More

    ಪ್ರಧಾನಿ ನರೇಂದ್ರ ಮೋದಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ

    ಲಕ್ಕೂರು: ಪ್ರಧಾನಿ ನರೇಂದ್ರಮೋದಿ ಹಿಟ್ಲರ್ ಆಡಳಿತ ನಡೆಸುತ್ತಿದ್ದು, ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ, ಶಾಸಕ ಕೆ.ಆರ್.ರಮೇಶ್‌ಕುಮಾರ್ ಆರೋಪಿಸಿದರು.

    ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಆಲಂಬಾಡಿ ಗೇಟ್ ಸಮೀಪ ಇರುವ ಗೋಪಾಲಪ್ಪನ ಮನೆಯಂಗಳದ ಆವರಣದಲ್ಲಿ ಸಾರಂಗರಂಗ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಾನಪದ ಗಾಯನ ಹಾಗೂ ಚರ್ಮವಾದ್ಯಗಳ ಕಲಾಶಾಲೆಯನ್ನು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

    ದೇಶದಲ್ಲಿರುವ ಮೂಲ ನಿವಾಸಿಗಳು ಏನು ಮಾತನಾಡಿದರೂ ಅಪಾರ್ಥ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಜನರನ್ನು ಉಗ್ರಗಾಮಿಗಳಂತೆ ನೋಡುತ್ತಿದ್ದಾರೆ. ಜನರು ಯಾವ ರೀತಿ ಜೀವನ ನಡೆಸಬೇಕು ಎಂಬುದನ್ನು ಅವರೇ ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ. ಮೂಲ ನಿವಾಸಿಗಳನ್ನು ಶಾಶ್ವತವಾದ ಜೈಲಿಗಟ್ಟಲು ಮುಂದಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

    ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ನೇತೃತ್ವದಲ್ಲಿ ಮೊದಲ ಬಾರಿಗೆ ಪ್ರಾರಂಭವಾಗುತ್ತಿರುವ ಚರ್ಮವಾದ್ಯಗಳ ಕಲಾಶಾಲೆಯು ವಾದ್ಯ ನುಡಿಸಲಷ್ಟೇ ಸೀಮಿತವಾಗದಿರಲಿ. ಪ್ರಸ್ತುತ ಕಲೆ, ಸಂಗೀತ ಅಸಹ್ಯ ಹುಟ್ಟಿಸುವ ಸ್ಥಿತಿಗೆ ತಲುಪಿದೆ. ಇತ್ತೀಚೆಗೆ ಬರುತ್ತಿರುವ ಚಲನಚಿತ್ರಗಳಲ್ಲಿ ಅಸಭ್ಯದ ಹಾಡು, ಸಂಗೀತ, ಮಾತುಗಳು ಹೆಚ್ಚಾಗಿರುವುದರಿಂದ ಚಿತ್ರಗಳನ್ನು ಮನೆ ಮಂದಿ ಕುಳಿತು ನೋಡುವುದಕ್ಕೂ ಇರುಸು ಮುರುಸು ಉಂಟಾಗಿದೆ. ಈ ಕಲಾಶಾಲೆಯು ಯುವಜನತೆಗೆ ಮಾರ್ಗದರ್ಶನವಾಗಲಿ ಎಂದು ಆಶಿಸಿದರು.

    ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಅಕ್ಷರಜ್ಞಾನ ಇಲ್ಲದವರ ನಾಲಿಗೆಯಲ್ಲಿ ಬದುಕಿನ ದುಡುಮೆಯ ಫಲದಿಂದ ಅವರ ನಾಲಿಗೆಯಲ್ಲಿ ಬರುವಂತಹದೇ ಜನಪದ ಕಲೆ. ಜನಪದದ ನಾನಾ ಕಲಾ ಪ್ರಕಾರಗಳ ಮೂಲಕ ಜನ ಬದುಕನ್ನು ಕಟ್ಟಿಕೊಂಡಿದ್ದಾರೆ. ಆಧುನಿಕತೆ ಪ್ರಭಾವದಿಂದ ಗ್ರಾಮೀಣ ಮೌಲ್ಯ ನಾಶವಾಗುವ ಪರಿಸ್ಥಿತಿ ಉಂಟಾಗಿದೆ. ಮಾಧ್ಯಮ ಕ್ಷೇತ್ರವು ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಪ್ರದೇಶದಲ್ಲಿರುವ ಮೌಲ್ಯಭರಿತ ಜನಪದವನ್ನು ಪಟ್ಟಣದ ಮಕ್ಕಳಿಗೂ ತಿಳಿಸುವ ಕೆಲಸ ಮಾಡಬೇಕು ಮಾಡಬೇಕು ಎಂದರು.

    ಶಾಸಕ ಕೆ.ವೈ.ನಂಜೇಗೌಡ, ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಜನವಾದಿ ಸಂಘಟನೆಯ ವಿ.ಗೀತಾ, ಸಾರಂಗರಂಗ ಸಂಸ್ಥೆ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಪದಾಧಿಕಾರಿಗಳಾದ ಪಿಚ್ಚಳ್ಳಿ ಶ್ರೀನಿವಾಸ್, ವೆಂಕಟಾಪು ಸತ್ಯಂ, ಎಲ್.ಶ್ರೀಧರ್, ಟಿ.ನಾರಾಯಣಮೂರ್ತಿ, ವಿ.ಮುನಿರಾಜ್, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್, ಎ.ಅಶ್ವಥ್‌ರೆಡ್ಡಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts