More

    ಮಾಂಸ ಮಳಿಗೆ ಸ್ಥಳಾಂತರಕ್ಕೆ ಚಿಂತನೆ

    ಸುಂಟಿಕೊಪ್ಪ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಅಂಗಡಿ, ಮಳಿಗೆಗಳಲ್ಲಿ ನಡೆಸುತ್ತಿರುವ ಮೀನು, ಕುರಿ, ಕೋಳಿ ಮಾಂಸದ ಮಳಿಗೆಗಳನ್ನು ತೆರವುಗೊಳಿಸಿ ಹಿಂದಿನಂತೆ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ನಡೆಸಲು ಗ್ರಾಮ ಪಂಚಾಯಿತಿಯಿಂದ ಟೆಂಡರ್ ಕರೆದಿದ್ದು, ಇದಕ್ಕೆ ಜನತಾ ಕಾಲನಿ ನಿವಾಸಿಗಳು ಹಾಗೂ ವರ್ತಕರು ಅಪಸ್ವರ ಎತ್ತಿದ್ದಾರೆ.

    ಮಾಂಸದ ಮಾರುಕಟ್ಟೆಯಿಂದ ಅಶುಚಿತ್ವ ಉಂಟಾಗಿ ರೋಗ ಬಾಧಿಸುವ ಆತಂಕದಲ್ಲಿ ಜನತಾ ಕಾಲನಿ ನಿವಾಸಿಗಳು ಇದ್ದರೆ, ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳಿಲ್ಲದೆ ವ್ಯಾಪಾರ ನಡೆಸುವುದು ಕಷ್ಟಸಾಧ್ಯ ಹಾಗೂ ಟೆಂಡರ್ ಮೊತ್ತ ಹೆಚ್ಚಿದೆ ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    2017-18ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನಕ್ಕೆ 2ಲಕ್ಷ ರೂ. ಗ್ರಾಮ ಪಂಚಾಯಿತಿ ಅನುದಾನ ಸೇರಿಸಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 275 ಅನ್ನು ನಿರ್ಮಿಸುವ ವೇಳೆಯಲ್ಲಿ ಸರಿಯಾದ ರೀತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸದೆ ಮಳೆಯ ನೀರು ತರಕಾರಿ ಮಾರುಕಟ್ಟೆ, ಮಾಂಸ ಮಾರುಕಟ್ಟೆ, ಕಾಲನಿ ಮನೆಗಳಿಗೆ ನುಗ್ಗಿ ಸಮಸ್ಯೆ ಉಂಟಾಗುತ್ತಿತ್ತು.

    ಇಲ್ಲಿನ ಅವ್ಯವಸ್ಥೆಯ ಕಾರಣ ಗ್ರಾಮ ಪಂಚಾಯಿತಿ ಈ ಹಿಂದೆ ಖಾಸಗಿ ಅಂಗಡಿಗಳ ಮೂಲಕ, ಹೆದ್ದಾರಿ ಬದಿಯ ಮಳಿಗೆಗಳಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿತ್ತು. ಅದಕ್ಕೆ ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಅದರೆ, ಇದರಿಂದ ಹೆದ್ದಾರಿಯಲ್ಲಿ ಪಾದಚಾರಿಗಳ ಓಡಾಟ ಹಾಗೂ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ನಾಗರಿಕರು ಮಾಂಸ ಮಾರುಕಟ್ಟೆ ಸ್ಥಳಾಂತರಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ಮಾಂಸದ ಅಂಗಡಿಗಳ ತೆರವುಗೊಳಿಸುವಂತೆ ಆದೇಶ ಬಂದ ನಂತರವೂ ಮಾರುಕಟ್ಟೆಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಇಲ್ಲೇ ಮುಂದುವರಿಸಲಾಗಿತ್ತು.

    ಹಳೇ ಮಾರುಕಟ್ಟೆ ಜಾಗದಲ್ಲಿ ಮಳಿಗೆಗಳ ನಡೆಸಲು ಟೆಂಡರ್ ಮೊತ್ತ ಹೆಚ್ಚಿರುವುದರಿಂದ ಇದನ್ನು ಪ್ರಶ್ನಿಸಿ ಕೆಲವು ವರ್ತಕರು ಕೋರ್ಟ್ ಮೆಟ್ಟಿಲು ಏರಿದ್ದರು. ಈ ಎಲ್ಲ ಬೆಳವಣಿಗೆಯ ನಂತರ ಪಂಚಾಯಿತಿಗೆ ಆರ್ಥಿಕ ಕ್ರೋಡೀಕರಣಕ್ಕಾಗಿ ಮಾರುಕಟ್ಟೆಯ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲು ಪಂಚಾಯಿತಿ ಚಿಂತಿಸಿದ್ದು, ಟೆಂಡರ್ ಕರೆದಿದೆ. ಆದರೆ, ಇದಕ್ಕೆ ಜನತಾ ಕಾಲನಿ ನಿವಾಸಿಗಳು ಹಾಗೂ ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts