More

    ಸರ್ಕಾರದಿಂದ ವಕ್ಕುಂದ ಉತ್ಸವ ಆಚರಿಸಲು ಕ್ರಮ

    ಬೈಲಹೊಂಗಲ: ನಾಡಿನ ಜನತೆಯ ಬೇಡಿಕೆಯಂತೆ ವಕ್ಕುಂದ ಉತ್ಸವಕ್ಕೆ ಈ ಬಾರಿ ಸರ್ಕಾರದಿಂದ 2 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದಲೇ ಆಚರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಹಣಕಾಸು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಭರವಸೆ ನೀಡಿದರು.

    ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ತಿರುಳ್ಗನ್ನಡ ನಾಡು ವಕ್ಕುಂದ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಿತ್ತೂರು, ಸಂಗೊಳ್ಳಿ, ಬೆಳವಡಿ ಉತ್ಸವದಂತೆ ವಕ್ಕುಂದ ಉತ್ಸವಕ್ಕೂ ಸರ್ಕಾರದಿಂದ ಹೆಚ್ಚಿನ ಹಣಕಾಸಿನ ನೆರವು ಒದಗಿಸಲಾಗುವುದು. ಗ್ರಾಮದಲ್ಲಿನ ಐತಿಹಾಸಿಕ ಶಿಲ್ಪ ಮಂದಿರ ತ್ರಿಕೋಟೇಶ್ವರದ ಜೀರ್ಣೋದ್ಧಾರಗೊಳಿಸಿ, ಪ್ರಸಿದ್ಧ ಪ್ರವಾಸಿ ತಾಣ ಮಾಡಲು ಶ್ರಮಿಸುವೆ ಎಂದರು.

    ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಮಾತನಾಡಿ, ಇಂತಹ ಉತ್ಸವಗಳು ನಾಡಿನ ಪರಂಪರೆ, ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸುತ್ತದೆ ಎಂದರು. ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ವಕ್ಕುಂದ ಗ್ರಾಮ ಕಲೆ, ಸಾಹಿತ್ಯ, ಶಿಕ್ಷಣ, ಆಧ್ಯಾತ್ಮಿಕತೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ತನ್ನದೆ ಆದ ಛಾಪು ಮೂಡಿಸಿದೆ ಎಂದರು.
    ಸಾಹಿತಿ ಯು.ಡಿ.ತಲ್ಲೂರ ಮಾತನಾಡಿ, ನಾಲ್ಕು ತಿರುಳ್ಗನ್ನಡ ನಾಡುಗಳ ಪೈಕಿ ವಕ್ಕುಂದ ಕೂಡ ಒಂದು. ಇದು ಈ ನಾಡಿನ ಹಿರಿಮೆ, ಗರಿಮೆ ಹೆಚ್ಚಿಸಿದೆ ಎಂದರು.

    ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ದತ್ತಿ ಇಲಾಖೆ ಸದಸ್ಯ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ, ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿ.ಕೆ.ಮೆಕ್ಕೇದ ಮಾತನಾಡಿದರು. ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಪತ್ರಕರ್ತ ಡಾ. ಈರಣಗೌಡ ಶೀಲವಂತರ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಪತ್ರಕರ್ತ ಈಶ್ವರ ಹೋಟಿ, ಬಿ.ಬಿ.ಗಣಾಚಾರಿ, ಎಸ್.ಆರ್.ಕಮ್ಮಾರ, ಡಾ.ಸಿ.ಬಿ.ಗಣಾಚಾರಿ, ಶಂಕರ ಕೋಟಗಿ, ಅಶೋಕ ಜಂತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts