More

    ಬಂಕಾಪುರದಲ್ಲಿ ರಸ್ತೆ ಮೇಲೆ ವ್ಯಾಪಾರ…ಟ್ರಾಫಿಕ್ ಜಾಮ್ ನಿರಂತರ

    ಬಂಕಾಪುರ: ಪಟ್ಟಣದ ವಿವಿಧೆಡೆ ಪ್ರಮುಖ ರಸ್ತೆಗಳ ಮೇಲೆಯೇ ವ್ಯಾಪಾರ, ವಹಿವಾಟು ನಡೆಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಪ್ರತಿದಿನವೂ ಟ್ರಾಫಿಕ್ ಜಾಮ್ಂದಾಗಿ ಪಾದಚಾರಿಗಳು, ವಾಹನ ಸವಾರರು ಬೇಸತ್ತು ಹೋಗಿದ್ದಾರೆ.

    ಬಂಕಾಪುರ ಪಟ್ಟಣ ಹೋಬಳಿ ಕೇಂದ್ರವಾಗಿದ್ದು, ಸುಮಾರು 35 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಪಟ್ಟಣಕ್ಕೆ ನಿತ್ಯ ನೂರಾರು ಜನ ವ್ಯಾಪಾರ ವಹಿವಾಟು, ಕಚೇರಿ ಕೆಲಸಗಳಿಗೆ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಪಟ್ಟಣದ ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.

    ರಸ್ತೆ ಅತಿಕ್ರಮಣ, ಸಣ್ಣ ವ್ಯಾಪಾರಸ್ಥರ ಕೈಗಾಡಿಗಳು, ರಸ್ತೆಗಳಲ್ಲಿ ನಿಲ್ಲುವ ದ್ವಿಚಕ್ರ ವಾಹನಗಳು ಸೂಕ್ತ ಸಂಚಾರ ನಿಯಂತ್ರಣ ಇಲ್ಲದಿರುವುದು, ದೊಡ್ಡ ವಾಹನಗಳ ಪ್ರವೇಶ, ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್​ಗಳು ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ವಿವಿಧ ರಸ್ತೆಗಳಲ್ಲಿ ಸಂಚರಿಸಲು ಅನನುಕೂಲವಾಗುತ್ತಿದೆ.

    ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಗಳಲ್ಲಿ ಒಂದಾಗಿರುವ ಬಂಕಾಪುರಕ್ಕೆ ಸಂಚಾರ ಸಮಸ್ಯೆಯು ದೊಡ್ಡ ರೋಗದಂತೆ ಕಾಡುತ್ತಿದೆ. ಚಿಕ್ಕದಾದ ರಸ್ತೆಗಳು ವ್ಯಾಪಾರಸ್ಥರಿಂದ ಅತಿಕ್ರಮಣವಾಗಿದೆ. ಕೆಲ ವ್ಯಾಪಾರಸ್ಥರು ರಸ್ತೆಯನ್ನು ತಮ್ಮದೆಂದೇ ಭಾವಿಸಿದ್ದಾರೆ. ರಸ್ತೆಯ ಬದಿಯಲ್ಲಿಯೇ ಸರಕು ಸಾಮಾನುಗಳನ್ನು ಇಟ್ಟು ಜನರು ಓಡಾಡುವುದಕ್ಕೆ ತೊಂದರೆ ಕೊಡುವುದು ಸಾಮಾನ್ಯವಾಗಿದೆ. ಬಹುತೇಕ ಪಾದಚಾರಿಗಳ ಮಾರ್ಗವೇ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಟ್ಟಣದ ಹೃದಯ ಭಾಗವಾದ ನಾಡಕಚೇರಿ, ಹೈಸ್ಕೂಲ್ ರಸ್ತೆ, ರೇಣುಕಾ ಟಾಕೀಜ್ ರಸ್ತೆ, ಶಹಬಜಾರ, ಆಸಾರ ಸರ್ಕಲ್, ಸಮುದಾಯ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ ರಸ್ತೆಗಳು ಅಂಗಡಿಕಾರರು, ಪ್ರಭಾವಿಗಳಿಂದ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಇಷ್ಟೆಲ್ಲ ತೊಂದರೆ ಇದ್ದರೂ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರ ನಿಯೋಜನೆ ಮಾಡುತ್ತಿಲ್ಲ. ಹೈಸ್ಕೂಲ್ ರಸ್ತೆಯಲ್ಲಿರುವ ವೈನ್ ಶಾಪ್ ಮುಂದೆ ಕುಡುಕರ ವಾಹನಗಳು ರಸ್ತೆ ಮಧ್ಯದಲ್ಲಿಯೇ ಇರುತ್ತವೆ. ಇದರಿಂದ ಮಹಿಳೆಯರು ಹಗಲು ಹೊತ್ತಿನಲ್ಲಿಯೇ ಸಂಚರಿಸುವುದು ದುಸ್ತರವಾಗಿದೆ. ಇನ್ನು ಆಸಾರ ಸರ್ಕಲ್​ನಿಂದ ಬಸ್ ನಿಲ್ದಾಣದ ರಸ್ತೆಯುದ್ದಕ್ಕೂ ದಿನಕ್ಕೊಂದು ಚಿಕನ್ ಅಂಗಡಿ, ಗ್ಯಾರೇಜ್​ಗಳು, ತರಕಾರಿ ಅಂಗಡಿಗಳು ತಲೆಯೆತ್ತುತ್ತಿವೆ. ಪಟ್ಟಣದ ಯಾವುದೇ ಶಾಲೆ, ಕಾಲೇಜು, ಆಸ್ಪತ್ರೆ, ವ್ಯಾಪಾರ ಮಳಿಗೆಗೆ ಹೋಗಬೇಕೆಂದರೂ ರಸ್ತೆಯಲ್ಲಿಯೇ ವಾಹನ ನಿಲುಗಡೆ ಮಾಡಬೇಕು. ಸಂಚಾರ ವ್ಯವಸ್ಥೆ ಸರಿಪಡಿಸಲು ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

    ಪಟ್ಟಣದ ಮುಖ್ಯ ರಸ್ತೆಗಳ ಅಗಲಿಕರಣ ಕಾಮಗಾರಿಗಳ ಜತೆಗೆ ನೆಹರು ಗಾರ್ಡನ್​ನ ಖಾಲಿ ಖಾಗದಲ್ಲಿ ವಾಹನಗಳ ರ್ಪಾಂಗ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗಾಗುವ ತೊಂದರೆಗಳನ್ನು ನಿವಾರಿಸಬಹುದು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

    ಬಂಕಾಪುರ ಪಟ್ಟಣದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ರಸ್ತೆಗಳಿಲ್ಲ. ಬಂಕಾಪುರ ಗ್ರಾಮ ಪಂಚಾಯತ್ ಇದ್ದಾಗ ಮಾಡಿದ ರಸ್ತೆಗಳ ಅಗಲೀಕರಣವಾಗಿಲ್ಲ. ಹೀಗಾಗಿ ಜನ ದಟ್ಟಣೆ ಹೆಚ್ಚಾಗುತ್ತಿದೆ. ಜತೆಗೆ ವಾಹನ ರ್ಪಾಂಗ್​ಗೆ ಜಾಗದ ಕೊರತೆ ಸಹ ಇದೆ. ರಸ್ತೆ ಅತಿಕ್ರಮಿಸಿಕೊಂಡಿರುವ ಅಂಗಡಿಗಳನ್ನು ಹಿಂದಕ್ಕೆ ಸರಿಸಲು ಕ್ರಮಕೈಗೊಳ್ಳಲಾಗುವುದು. ರ್ಪಾಂಗ್ ವ್ಯವಸ್ಥೆ ಮತ್ತು ರಸ್ತೆ ಅಗಲೀಕರಣ ಕುರಿತು ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಇಲಾಖೆ ಜತೆ ರ್ಚಚಿಸಿ ಕ್ರಮಕೈಗೊಳ್ಳಲಾಗುವುದು.

    | ಎ.ಶಿವಪ್ಪ, ಪುರಸಭೆ ಮುಖ್ಯಾಧಿಕಾರಿ ಬಂಕಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts