More

    ಮಳೆ ನೀರಲ್ಲೇ ಕೃಷಿ ಮಾಡಿ ಬದುಕು ಕಟ್ಟಿಕೊಂಡ ಮಹಿಳೆ: ವಿವಿಧ ಬೆಳೆ ಬೆಳೆದು ಮಾದರಿಯಾದ ಜಯಂತಿ

    ಕೆ.ಆರ್​.ಚಂದ್ರಶೇಖರ್​ ಲಕ್ಕೂರು

    ಅಕಾಲಿಕ ಮಳೆ, ನೀರಿನ ಕೊರತೆಯಿಂದಾಗಿ ಕೃಷಿ ಕ್ಷೇತ್ರವನ್ನು ಬಿಡುತ್ತಿರುವವರ ಮಧ್ಯೆ ದಿಟ್ಟ ಮಹಿಳೆಯೊಬ್ಬರು ಮಳೆ ನೀರನ್ನೇ ಅವಲಂಬಿಸಿ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು ಇತರರಿಗೆ ಸ್ಫೂರ್ತಿಯಾಗಿದ್ದಾರೆ.


    ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಚನ್ನಿಗರಾಯಪುರದ ಪ್ರಗತಿಪರ ರೈತ ಚಿಕ್ಕಕೆಂಪಣ್ಣ ಅವರ ಸೊಸೆ ಜಯಂತಿ ಎಂಬುವವರು 6 ವರ್ಷದಿಂದ ಕೃಷಿ ಹೊಂಡದಲ್ಲಿ ಮಳೆ ನೀರು ಶೇಖರಿಸಿ, ಸಾವಯವ ಕೃಷಿ ಪದ್ಧತಿ ಮೂಲಕ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ.


    ಬೆಂಗಳೂರಿನ ದೊಡ್ಡಕನ್ನೆಲ್ಲಿಯಲ್ಲಿ ವಾಸವಿದ್ದು, ಪತಿಯು ಅಪಘಾತದಿಂದಾಗಿ ಅನಾರೋಗ್ಯಕಿಡಾದ ನಂತರ ಕುಟುಂಬ ನಿರ್ವಹಣೆಗಾಗಿ ಬೋಟಿಕ್​ ನಡೆಸುತ್ತಿದ್ದರು. ಕರೊನಾ ಸಂದರ್ಭದಲ್ಲಿ ವ್ಯವಹಾರ ಇಲ್ಲದೆ ಬಾಗಿಲು ಮಚ್ಚಿದ ಕಾರಣ ಜಮೀನಿನಲ್ಲೇ ಕೃಷಿ ಮಾಡುವ ಉದ್ದೇಶದಿಂದ ಗ್ರಾಮಕ್ಕೆ ಬಂದು ಸುಮಾರು 15 ಎಕರೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಹಂತ ಹಂತವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.


    ಕೃಷಿಯಲ್ಲಿ ಇತರರಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ 4 ವರ್ಷಗಳಿಂದ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. 15 ಎಕರೆಯಲ್ಲಿ ಮಿಶ್ರ ಬೇಸಾಯದ ಜತೆಗೆ ಕೃಷಿಗೆ ಅವಶ್ಯವಿರುವ ವಿವಿಧ ಸಾಧನಗಳನ್ನು ನಿರ್ಮಿಸಿಕೊಂಡಿದ್ದಾರೆ. ಜಯಂತಿ ಅವರು ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 2 ರಿಂದ 2.5 ಕೋಟಿ ರೂ. ಆದಾಯ ಪಡೆದಿದ್ದಾರೆ.
    ನಾವು ಬೆಳೆ ಹಾಕುವ ಮೊದಲು ಸುತ್ತಮುತ್ತಲಿನ ಜಿಲ್ಲೆ ಹಾಗೂ ತಾಲೂಕಿನಲ್ಲಿ ಒಮ್ಮೆ ಕೃಷಿ ಚಟುವಟಿಕೆಗಳನ್ನು ಗಮನಿಸಿ ಯಾವ ಭಾಗದಲ್ಲಿ ಯಾವ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂಬುದನ್ನು ತಿಳಿದು ಪರ್ಯಾಯ ಬೆಳೆ ಮಾಡಬೇಕು. ಎಲ್ಲ ರೈತರು ಒಂದೇ ಬೆಳೆ ಬೆಳೆಯುವುದರಿಂದ ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯ ಬೆಲೆ ಏರಿಳಿತಗಳಿಂದ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ರೈತ ಮಹಿಳೆ ಜಯಂತಿ.

    ವಿವಿಧ ಬೆಳೆಗಳು:

    ಜಯಂತಿ ಅವರು ಪ್ರಸ್ತುತ 3 ಎಕರೆ ಕ್ಯಾಪ್ಸಿಕಂ, 3 ಎಕರೆ ಟೊಮ್ಯಾಟೊ ಬೆಳೆದಿದ್ದು, ಕ್ಯಾಪ್ಸಿಕಂ ಬೆಳೆಯಲ್ಲಿ ಹೆಚ್ಚಿನ ಲಾಭ ಗಳಿಸಿದ್ದಾರೆ. ಕಳೆದ 3 ವರ್ಷದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ಹಲವು ರೀತಿಯ ಬೆಳೆಗಳನ್ನು ಬೆಳೆದಿದ್ದಾರೆ. ಮಳಬಾಗಿಲಿನ ಸಮೀಪ 8 ಎಕರೆ ಜಮೀನು ಖರೀದಿಸಿ ಅಲ್ಲಿಯೂ ಕೃಷಿ ಮಾಡುತ್ತಿದ್ದಾರೆ. ಒಟ್ಟಾರೆ 15 ಎಕರೆ ವಿಸ್ತೀರ್ಣದಲ್ಲಿ ಟೊಮ್ಯಾಟೊ, ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ಚೆಂಡು ಹೂ, ಬೀನ್ಸ್​ ಸೇರಿ ಹಲವು ಬಗೆಯ ಬೆಳೆಗಳನ್ನು ಬೆಳೆದು ಆದಾಯ ಗಳಿಸುತ್ತಿದ್ದಾರೆ.

    ಹತ್ತಾರು ಮಂದಿಗೆ ಉದ್ಯೋಗ:

    ಜಯಂತಿ ಅವರ ಜಮೀನಿನಲ್ಲಿ ನಿತ್ಯವೂ ಗ್ರಾಮದ ಹಾಗೂ ಅಕ್ಕ&ಪಕ್ಕದ ಗ್ರಾಮಗಳ 30ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಉದ್ಯೋಗ ಕಂಡುಕೊಂಡಿದ್ದಾರೆ. ಜಮೀನಿನಲ್ಲಿ ಕೃಷಿಹೊಂಡದ ನೀರನ್ನು ಹನಿ ನೀರಾವರಿ ಪದ್ಧತಿ ಮೂಲಕ ಮಿತವಾಗಿ ಬಳಸುತ್ತಿದ್ದಾರೆ.

    ಬೆಳೆ ಬೆಳೆಯಲು ಜಾಣತನ, ತಾಳ್ಮೆ ಹಾಗೂ ಶ್ರದ್ಧೆ ಇದ್ದರೆ ಸಾಕು ಎಂತಹ ಭೂಮಿಯಲ್ಲೂ ಬಂಗಾರದ ಬೆಳೆ ಬೆಳೆಯಬಹುದು. ನನ್ನ ಮೊದಲ ಪ್ರಯತ್ನದಲ್ಲೇ ಆತ್ಮವಿಶ್ವಾಸದಿಂದ 3 ವರ್ಷಗಳ ಸತತ ಶ್ರಮದಿಂದ 2 ರಿಂದ 2.5 ಕೋಟಿ ರೂ.ಆದಾಯ ಪಡೆದಿದ್ದೇನೆ.

    | ಜಯಂತಿ,

    ಪ್ರಗತಿಪರ ರೈತ ಮಹಿಳೆ, ಚನ್ನಿಗರಾಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts