ಸವದತ್ತಿ: ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ನಿವಾಸಿಗಳಿಗೆ ಏನೂ ತೊಂದರೆಯಾಗದು. ಬದಲಾಗಿ ಅಕ್ರಮವಾಗಿ ಒಳನುಸುಳುಸುತ್ತಿರುವವರಿಗೆ ಕಡಿವಾಣ ಹಾಕಲೆಂದು ಈ ಕಾಯಿದೆ ಜಾರಿಗೊಳಿಸಲಾಗಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ.
ಸ್ಥಳೀಯ ಎಸ್.ಜಿ. ಶಿಂತ್ರಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ಘನ್, ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ ಹಿಂದು, ಬೌದ್ಧ ಸೇರಿದಂತೆ ಪ್ರಮುಖ ಮುಸ್ಲಿಂಯೇತರ ಧರ್ಮದವರಿಗೆ ಪೌರತ್ವ ಪಡೆದುಕೊಳ್ಳುವಲ್ಲಿ ಸಡಿಲಿಕೆ ನೀಡಿದ್ದು, ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ ಎಂದರು.
ಬಿಜೆಪಿ ಮುಖಂಡ ಈರಣ್ಣಾ ಕಡಾಡಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜನಸಂಖ್ಯಾ ನೋಂದಣಿ ಕಾಯ್ದೆಯ ಜಾರಿಯಿಂದ ದೇಶದ ಮುಸ್ಲಿಮರು ಸೇರಿ 130 ಕೋಟಿ ಜನರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಹೀಗಿದ್ದರೂ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಪ್ರಚೋದನೆಯಿಂದ ನಡೆಯುತ್ತಿರುವ ಪ್ರತಿಭಟನೆಯಿಂದ ಅಶಾಂತಿ ಉಂಟಾಗಿದೆ ಎಂದು ದೂರಿದರು.
ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಎಂ.ಬಿ.ಜಿರಲಿ, ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಈರಣ್ಣ ಚಂದರಗಿ ಅವರನ್ನು ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕೃಷ್ಣೈಕ್ಯೆ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಗದೀಶ ಶಿಂತ್ರಿ, ಜಗದೀಶ ಕೌಜಗೇರಿ, ರವಿ ಹಿರೇಮಠ, ಗುರುಪಾದ ಕಳ್ಳಿ, ಜಗದೀಶ ಹನಸಿ, ಧನಂಜಯ ಜಾದವ ಇತರರು ಇದ್ದರು.