More

    ಬೆಣ್ಣೆಹಣ್ಣು, ಡ್ರ್ಯಾಗನ್ ಹಣ್ಣು ಕೃಷಿಯಲ್ಲಿ ಲಾಭ

    ನಂಜನಗೂಡು: ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ರೈತರು ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಈ ಹಣ್ಣುಗಳ ಕೃಷಿ ಕೈಗೊಂಡರೆ ಆರ್ಥಿಕವಾಗಿ ಲಾಭ ಗಳಿಸಬಹುದಾಗಿದೆ ಎಂದು ಕೊಡಗಿನ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರದ ವಿಜ್ಞಾನಿ ಡಾ.ಮುರಳೀಧರ ಸಲಹೆ ನೀಡಿದರು.

    ತಾಲೂಕಿನ ಸುತ್ತೂರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮ ಕುರಿತು ಇತ್ತೀಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವೈಜ್ಞಾನಿಕ ಬೇಸಾಯ ಕ್ರಮ ಅನುಸರಿಸಿ ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನ ಕೃಷಿ ಕೈಗೊಳ್ಳುವುದರ ಜತೆಗೆ ಮಾರುಕಟ್ಟೆ ಕೌಶಲ ರೂಢಿಸಿಕೊಂಡಲ್ಲಿ ಖಂಡಿತವಾಗಿಯೂ ಲಾಭ ಗಳಿಸಬಹುದಾಗಿದೆ. ಬೆಣ್ಣೆ ಹಣ್ಣನ್ನು ಕಪ್ಪುಮಣ್ಣು ಅಥವಾ ಹೆಚ್ಚು ನೀರು ನಿಲ್ಲುವ ಜೌಗು ಪ್ರದೇಶದಲ್ಲಿ ಬೆಳೆದರೆ ಬೇರಿಗೆ ಕೊಳೆರೋಗದ ಬಾಧೆ ಕಾಡಲಿದೆ. ಆದ್ದರಿಂದ ಸೂಕ್ತ ಪ್ರದೇಶ ಆಯ್ಕೆ ಮಾಡಿಕೊಂಡು ಕೃಷಿ ಕೈಗೊಳ್ಳಬೇಕು. ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ಮಾಹಿತಿ ಹೊಂದಿರಬೇಕು ಎಂದರು.

    ಜೆಎಸ್‌ಎಸ್ ಕೆವಿಕೆ ಹಿರಿಯ ವಿಜ್ಞಾನಿ ಎಚ್.ವಿ.ದಿವ್ಯಾ ಮಾತನಾಡಿ, ಹಣ್ಣಿನ ಬೆಳೆಗಳಿಗೆ ಹೆಚ್ಚು ರಾಸಾಯನಿಕ ಬಳಸುವುದನ್ನು ನಿಯಂತ್ರಿಸಬೇಕು. ಬದಲಾಗಿ ಸಾವಯವ ಪದ್ಧತಿ ಮೂಲಕ ಕೃಷಿ ಕೈಗೊಳ್ಳಬೇಕು. ಅವಶ್ಯಕವಿದ್ದಲ್ಲಿ ಮಾತ್ರ ರಾಸಾಯನಿಕ ಗೊಬ್ಬರ ಬಳಸಬೇಕು. ಹಣ್ಣಿನ ಬೆಳೆಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಪರಿಚಯಿಸುವ ಮತ್ತು ಹಣ್ಣಿನ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ಹೇಳಿದರು.

    ರೈತ ಉತ್ಪಾದಕ ಕಂಪನಿಯ ಶಿವಕುಮಾರ್, ನಾಗಭೂಷಣ್ ಮಾತನಾಡಿದರು. ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ರಾಜಣ್ಣ, ಡಾ. ವಿನಯ್,ಶಾಮರಾಜ್, ಪ್ರಸಾದ್, ಗಂಗಪ್ಪ ಹಿಪ್ಪರಗಿ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts