More

    ಬೈಲಾ ತಿದ್ದುಪಡಿ ಬಳಿಕ ಉತ್ತರಾಧಿಕಾರಿ ಆಯ್ಕೆ ಸುಗಮ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

    ಸಿರಿಗೆರೆ: (ಚಿತ್ರದುರ್ಗ): ಶತಮಾನದ ಹಿಂದೆ ರೂಪಿತವಾಗಿರುವ ಸಾಧು ಸದ್ಧರ್ಮ ಸಂಘದ ಬೈಲಾದಲ್ಲಿನ ಕೆಲ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು. ಆಗ ಮಠದ ನೂತನ ಉತ್ತರಾಧಿಕಾರಿ ಆಯ್ಕೆ ಸುಲಭವಾಗಲಿದೆ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಗ್ರಾಮದ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಮ್ಮ ಗುರು ಪಿತಾಮಹರಾದ ಗುರುಶಾಂತರಾಜ ಸ್ವಾಮೀಜಿ ಅವರ ಕಾಲದಲ್ಲಿ 1922 ರಲ್ಲಿ ಬೈಲಾ ರೂಪಿತವಾಗಿದೆ. ಅದನ್ನು ಅವರು 1923ರಲ್ಲಿ ನೋಂದಣಿ ಮಾಡಿಸಿದ್ದಾರೆ. 1977ರಲ್ಲಿ ಹಿರಿಯ ಗುರುಗಳು ಒಂದೆರಡು ನಿಬಂಧನೆಗಳನ್ನು ಸೇರಿಸಿದ್ದಾರೆ. ಅದು ಬಿಟ್ಟರೆ ನಮ್ಮ ಕಾಲದಲ್ಲಿ ಬೈಲಾ ತಿದ್ದುಪಡಿಯೇ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಾಧು ಸದ್ಧರ್ಮ ಸಂಘದ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇದ್ದು, ಕರೊನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಆ ಕೆಲಸ ತಡವಾಯಿತು. ಸಂಘದ ವಿಶೇಷ ಸಭೆ ಕರೆದು ಅದಕ್ಕೆ ಚಾಲನೆ ನೀಡಬೇಕು ಎಂದು ಹೇಳಿದರು.

    1990ರಲ್ಲಿ ಮಠದ ಹಲವು ಭಕ್ತರ ಸಮ್ಮುಖದಲ್ಲಿ ಸಭೆ ಸೇರಿ ಟ್ರಸ್ಟ್ ಡೀಡ್ ನೋಂದಣಿ ಮಾಡಿಸಲಾಗಿದೆ. ಈ ಸಭೆಗೆ ಹಾಜರಾಗಿ ಟ್ರಸ್ಟ್ ಡೀಡ್‌ನಲ್ಲಿ ಸಹಿ ಮಾಡಿದವರು ಸಹ ಈಗ ಅದರ ಬಗ್ಗೆ ಅಪಸ್ವರ ಎತ್ತುತ್ತಿರುವುದು ವಿವಾದದ ಸಂಗತಿ ಎಂದರು.

    ರಾಜ್ಯಾದ್ಯಂತ ಚದುರಿ ಹೋಗಿರುವ ಸಾಧು ಸದ್ಧರ್ಮ ವೀರಶೈವ ಸಂಘದ ಸಮುದಾಯವನ್ನು ಸಂಘಟಿಸುವ ಸಲುವಾಗಿ ತಾಲೂಕು ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದ ಸಮುದಾಯ ಒಗ್ಗೂಡುವಿಕೆಗೆ ಅನುಕೂಲವಾಗಿದೆ ಎಂದರು.

    ಬಿ.ಎಲ್.ಶಿವಳ್ಳಿ ಮಾತನಾಡಿ, ರಾಜ್ಯಸಭೆ ಮಾಜಿ ಸದಸ್ಯ ಕೆ.ಆರ್.ಜಯದೇವಪ್ಪ ಅವರ ನಿಧನದ ನಂತರ ಪ್ರಭಾರ ಅಧ್ಯಕ್ಷನಾಗಿ ಕೆಲಸ ಮಾಡುವಂತಹ ಅವಕಾಶವನ್ನು ಸಮಾಜ ಕಲ್ಪಿಸಿಕೊಟ್ಟಿತ್ತು. ಆ ಜವಾಬ್ದಾರಿಯನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಿದ್ದೇನೆ. ಅದಕ್ಕೆ ಪೂಜ್ಯ ಶ್ರೀಗಳ ಪ್ರೇರಣೆ ಕಾರಣವಾಗಿತ್ತು ಎಂದು ಹೇಳಿದರು.

    ಎಚ್.ಆರ್.ಬಸವರಾಜಪ್ಪ ಸಾಧು ಸಮಾಜದ ನೂತನ ಅಧ್ಯಕ್ಷ
    ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ನೂತನ ಅಧ್ಯಕ್ಷರಾಗಿ ಭದ್ರಾವತಿ ತಾಲೂಕು ಹನುಮಂತಾಪುರದ ರೈತ ಹೋರಾಟಗಾರ ಎಚ್.ಆರ್.ಬಸವರಾಜಪ್ಪ ಸರ್ವಾನುಮತದಿಂದ ಆಯ್ಕೆಯಾದರು.

    ಈ ಸಂಬಂಧ ರಾಜ್ಯದ ವಿವಿಧ ತಾಲೂಕು ಸಮಿತಿ ಅಧ್ಯಕ್ಷರು ಮತ್ತು ಶ್ರೀಗಳು ಚರ್ಚೆ ನಡೆಸಿದರು. ನಂತರ ಬಸವರಾಜಪ್ಪ ಅವರ ಆಯ್ಕೆಯನ್ನು ಹರಪನಹಳ್ಳಿ ಮಂಜುನಾಥ್ ಪ್ರಕಟಿಸಿದರು. ಈಗಾಗಲೇ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ಹೊತ್ತಿರುವ ಬಸವರಾಜಪ್ಪ ಅವರ ಹೆಗಲಿಗೆ ಸಾಧು ಸದ್ಧರ್ಮ ಸಂಘದ ಜವಾಬ್ದಾರಿಯೂ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts