More

    ನಿರಂತರ ಜ್ಯೋತಿ ಅವಾಂತರ

    ತರೀಕೆರೆ: ತಾಲೂಕಿಗೆ ನಿರಂತರ ವಿದ್ಯುತ್ ಪೂರೈಸಲು ಅಂದಾಜು 33 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಿದ ನಿರಂತರ ಜ್ಯೋತಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಅಲ್ಲದೆ ಕಾಮಗಾರಿಯಲ್ಲಿ ಕಳಪೆ ಕೇಬಲ್ ಬಳಸಿರುವುದರಿಂದ ಜ್ಯೋತಿ ನಿರಂತರವಾಗಿ ಬೆಳಗುವುದೇ ಅನುಮಾನವಾಗಿದೆ.

    ದೋರನಾಳು, ಕಟ್ಟೆಹೊಳೆ, ಎ.ರಂಗಾಪುರ, ಬೇಲೇನಹಳ್ಳಿ ತಾಂಡಾ ಸೇರಿ ಬಹುತೇಕ ಕಡೆ ಅಳವಡಿಸಿರುವ ಏರಿಯಲ್ ಬಂಚ್ ಕೇಬಲ್ ಕಳಪೆಯಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಫೀಡರ್​ಗಳಲ್ಲಿ ಲೈನ್ ಚಾರ್ಜ್ ಮಾಡಿದಾಗ ದುರ್ಬಲಗೊಂಡ ಕೇಬಲ್ ಸಿಡಿದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ.

    ಇಟ್ಟಿಗೆ, ಕುಡ್ಲೂರು, ಲಕ್ಕೇನಹಳ್ಳಿ, ಮುಂಡ್ರೆ, ಕೋರನಹಳ್ಳಿ, ಬೆಟ್ಟದಹಳ್ಳಿ, ಲಕ್ಷ್ಮೀಸಾಗರ, ತಣಿಗೇಬೈಲು, ನಂದಿಬಟ್ಟಲು ಕಾಲನಿ, ಹುಲಿತಿಮ್ಮಾಪುರ, ಧೂಪದಖಾನ್, ಅಮೃತಾಪುರ, ಹುಣಸಘಟ್ಟ ಮುಂತಾದೆಡೆ ವಿದ್ಯುತ್ ಕಂಬಗಳನ್ನೂ ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಚರಂಡಿಗಳಲ್ಲಿ, ರಸ್ತೆ ಬದಿಯ ಇಕ್ಕಟ್ಟಿನ ಜಾಗಗಳಲ್ಲಿ ಕಂಬ ನೆಟ್ಟಿರುವುದರಿಂದ ಸಮಸ್ಯೆಯಾಗಿದೆ.

    ಕಳಪೆ ಸಾಮಗ್ರಿ ಬಳಕೆ, ಅವೈಜ್ಞಾನಿಕ ಕೆಲಸದಿಂದ ಸರ್ಕಾರದ ಹಣ ಮಣ್ಣು ಪಾಲಾಗುತ್ತಿದೆ. ಇಷ್ಟಾದರೂ ಕಾಮಗಾರಿಯನ್ನು ಹಂತ ಹಂತವಾಗಿ ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕಾದ ಮೆಸ್ಕಾಂ ಅಧಿಕಾರಿಗಳು ಕೂಡ ಮೌನವಾಗಿದ್ದಾರೆ.

    ಅಡಿಪಾಯವೇ ಅಭದ್ರ: ನಿರಂತರ ಜ್ಯೋತಿ ಯೋಜನೆಯ ನೂರಾರು ಕಂಬಗಳನ್ನು ಚರಂಡಿಗಳಲ್ಲಿ ನೆಡಲಾಗಿದೆ. ನಾಲ್ಕೂವರೆ ಅಡಿ ಆಳದ ಗುಂಡಿ ತೋಡಿ ನೆಡಬೇಕಾಗಿದ್ದ ಕಂಬವನ್ನು ಕೇವಲ ಎರಡೂವರೆ ಅಡಿ ಆಳದ ಗುಂಡಿಯಲ್ಲಿ ಅಳವಡಿಸಲಾಗಿದೆ. ಕಂಬ ಬಿಗಿಗೊಳಿಸಲು ಗುಂಡಿಯೊಳಗೆ ಒಂದೂವರೆ ಅಡಿ ಮತ್ತು ಭೂಮಿಯಿಂದ ಮೇಲ್ಭಾಗದಲ್ಲಿ ಒಂದೂವರೆ ಅಡಿ ಎತ್ತರಕ್ಕೆ ಕಾಂಕ್ರೀಟ್ ಹಾಕಬೇಕು. ಆದರೆ ಎಲ್ಲ ನಿಯಮ ಗಾಳಿಗೆ ತೂರಿ ಮೇಲ್ಭಾಗಕ್ಕೆ ಮಾತ್ರ ಕಲ್ಲಿನ ಪುಡಿ (ಡಸ್ಟ್) ಬೆಡ್ ನಿರ್ವಿುಸಲಾಗಿದೆ. ಕಂಬಕ್ಕೆ ಹಾಕಿರುವ ಅಡಿಪಾಯ ಪ್ರಾಥಮಿಕ ಹಂತದಲ್ಲೇ ಅಲುಗಾಡತೊಡಗಿದೆ.

    ಆಮೆಗತಿ ಕೆಲಸ: ತಾಲೂಕಿನ ದುಗ್ಲಾಪುರ, ಲಕ್ಕವಳ್ಳಿ, ಲಿಂಗದಹಳ್ಳಿ, ಬೆಟ್ಟತಾವರೆಕೆರೆ ಹಾಗೂ ತರೀಕೆರೆ ಎಂಯುಎಸ್​ಎಸ್ ವ್ಯಾಪ್ತಿಗೊಳಪಡುವ 11 ಫೀಡರ್​ಗಳನ್ನು ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಆರಂಭವಾಗಿ ಎರಡು ವರ್ಷ ಕಳೆದರೂ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರ 2018ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಿತ್ತಾದರೂ ಗುತ್ತಿಗೆದಾರನಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ.

    ಕಾಮಗಾರಿಯಲ್ಲಿ ಕೈಚಳಕ: ಯೋಜನೆಗೆ ಬಳಸುವ ಕಂಬಗಳು ಒಂದರಿಂದ ಮತ್ತೊಂದಕ್ಕೆ ಕನಿಷ್ಠ 30 ಮೀ. ಅಂತರವಿರಬೇಕು. ಆರ್​ಸಿಸಿ ಕಂಬಗಳನ್ನೇ ಬಳಸಬೇಕೆಂಬ ನಿಯಮವಿದೆ. ಆದರೆ ಕೆಲವೆಡೆ 40ರಿಂದ 50 ಮೀ. ಅಂತರಕ್ಕೆ ಕಳಪೆ ಕಂಬಗಳನ್ನು ನೆಡಲಾಗಿದೆ. ಕ್ರಿಯಾಯೋಜನೆಯಲ್ಲಿ ಪರಿಸರ ನಾಶ ತಡೆಯಲು ಏರಿಯಲ್ ಬಂಚ್ ಕೇಬಲ್ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಲಿಂಗದಹಳ್ಳಿಯಿಂದ ಕಲ್ಲತ್ತಿಗಿರಿ, ಅಮೃತಾಪುರ ಗ್ರಾಮ ಸೇರಿ ಬಹುತೇಕ ಕಡೆ ಏರಿಯಲ್ ಬಂಚ್​ಗೆ ಬದಲಾಗಿ ರ್ಯಾಬಿಟ್ ವೈರನ್ನೇ (ಅಲ್ಯುಮೀನಿಯಂ) ಬಳಸಿ ಲೋಪ ಎಸಗಲಾಗಿದೆ.

    ಲೋಡ್ ಶೆಡ್ಡಿಂಗ್ ಕಿರಿಕಿರಿ: ತಾಲೂಕಿನಲ್ಲಿ ಪ್ರಗತಿ ಹಂತದಲ್ಲಿರುವ ನಿರಂತರ ಜ್ಯೋತಿ ಯೋಜನೆ ಕಾಮಗಾರಿಯಿಂದ ಪದೇಪದೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದರಿಂದ ಜನತೆಗೆ ಸಮಸ್ಯೆಯಾಗಿದೆ. ಬೇಸಿಗೆ ಸಮೀಪಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಬೆಳೆ ಉಳಿಸಿಕೊಳ್ಳಲು ಕೂಡ ಪರದಾಡುವಂತಾಗಿದೆ. ಮುಖ್ಯವಾಗಿ ಕಟ್ಟೇಹೊಳೆ ಗ್ರಾಮದ ಬೀದಿಯೊಂದರಲ್ಲಿರುವ ಕಬ್ಬಿಣದ ವಿದ್ಯುತ್ ಕಂಬಕ್ಕೆ ನಿರಂತರ ಜ್ಯೋತಿ ಲೈನ್ ಎಳೆದರೆ, ಬೇಲೇನಹಳ್ಳಿ ತಾಂಡಾದ ಹಲವು ಬೀದಿಗಳಲ್ಲಿ ಹಳೇ ಕಂಬದಲ್ಲಿ ಹೊಸ ಕೇಬಲ್ ಹಾಕಲಾಗಿದೆ. ಕಟ್ಟೇಹೊಳೆ ಸೇರಿ ವಿವಿಧ ಗ್ರಾಮಗಳಲ್ಲಿ ನಿರಂತರ ಜ್ಯೋತಿ ವಿದ್ಯುತ್ ಲೈನ್​ಗೆ ಹೊಸ ಕಂಬವನ್ನೇ ಅಳವಡಿಸಿಲ್ಲ.

    ವರ್ಷ ಕಳೆಯುವಷ್ಟರಲ್ಲಿ ಕಂಬ ಶಿಫ್ಟ್: 2016-17ರಲ್ಲೇ ತಾಲೂಕಿನ ಶಿವಪುರ, ಕುಡ್ಲೂರು, ಚಟ್ಟನಹಳ್ಳಿ ಬಳಿ ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಬೈಪಾಸ್ ಕಾಮಗಾರಿಗೆ ನೋಟಿಫಿಕೇಷನ್ ಹೊರಡಿಸಿದ್ದರೂ ಹೆದ್ದಾರಿ ಪಕ್ಕದಲ್ಲೇ 2018ರಲ್ಲಿ ಆರಂಭಿಸಲಾದ ನಿರಂತರ ಜ್ಯೋತಿ ಯೋಜನೆಯ ಕಂಬ ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಇದೀಗ ಚತುಷ್ಪಥ ಬೈಪಾಸ್ ನಿರ್ವಣಕ್ಕೆ ಚಾಲನೆ ದೊರಕಿರುವುದರಿಂದ ವಿದ್ಯುತ್ ಕಂಬ ಸ್ಥಳಾಂತರಿಸಬೇಕಿದೆ. ಇದರಿಂದ ಸರ್ಕಾರದ ಹಣ ಪೋಲು ಮಾಡಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts