More

    ಕ್ಯಾಮರಾ ಮಾದರಿ ಮನೆ!

    ಬೆಳಗಾವಿ: ಸ್ವಂತದ್ದೊಂದು ಮನೆ ನಿರ್ಮಿಸಬೇಕು, ಆ ಮನೆ ತಾವು ಅಂದುಕೊಂಡ ವಿನ್ಯಾಸದಲ್ಲೇ ಇರಬೇಕು, ತಮ್ಮ ಕಲ್ಪನೆಯಂತೆಯೇ ಮೂಡಿಬರಬೇಕು ಎಂದು ಮನೆ ಕಟ್ಟಿಸುವ ಎಲ್ಲರೂ ಬಯಸುತ್ತಾರೆ. ಆದರೆ, ಕೆಲವರು ಮಾತ್ರ ಅಸಾಧಾರಣ, ಅಪರೂಪ ಹಾಗೂ ವಿಭಿನ್ನವಾದ ಕಲ್ಪನೆಯನ್ನು ಮೂರ್ತ ರೂಪಕ್ಕಿಳಿಸಿ ಮನೆ ನಿರ್ಮಿಸುತ್ತಾರೆ. ಅಂಥದ್ದೊಂದು ಮನೆಯನ್ನು ಬೆಳಗಾವಿ ನಗರದ ಫೋಟೋಗ್ರಾರ್ ರವಿ ಹೊಂಗಲ ನಿರ್ಮಿಸಿದ್ದಾರೆ. ಅವರ ಕ್ಯಾಮರಾ ಮನೆಯ ಚಿತ್ರಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

    ಕ್ಯಾಮರಾ ಆಕಾರದ ಮನೆ: ಬದಲಾಗುತ್ತಿರುವ ಮನುಷ್ಯನ ಅಭಿರುಚಿಗೆ ತಕ್ಕಂತೆ ಮನೆಗಳ ವಿನ್ಯಾಸಗಳು ಕೂಡ ದಿನೇ ದಿನೆ ಬದಲಾಗುತ್ತಿವೆ. ಆರ್ಕಿಟೆಕ್ಟ್ ಇಂಜಿನಿಯರ್‌ಗಳು ದಿನದಿಂದ ದಿನಕ್ಕೆ ಹೊಸ ಹೊಸ ವಿನ್ಯಾಸ ಪರಿಚಯಿಸುತ್ತಾರೆ. ಆದರೆ, ಬೆಳಗಾವಿ ನಗರದ 49 ವಯಸ್ಸಿನ ರವಿ ಹೊಂಗಲ ಅವರು ಕ್ಯಾಮರಾವನ್ನೇ ಹೋಲುವ ಮನೆ ನಿರ್ಮಿಸಿಕೊಂಡಿದ್ದಾರೆ. ಛಾಯಾಗ್ರಾಹಕ ವೃತ್ತಿಯ ರವಿ ಅವರ ಪತ್ನಿ ಕೂಡ ಫೋಟೋಗ್ರಾಪರ್ ಆಗಿದ್ದಾರೆ. ಹೀಗಾಗಿ ವೃತ್ತಿಯಡೆಗಿನ ತುಡಿತವನ್ನು ತಮ್ಮ ಮನೆಯ ರೂಪದಲ್ಲೂ ಬಿಂಬಿಸಿದ್ದಾರೆ. ಒಂದು ಬೃಹತ್ ಕ್ಯಾಮರಾದ ಮಾದರಿ ಇಟ್ಟಂತೆ ತೋರುವ ಅವರ ಮನೆಯೀಗ ವಿಶ್ವದ ಗಮನ ಸೆಳೆಯುತ್ತಿದೆ.

    ನೋಡುಗರ ಸೆಳೆಯುವ ‘ಕ್ಲಿಕ್’: ಫೋಟೋಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ್ದ ರವಿ ಹೊಂಗಲ ಅವರು ಬೆಳಗಾವಿ ಗ್ರಾಮೀಣ ಭಾಗದಲ್ಲಿ ಫೋಟೋ ಕ್ಲಿಕ್ಕಿಸಿ ಸಂಗ್ರಹಿಸುತ್ತಿದ್ದರು. ಬಳಿಕ ಬೆಳಗಾವಿಯಲ್ಲಿ ಸ್ವಂತ ಸ್ಟುಡಿಯೋ ಆರಂಭಿಸಿದರು. ಅವರಿಗಿರುವ ಛಾಯಾಗ್ರಹಣ ಪ್ರೀತಿ ಕನಸಿನ ಮನೆ ನಿರ್ಮಾಣದವರೆಗೆ ಕರೆತಂದಿದೆ. ಅಂದಾಜು 73 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾಗಿರುವ ಮೂರಂತಸ್ತಿನ ಮನೆ ಕ್ಯಾಮರಾದಲ್ಲಿರುವ ಎಲ್ಲ ವಿಭಾಗಗಳನ್ನೂ ಹೊಂದಿದೆ. ಮನೆಗೆ ‘ಕ್ಲಿಕ್’ ಎಂದು ನಾಮಕರಣ ಮಾಡಿದ್ದಾರೆ. ಕಿಟಕಿಗಳೇ ಲೆನ್ಸ್ ಆಗಿವೆ. ಇದಷ್ಟೇ ಅಲ್ಲದೆ, ರವಿ ಅವರು ತಮ್ಮ ಮೂವರು ಗಂಡು ಮಕ್ಕಳಿಗೂ ಕ್ಯಾಮರಾ ಹೆಸರುಗಳನ್ನೇ ಇಟ್ಟಿದ್ದಾರೆ. ಕೆನಾನ್, ಎಫ್ಸಾನ್, ನಿಕಾನ್ ಎಂದು ನಾಮಕರಣ ಮಾಡಿದ್ದಾರೆ.

    ಕ್ಯಾಮರಾಕ್ಕೂ ಗೌರವ: ರವಿ ಅವರಿಗೆ ವೃತ್ತಿ ಪ್ರೇಮ ಬೆಂಬಿಡದೆ ಕಾಡುತ್ತಿದೆಯಂತೆ. ಅನ್ನ, ಬದುಕು, ನೆಮ್ಮದಿ ಕೊಟ್ಟ ಕ್ಯಾಮರಾ ಪ್ರತಿ ಕ್ಷಣವೂ ತಮ್ಮ ಜತೆಯೇ ನೆನಪಾಗಿ ಇರಬೇಕು ಎನ್ನುವುದು ತುಡಿತ. ಹೀಗಾಗಿ ಮನೆಯ ಮೂಲಕ ಅವರು ಕ್ಯಾಮರಾಕ್ಕೆ ಗೌರವ ಸಲ್ಲಿಸಿದ್ದಾರೆ. ಇದೀಗ ರವಿ ಅವರ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಸೆಳೆಯುತ್ತಿದೆ. ದೇಶ-ವಿದೇಶದ ಸಾಕಷ್ಟು ಜನರು ಅವರ ಕ್ಯಾಮರಾ ಮನೆಯ ಚಿತ್ರ ಶೇರ್ ಮಾಡುತ್ತಿದ್ದಾರೆ. ಫೋಟೋಗ್ರಾರ್ ಹಾಗೂ ಅವರ ವಿನೂತನ ಮನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವುದು ಇದೇ ಮೊದಲು.

    ಕ್ಯಾಮರಾ ಶೈಲಿಯ ಮನೆ ನಿರ್ಮಿಸಬೇಕು ಎನ್ನುವುದು ನನ್ನ 10 ವರ್ಷದ ಕನಸಾಗಿತ್ತು. ಈ ಮೊದಲೇ ಇದ್ದ ಹಳೆಯ ಮನೆಯನ್ನು ಮಾರಾಟ ಮಾಡಿ, ಬಂಧುಗಳಿಂದ, ಬ್ಯಾಂಕ್‌ಗಳಿಂದ ಸಾಲ ಮಾಡಿ ಮನೆ ನಿರ್ಮಿಸಿರುವೆ. ಮನೆ ನಿರ್ಮಾಣದ ನಂತರ ಸಿಗುತ್ತಿರುವ ಮೆಚ್ಚುಗೆಗಿಂತ ನನಗೆ ವೈಯಕ್ತಿಕವಾಗಿ ಆಗಿರುವ ಆನಂದ ದೊಡ್ಡದು. ಮೊದ ಮೊದಲು ಅಪಹಾಸ್ಯ ಮಾಡಿದವರು ಕೂಡ ಈಗ ಮನೆಯ ಮಾದರಿಗೆ ಮೆಚ್ಚಿದ್ದಾರೆ. ಕ್ಯಾಮರಾ ನನಗೆ ಜೀವನ ಕೊಟ್ಟಿದೆ. ಕ್ಯಾಮರಾ ಬಿಟ್ಟು ನನಗೆ ಇರಲು ಆಗಲ್ಲ.
    | ರವಿ ಹೊಂಗಲ ಫೋಟೋಗ್ರಾರ್, ಬೆಳಗಾವಿ

    | ಮಲ್ಲಿಕಾರ್ಜುನ ತಳವಾರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts