More

    ಪ್ರತಿಭಟನಾ ಸ್ಥಳದಲ್ಲಿದ್ದ ಲಾರಿಗೆ ಬೆಂಕಿ

    ಉಳ್ಳಾಲ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ನಡೆದ ಸ್ಥಳದಲ್ಲಿದ್ದ ಲಾರಿಗೆ ಬೆಂಕಿ ತಗುಲಿದ್ದು ಅದರಲ್ಲಿ ತುಂಬಿಸಿಡಲಾಗಿದ್ದ ಸಾವಿರಾರು ಕುರ್ಚಿಗಳು ಬೆಂಕಿಗೆ ಆಹುತಿಯಾಗಿದೆ.

    ದೇರಳಕಟ್ಟೆ ಸಿಟಿಗ್ರೌಂಡ್‌ನಲ್ಲಿ ಭಾನುವಾರ ಸಾಯಂಕಾಲ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನಾ ಸಭೆ ನಡೆದಿತ್ತು. ಸಭೆಗಾಗಿ ಸುಮಾರು ಜಪ್ಪುವಿನ ಅಲ್ತಾಫ್ ಮಾಲೀಕತ್ವದ 6,500 ಕುರ್ಚಿಗಳನ್ನು ಹಾಕಲಾಗಿತ್ತು. ಸಭೆ ಮುಗಿದ ಬಳಿಕ ಲಾರಿ ಮೂಲಕ 3 ಸಾವಿರ ಕುರ್ಚಿಗಳನ್ನು ಸಾಗಿಸಲಾಗಿದೆ. ಬಳಿಕ 3,200ರಷ್ಟು ಕುರ್ಚಿಗಳನ್ನು ಪಾನೀರ್ ನಿವಾಸಿ ರಫೀಕ್ ಎಂಬುವರ ಈಚರ್ ಲಾರಿಗೆ ತುಂಬಲಾಗಿದ್ದು, ರಾತ್ರಿಯಾದ ಕಾರಣ ಲಾರಿಯನ್ನು ಅಲ್ಲೇ ನಿಲ್ಲಿಸಲಾಗಿತ್ತು. ತಡರಾತ್ರಿ 2.30ರ ಸುಮಾರಿಗೆ ವಾಹನಕ್ಕೆ ಬೆಂಕಿ ತಗುಲಿದೆ. ಈ ಸಂದರ್ಭ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಿಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದೆ. ಆದರೆ ಅದಾಗಲೇ ಕುರ್ಚಿಗಳ ಜತೆಗೆ ಲಾರಿಯೂ ಸಂಪೂರ್ಣ ಸುಟ್ಟು ಹೋಗಿತ್ತು. ಕಿಡಿಗೇಡಿಗಳು ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ.

    ಪೊಲೀಸರಿಂದ ಭರವಸೆ: ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಬ್ಬಿದ್ದರಿಂದ ಸೋಮವಾರ ಬೆಳಗ್ಗೆ ಭಾರಿ ಸಂಖ್ಯೆಯ ಜನ ಸ್ಥಳದಲ್ಲಿ ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಎಸಿಪಿ ಕೋದಂಡರಾಮ, ಸಂಘಟಕರು ಹಾಗೂ ನೆರೆದ ಜನರೊಂದಿಗೆ ಮಾತುಕತೆ ನಡೆಸಿ ತಾಳ್ಮೆ ವಹಿಸುವಂತೆ ಹಾಗೂ 24 ಗಂಟೆಯೊಳಗೆ ಆರೋಪಗಳನ್ನು ಪತ್ತೆ ಹಚ್ಚುವ ಭರವಸೆ ನೀಡಿದರು. ಇದೀಗ ಸ್ಥಳದಲ್ಲಿ ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಸುಪಾಸಿನಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ.

    ಶಾಸಕ ಖಾದರ್ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕ್ಷೇತ್ರದಲ್ಲಿ ಶಾಂತಿಯುತ ಪ್ರತಿಭಟನಾ ಸಭೆಗಳು ನಡೆದಿವೆ. ಆದರೆ ದೇರಳಕಟ್ಟೆಯಲ್ಲಿ ನಡೆದಿರುವ ಘಟನೆ ಬೇಸರ ತಂದಿದೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿ ಜನರಲ್ಲಿರುವ ಆತಂಕ, ಗೊಂದಲ ದೂರಗೊಳಿಸಬೇಕು ಎಂದು ತಿಳಿಸಿದ್ದಾರೆ.

    ಕಿಡಿಗೇಡಿಗಳ ಕೃತ್ಯ ಶಂಕೆ: ಘಟನೆ ನಡೆದ ಮೈದಾನ ಸಮೀಪವೇ ಮದುವೆ ಕಾರ್ಯಕ್ರಮ ಇದ್ದ ಕಾರಣ ತಡರಾತ್ರಿವರೆಗೂ ಜನರಿದ್ದು, ಅವರು ಹೋದ ಬಳಿಕ ಘಟನೆ ನಡೆದಿದೆ. ಈ ಭಾಗದಲ್ಲಿರುವ ಸೌಹಾರ್ದ ವಾತಾವರಣ ಕೆಡಿಸುವ ಉದ್ದೇಶದಿಂದ, ದ್ವೇಷದಿಂದ ಅಥವಾ ತನ್ನ ವ್ಯಾಪ್ತಿಯಲ್ಲಿ ಪ್ರತಿಭಟನಾ ಸಭೆಗಳಿಗೆ ಅನುಮತಿ ನೀಡಿ ಮೆಚ್ಚುಗೆ ಗಳಿಸಿರುವ ಎಸಿಪಿಯವರ ಹೆಸರು ಕೆಡಿಸುವ ಉದ್ದೇಶದಿಂದಲೂ ಕಿಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts