More

    ನಗರೋತ್ಥಾನ ಟೆಂಡರ್ ಕ್ಯಾನ್ಸಲ್ ಮಾಡಿ

    ಭದ್ರಾವತಿ: ನಗರಸಭೆ ಕೌನ್ಸಿಲ್ ಸಾಮಾನ್ಯಸಭೆಯಲ್ಲಿ ಗುರುವಾರ ನಗರದ ಹತ್ತು ಹಲವು ಸಮಸ್ಯೆಗಳ ಚರ್ಚೆಗಳ ನಡುವೆಯೇ 19 ವಿಷಯಗಳಿಗೆ ಅನುಮೋದನೆ ನೀಡಲಾಯಿತು.
    ಸಭೆಯಲ್ಲಿ ಚರ್ಚಾ ವಿಷಯಗಳಿಗೂ ಮುನ್ನ ಚನ್ನಪ್ಪ, ಬಿ.ಕೆ.ಮೋಹನ್, ಬಿ.ಟಿ.ನಾಗರಾಜ್, ಕದಿರೇಶ್, ಉದಯಕುಮಾರ್, ಸುದೀಪ್ ಇತರ ಸದಸ್ಯರು ವಾರ್ಡ್ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದರು.
    ಕಳೆದ ಒಂದೂವರೆ ವರ್ಷದ ಹಿಂದೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಎಲ್ಲ 35 ವಾರ್ಡ್‌ನ ರಸ್ತೆ, ಚರಂಡಿ, ಬೀದಿ ದೀಪಗಳ ಅಳವಡಿಕೆ ಹಾಗೂ ನಾಮಲಕಗಳ ಅಳವಡಿಕೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಆದರೆ ಇಲ್ಲಿಯವರೆಗೂ ಅರ್ಧದಷ್ಟೂ ಕೆಲಸವಾಗಿಲ್ಲ. ಹೀಗಾದರೆ ನಾವು ಸಾರ್ವಜನಿಕರಿಗೆ ಏನೆಂದು ಉತ್ತರ ಕೊಡಬೇಕು. ಮಳೆಗಾಲ ಬಂದರೆ ಕಾಮಗಾರಿ ಕತೆ ಏನು? ಗುತ್ತಿಗೆದಾರನ ಟೆಂಡರ್ ಕ್ಯಾನ್ಸಲ್ ಮಾಡಿ ಕಪ್ಪು ಪಟ್ಟಿಗೆ ಸೇರಿಸಿ. ಬೇರೆ ಟೆಂಡರ್ ಕರೆದು ಶೀಘ್ರ ಕಾಮಗಾರಿ ಮುಗಿಸಿ. ಇಲ್ಲವಾದರೆ ನಗರಸಭೆ ಮುಂಭಾಗ ಪ್ರತಿಭಟನೆ ಕೂರಲಾಗುವುದು ಎಂದು ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    ಗುತ್ತಿಗೆದಾರನ ಅನುಪಸ್ಥಿತಿಯಲ್ಲಿ ಅವರ ಏಜೆಂಟ್ ಅಭಿಲಾಷ್ ಮಾತನಾಡಿ, ಸರ್ಕಾರದ ಆದೇಶದಂತೆ ವಾರ್ಡ್ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಶೇ.50 ಮುಗಿಸಲಾಗಿದೆ. ಮೊದಲ ಹಂತದಲ್ಲಿ ಸಲ್ಲಿಸಲಾಗಿರುವ ಹಣವನ್ನು ಸರ್ಕಾರ ನಮಗೆ ನೀಡುವಲ್ಲಿ ವಿಳಂಬನೀತಿ ಅನುಸರಿಸುತ್ತಿದೆ. ಮೂರು ತಿಂಗಳು ಮಾತ್ರ ಕೆಲಸ ನಿಲ್ಲಿಸಲಾಗಿತ್ತು. ಹಣ ಸಂದಾಯವಾದರೆ ಕೆಲಸ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.
    ಇಂಜಿನಿಯರ್ ಪ್ರಸಾದ್ ಮಾತನಾಡಿ, 19 ಕೋಟಿ ರೂ.ಗಳ ರಸ್ತೆ, ಒಳಚರಂಡಿ ಕಾಮಗಾರಿ ಸೇರಿದಂತೆ ಇತರ ಕಾಮಗಾರಿ ಮುಗಿಸಲು 18 ತಿಂಗಳು ವಾಯಿದೆ ಇದೆ. ಆದರೆ 3 ತಿಂಗಳು ಮಾತ್ರ ಕಾಮಗಾರಿ ನಡೆಯದೆ ವಿಳಂವವಾಗಿದೆ. ಆಗಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ನೋಡುವುದು ಮಾತ್ರ ಬಾಕಿ ಇದೆ. ನಂತರ ಕಾಮಗಾರಿಯ ಹಣ ಬಿಡುಗಡೆಯಾಗಲಿದೆ. ಹಣ ಬಿಡುಗಡೆಗೂ ನಗರಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
    ಅಧ್ಯಕ್ಷೆ ಲತಾ ಚಂದ್ರಶೇಖರ್ ಮಾತನಾಡಿ, ನಗರೋತ್ಥಾನ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಯಾವ ವಾರ್ಡಿನಲ್ಲಿಯೂ ಪೂರ್ಣಗೊಂಡಿಲ್ಲ. ಕಂಟ್ರಾೃಕ್ಟರ್‌ನಿಂದ ಮಾಹಿತಿ ಪಡೆದುಕೊಂಡು ಉಳಿದ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಮುಗಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
    ಪೊಲೀಸ್, ಸಿಡಿಪಿಒ, ಅರಣ್ಯ, ತಹಸೀಲ್ದಾರ್ ಸೇರಿದಂತೆ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸದಸ್ಯರು ಒತ್ತಾಯಿಸಿದರು. ನಗರಸಭೆ ಸದಸ್ಯರು ಹಾಗೂ ತಾಂತ್ರಿಕ ಅಧಿಕಾರಿಗಳ ಅಧ್ಯಯನ ಪ್ರವಾಸ, ಅಂಜುಮನ್ ಕಮಿಟಿಗೆ ನಿವೇಶನ ಮಂಜೂರು, ಫುಟ್‌ಪತ್ ಸುಂಕ ವಸೂಲಾತಿ ಟೆಂಡರ್, ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ನಗರಸಭೆ ಆಸ್ತಿ ಗುರುತಿಸುವಿಕೆ ಸೇರಿದಂತೆ ಸಭೆಯಲ್ಲಿ ಚರ್ಚಿಸಲಾದ 19 ವಿಷಯಗಳಿಗೆ ಸಭೆ ಒಪ್ಪಿಗೆ ಸೂಚಿಸಿತು. ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts