More

    ಮಕ್ಕಳ ಸಮಸ್ಯೆ ಪರಿಹಾರಕ್ಕೆ ಅಭಿಯಾನ

    ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ: ರಾಜ್ಯ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶಗಳ ಹತ್ತಾರು ಸಮಸ್ಯೆಗಳನ್ನು ಮಕ್ಕಳ ಧ್ವನಿಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾದ ಮಹತ್ವಕಾಂಕ್ಷಿ ಕಾರ್ಯಕ್ರಮವಾಗಿದೆ.

    ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಉದ್ದೇಶದಿಂದ ನ. 14ರಿಂದ ಜನವರಿ 24ವರೆಗೂ 10 ವಾರಗಳ ಕಾಲ ಗ್ರಾಪಂ ಮಟ್ಟದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಸಾಧಿಸಬೇಕಾದ ಗುರಿ ಹಾಗೂ ಸಾಧನೆಗಳ ಚಟುವಟಿಕೆಗಳ ಪಟ್ಟಿ ರೂಪಿಸಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಕೊನೆಯ ವಾರದಲ್ಲಿ ಮಕ್ಕಳನ್ನು ಮುಖ್ಯವಾಗಿಸಿಕೊಂಡು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಜರುಗಲಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಂಡಿದ್ದು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು 10 ವಾರಗಳ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ.

    ಅಭಿಯಾನದಲ್ಲಿ ಪಾಲ್ಗೊಳ್ಳುವ ಸಮಿತಿ: ಗ್ರಾಪಂ ಮಟ್ಟದಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಗ್ರಾಪಂ ಶಿಕ್ಷಣ ಕಾರ್ಯಪಡೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬಾಲವಿಕಾಸ ಸಮಿತಿ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸಾಗಾಟ ನಿಗಾ ವಹಿಸುವ ಸಮಿತಿ, ಗ್ರಾಪಂ ಗ್ರಂಥಾಲಯ, ಗ್ರಾಮ ಆರೋಗ್ಯ ಮತ್ತು ಗ್ರಾಮ ನೈರ್ಮಲ್ಯ ಸಮಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾದ ವಿವಿಧ ಸಮಿತಿಗಳ ಸದಸ್ಯರು ಕಡ್ಡಾಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಿದೆ. ಈ ಎಲ್ಲ ಸಮಿತಿ ಸದಸ್ಯರು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ.

    10 ವಾರಗಳ ಕಾರ್ಯಕ್ರಮ: ಪ್ರತಿ ವಾರಕ್ಕೊಂದರಂತೆ ವಿನೂತನ ಕಾರ್ಯಕ್ರಮ ಹಾಕಿಕೊಂಡಿದೆ. ಮಕ್ಕಳ ಜನನ ನೋಂದಣಿ, ಜನನ ಪ್ರಮಾಣ ಪತ್ರಗಳ ವಿತರಣೆ, ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ ಹಾಗೂ ಜಾಗೃತಿ, ಚುಚ್ಚುಮದ್ದುಗಳ ಪ್ರಾಮುಖ್ಯತೆ, ಮಕ್ಕಳಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆ, ಕಥೆ ಹೇಳುವ ಕಾರ್ಯಕ್ರಮ, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಟೋಟ, ಜನಪದ ಮತ್ತು ರಂಗಭೂಮಿ ಕಾರ್ಯಕ್ರಮ, ಮಾನಸಿಕ, ಆರೋಗ್ಯ ಸಂಬಂಧಿಸಿದ, ಶಿಕ್ಷಣ ವೃತ್ತಿಪರ ಕಾರ್ಯಕ್ರಮ, ಚಿತ್ರಕಲೆ ಸೇರಿದಂತೆ ಹಲವು ಚಟುವಟಿಕೆಗಳು ಮಕ್ಕಳಿಗಾಗಿ ನಡೆಯಲಿವೆ.

    ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಿ ಜ್ಞಾನ ಭಂಡಾರ ಇಮ್ಮಡಿಗೊಳಿಸುವ ಉದ್ದೇಶದಿಂದ ಓದುವ ಬೆಳಕು ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಪುಸ್ತಕಗಳನ್ನು ಸ್ಥಳೀಯ ಗ್ರಂಥಾಲಯದಿಂದ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ 25 ರೂ. ನೀಡಿ ಮಕ್ಕಳ ಸದಸ್ಯತ್ವ ಠೇವಣಿಯೊಂದಿಗೆ ನೋಂದಣಿ ಮಾಡಿಕೊಡಲಿದೆ. ಹೀಗಾಗಿ, ಮಕ್ಕಳು ಪುಸ್ತಕ ಎರವಲು ಪಡೆದು ಓದಬಹುದಾಗಿದೆ.

    ಮಕ್ಕಳ ಧ್ವನಿ ಪೆಟ್ಟಿಗೆಯನ್ನು ಅಂಗನವಾಡಿ, ಶಾಲೆ, ಸಹಕಾರಿ ಸಂಘ, ವಸತಿ ನಿಲಯದಲ್ಲಿ ಅಳವಡಿಸಿದೆ. ಇಲ್ಲಿ ಮಕ್ಕಳು ಶಾಲೆ, ರಸ್ತೆ, ಕುಡಿಯುವ ನೀರು, ವಿದ್ಯುತ್, ಬೀದಿದೀಪ, ಶಾಲಾ ಸಮಸ್ಯೆ, ಶಿಕ್ಷಕರ ಕೊರತೆ, ಹಕ್ಕುಗಳ ಮೊಟಕು, ಮಾನಸಿಕ ಹಿಂಸೆ, ದೌರ್ಜನ್ಯ, ಜೀತಪದ್ಧತಿ, ಮಕ್ಕಳ ಮಾರಾಟ, ಸಾಗಾಟ, ಕೌಟುಂಬಿಕ ಸಮಸ್ಯೆ ಕುರಿತು ಮಾಹಿತಿ, ದೈಹಿಕ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪತ್ರದ ಮೂಲಕ ತಿಳಿಸಬಹುದಾಗಿದೆ. ಬಳಿಕ ಪತ್ರದ ಸಮಸ್ಯೆಗಳನ್ನು ಕಡತದಲ್ಲಿ ನೋಂದಾಯಿಸಿಕೊಂಡು ಸೂಕ್ತ ಪರಿಹಾರಕ್ಕೆ ಯತ್ನಿಸಲಾಗುತ್ತಿದೆ. ಇಲ್ಲಿ ಹಲವು ಸಮಸ್ಯೆಗಳು ಮನೆಯಿಂದ ವಿಧಾನಸೌಧಕ್ಕೂ ಧ್ವನಿ ತಲುಪಿಸುವ ಅವಕಾಶವಿದೆ. ಸಹಾಯವಾಣಿ ಸಂಖ್ಯೆಯನ್ನು ಪೆಟ್ಟಿಗೆಯ ಮೇಲೆ ನಮೂದಿಸಿದೆ.

    ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಕುರಿತು ಯೋಜನೆ ರೂಪಿಸಿದ್ದು, 10 ವಾರಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ವಿವಿಧ ಸಮಿತಿ ಸದಸ್ಯರು, ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಮಕ್ಕಳ ಹಕ್ಕಿಗೆ ಚ್ಯುತಿಯಾಗದಂತೆ ಕಾಯ್ದೆಗಳ ಅನುಷ್ಠಾನ ಮಾಡಲಾಗುತ್ತಿದೆ.

    | ರಮೇಶ ಹುಲಸೋಗಿ ಅಭಿವೃದ್ಧಿ ಅಧಿಕಾರಿ ಹೆಡಿಗ್ಗೊಂಡ ಗ್ರಾಮ ಪಂಚಾಯಿತಿ

    ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಸಮರ್ಪಕವಾಗಿ ಕಾಯ್ದೆ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲ ಪಂಚಾಯಿತಿಗಳಿಗೂ ಸರ್ಕಾರದ ಮಾರ್ಗಸೂಚಿ ಕಳಿಸಿದ್ದು, ಜ. 24ರೊಳಗಾಗಿ ಅನುಷ್ಠಾನಗೊಳಿಸಿ ವರದಿ ನೀಡುವುದು ಕಡ್ಡಾಯವೆಂದು ಸೂಚಿಸಲಾಗಿದೆ. ಸಂಬಂಧಿಸಿದ ಎಲ್ಲ ಅಧಿಕಾರಿಗಳು, ಸಮಿತಿಗಳ ಸದಸ್ಯರು ಪಾಲ್ಗೊಂಡು ಯಶಸ್ವಿಗೊಳಿಸಲು ಸೂಚಿಸಲಾಗಿದೆ.

    | ಎ.ಟಿ. ಜಯಕುಮಾರ ತಾ.ಪಂ. ಇಒ

    ಮಕ್ಕಳಿಗಿರುವ ಹಕ್ಕುಗಳನ್ನು ಜಾಗೃತಿಗೊಳಿಸಿ, ನಮಗೆ ನ್ಯಾಯ ದೊರಕಿಸುವ ಮಹತ್ವದ ಕಾರ್ಯಕ್ರಮವಾಗಿದೆ. ನಮ್ಮ ಸಮಸ್ಯೆಗಳನ್ನು ಪತ್ರದ ರೂಪದಲ್ಲಿ ಬರೆದುಹಾಕುತ್ತಿದ್ದು, ಪರಿಹಾರ ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ಜವಾಬ್ದಾರಿ ವಹಿಸಿದೆ. ನಮಗೂ ಕಾಯ್ದೆ, ಕಾನೂನು, ಹಕ್ಕು ಇತ್ಯಾದಿಗಳ ಅರಿವು ಮೂಡುತ್ತಿದೆ.

    | ಬಸವರಾಜ ಹೆಡಿಗ್ಗೊಂಡ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts