕುಮಾರ ಭಟ್, ಅಶ್ವಿನಿ ಸುಧೀಂದ್ರ ಪಂಡಿತ್, ಮೋಹನ ಶೆಟ್ಟಿ, ಹಲಸಿನಳ್ಳಿ ರಮೇಶ್, ರಾಜೇಶ ಹಿರಿಮನೆ, ಎನ್.ವೈ.ಸುರೇಶ್, ಸತೀಶ ಪಟೇಲ್, ಕಿಶೋರ್ ನಗರ, ಗೆಳೆಯರ ಬಳಗದ ವಕ್ರತುಂಡ ಹರೀಶ್, ಅಬೂಬಕರ್, ಆನಂದ ಶೆಟ್ಟಿ, ಹಂಝಾ ನೂಲಿಗ್ಗೇರಿ ಎಸ್.ಕೆ.ನವೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts