More

    ಕೌಟುಂಬಿಕ ಕಲಹಕ್ಕೆ ಉದ್ಯಮ ಸಾಮ್ರಾಜ್ಯ ಕಂಪನ

    ಹತ್ತಾರು ವರ್ಷಗಳ ನಿರಂತರ ಪರಿಶ್ರಮ, ಬದ್ಧತೆಯಿಂದ ಕಟ್ಟಿದ ಉದ್ಯಮ ಯಶಸ್ಸಿನ ಮಜಲು ಏರಿದ ಮೇಲೆ ಅದರ ನಿರ್ವಹಣೆಯೂ ಅಷ್ಟೇ ಸವಾಲಿನದ್ದು. ಕೌಟುಂಬಿಕ ಕಲಹಗಳು ಕೂಡ ಉದ್ಯಮವನ್ನು ಹೇಗೆ ಸಂಕಷ್ಟಕ್ಕೆ ನೂಕುತ್ತವೆ ಎಂಬುದಕ್ಕೆ ರೇಮಂಡ್ ಲಿಮಿಟೆಡ್​ನ ಕುಸಿತವೇ ಸಾಕ್ಷಿ. ಪತಿ-ಪತ್ನಿ ಜಗಳದ ಮಧ್ಯೆ ಕಳೆದ 10 ದಿನಗಳಲ್ಲೇ ರೇಮಂಡ್ 1,688 ಕೋಟಿ ರೂ. ಕಳೆದುಕೊಂಡಿದೆ.

    ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್​ನ ಖ್ಯಾತಿ ಭಾರತದ ಆಚೆಗೂ ಪಸರಿಸಿದೆ. ಒಂದು ಕಾಲದಲ್ಲಿ ಮುಕೇಶ್ ಅಂಬಾನಿಗಿಂತಲೂ ಸಿರಿವಂತರಾಗಿದ್ದರು ರೇಮಂಡ್​ನ ಸಂಸ್ಥಾಪಕ ವಿಜಯಪತ್ ಸಿಂಘಾನಿಯಾ. ವಯೋಸಹಜ ಕಾರಣಕ್ಕೆ ಉದ್ಯಮ ಸೇರಿ ಇತರ ಆಸ್ತಿಯನ್ನು ಮಗ ಗೌತಮ ಸಿಂಘಾನಿಯಾ ಅವರಿಗೆ ಒಪ್ಪಿಸಿದ್ದೇ ವಿಜಯಪತ್ ಅವರಿಗೆ ಮುಳುವಾಯಿತು. ಎಷ್ಟರ ಮಟ್ಟಿಗೆ ಎಂದರೆ, ಸಾವಿರಾರು ಕೋಟಿಯ ಒಡೆಯರಾಗಿದ್ದ ಇವರು ವಾಸಿಸಲು ಸ್ವಂತಮನೆಯೂ ಇಲ್ಲದೆ ಬಾಡಿಗೆಮನೆಯನ್ನು ಆಶ್ರಯಿಸಬೇಕಾಯಿತು. ಈ ದುಸ್ಥಿತಿಗೆ ಅಕ್ಷರಶಃ ಕಣ್ಣೀರಿಟ್ಟ ವಿಜಯಪತ್, ‘ಯಾವುದೇ ಕಾರಣಕ್ಕೂ ಎಲ್ಲ ಆಸ್ತಿಯನ್ನು ಮಕ್ಕಳಿಗೆ ಒಪ್ಪಿಸಬೇಡಿ. ನಿಮಗಾಗಿ ಒಂದಿಷ್ಟು ಆಸ್ತಿಯನ್ನು ಕಾಯ್ದುಕೊಳ್ಳಿ’ ಎಂದು ದೈನ್ಯದಿಂದ ಕೇಳಿಕೊಂಡರು.

    ಈ ಘಟನೆ ಮಾಸುವ ಮುನ್ನವೇ ಗೌತಮ್ ಸಿಂಘಾನಿಯಾಗೆ ವಿಚ್ಛೇದನ ನೀಡುತ್ತಿರುವುದಾಗಿ ಪತ್ನಿ ನವಾಜ್ ಮೋದಿ ಘೋಷಿಸಿದರು. ಇದರ ಬೆನ್ನಲ್ಲೇ, ನವಾಜ್ ಅವರು ರೇಮಂಡ್ ಆಸ್ತಿಯಲ್ಲಿ ಶೇಕಡ 75 ಪಾಲು ಬೇಕು ಎಂದು ಬೇಡಿಕೆ ಇಟ್ಟರು. ಹಾಗಾಗಿ, ಇದು ಕಾಪೋರೇಟ್ ಆಡಳಿತದ ಸಮಸ್ಯೆಯಾಗಿ ಪರಿಣಮಿಸಿತು. ಇವರ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಷೇರುಮಾರುಕಟ್ಟೆಯಲ್ಲಿ ರೇಮಂಡ್​ನ ಷೇರುಗಳು ಪಾತಾಳ ಕಂಡಿವೆ.

    ಕಳೆದ ಹತ್ತು ದಿನಗಳಲ್ಲೇ ಕಂಪನಿಯ ಷೇರುಗಳು ಶೇಕಡ 13ರಷ್ಟು ಕುಸಿತ ಕಂಡಿದ್ದು, 1,688 ಕೋಟಿ ರೂ. ನಷ್ಟವಾಗಿದೆ. ಷೇರಿನ 52 ವಾರಗಳ ಗರಿಷ್ಠ ಬೆಲೆ 2,240 ರೂ. ಆಗಿತ್ತು. ಪ್ರಸಕ್ತ ಅದು 1,647 ರೂ.ಗೆ ಕುಸಿದಿದೆ. ಇದಲ್ಲದೆ, ಇದೇ ಮೊದಲ ಬಾರಿ ಕಂಪನಿಯ ಮಾರುಕಟ್ಟೆ ಬಂಡವಾಳ 10,974 ಕೋಟಿ ರೂ.ಗೆ ಕುಸಿದಿದೆ. ಗೌತಮ್ ಸಿಂಘಾನಿಯಾ ವಿಚ್ಛೇದನದ ಸುದ್ದಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡ ದಿನದಿಂದಲೇ, ಕಂಪನಿಯ ಷೇರುಗಳು ಕುಸಿಯುತ್ತ ಸಾಗಿವೆ. ಸಿಂಘಾನಿಯಾ ದಂಪತಿ ವಿಚ್ಛೇದನಕ್ಕೂ ಮೊದಲು ಷೇರು ಮೌಲ್ಯ -ಠಿ;1,889 ಇತ್ತು.

    ಪತ್ನಿಯಿಂದ ಗಂಭೀರ ಆರೋಪ
    ತಂದೆ ವಿಜಯಪತ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ಗೌತಮ್ ಸಿಂಘಾನಿಯಾ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಕ್ರಮೇಣ ಈ ಪ್ರಕರಣ ತೆರೆಮರೆಗೆ ಸರಿಯಿತು. ಆದರೆ, ಗೌತಮ್ ಪತ್ನಿ ನವಾಜ್ ಮೋದಿ ಪತಿಯ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಂತೆ ಉದ್ಯಮ ವಲಯ ಅಚ್ಚರಿಗೆ ಒಳಗಾಯಿತು. ಗೌತಮ್ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ. ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ ನವಾಜ್. ‘ಎರಡು ತಿಂಗಳ ಹಿಂದೆ ಗೌತಮ್ ಕೋಪದ ಭರದಲ್ಲಿ ನನ್ನ ಮತ್ತು ಪುತ್ರಿಯೊಬ್ಬಳ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೆ ಒದ್ದಿದ್ದಾರೆ, ಗುದ್ದಿದ್ದಾರೆ, ದೈಹಿಕ ಹಲ್ಲೆ ನಡೆಸಿದ್ದಾರೆ’ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ 53 ವರ್ಷದ ನವಾಜ್ ಮೋದಿ. ಆದರೆ, ಗೌತಮ್ ಸಿಂಘಾನಿಯಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಎಲ್ಲ ಘಟನಾವಳಿಗಳ ಬಳಿಕ, ಪುತ್ರನ ವಿರುದ್ಧ ಆಕ್ರೋಶ ಹೊರಹಾಕಿರುವ 85 ವರ್ಷದ ವಿಜಯಪತ್ ಸಿಂಘಾನಿಯಾ ಸೊಸೆ ನವಾಜ್ ಬೆಂಬಲಕ್ಕೆ ನಿಂತಿದ್ದಾರೆ.

    ಬದಲಾದ ಸ್ಥಿತಿ
    ವಸ್ತ್ರೆೊದ್ಯಮದ ಟಾಪ್ ಬ್ರಾಂಡ್​ಗಳಲ್ಲಿ ರೇಮಂಡ್ ಒಂದು. ಹಂತ-ಹಂತವಾಗಿ ಯಶಸ್ಸಿನ ಮಜಲು ಏರಿದ್ದ ಕಂಪನಿ, ಈಗ ವೇಗವಾಗಿ ಇಳಿಕೆ ಕಾಣುತ್ತಿದೆ. ನವೆಂಬರ್ ಆರಂಭದಲ್ಲಿ ರೇಮಂಡ್ ಹೊಸ ಉದ್ಯಮ ಕ್ಷೇತ್ರವನ್ನು ಪ್ರವೇಶಿಸುವುದಾಗಿ ಘೋಷಿಸಿತ್ತು. ಇದರಿಂದ ಹೂಡಿಕೆದಾರರು ಸಂತಸಗೊಂಡಿದ್ದರು ಮತ್ತು ಷೇರುಗಳು ಏರಿಕೆ ಕಂಡಿದ್ದವು. ಆದರೆ, ಈ ಖುಷಿ ತುಂಬ ದಿನ ಉಳಿಯಲಿಲ್ಲ. ರೇಮಂಡ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ನವೆಂಬರ್ 13ರಂದು ವಿಚ್ಛೇದನದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ, ಕಂಪನಿಯ ಮಾರುಕಟ್ಟೆ ಬಂಡವಾಳ ಮತ್ತು ಷೇರು ಮೌಲ್ಯ ಕುಸಿಯತೊಡಗಿತು. ನವೆಂಬರ್ 13ರ ನಂತರ ಷೇರು ಮಾರುಕಟ್ಟೆ ವಹಿವಾಟು ನಡೆಸಿದ 10 ದಿನಗಳಲ್ಲಿಯೇ ಹೂಡಿಕೆದಾರರು 1,688 ಕೋಟಿ ರೂ. ಕಳೆದುಕೊಂಡಿದ್ದಾರೆ. ನವೆಂಬರ್ 12ರಂದು ರೇಮಂಡ್ ಷೇರು ಶೇಕಡ 0.71 ಏರಿಕೆ ಕಂಡು, 1902.65 ಮೌಲ್ಯಕ್ಕೆ ವಹಿವಾಟು ಕೊನೆಗೊಳಿಸಿತ್ತು. ನವೆಂಬರ್ 13ರಂದು (ಸಿಂಘಾನಿಯಾ ದಾಂಪತ್ಯ ಮುರಿದು ಬಿದ್ದ ಬಳಿಕ) ಶೇ.2.90 ಕುಸಿತ ಕಂಡು, 1,847.50 ರೂ.ಗೆ ಇಳಿಕೆ ಕಂಡಿತು. ರೇಮಂಡ್​ನಲ್ಲಿ ಶೇಕಡ 75 ಪಾಲು ಬೇಕೆಂದು ನ.22ರಂದು ನವಾಜ್ ಮೋದಿ ಅವರು ಬೇಡಿಕೆ ಇಡುತ್ತಿದ್ದಂತೆ, ಷೇರು ಮೌಲ್ಯ ಶೇ.4ರಷ್ಟು ಕುಸಿತ ಕಂಡವು. 2023 ಸೆಪ್ಟೆಂಬರ್ ಬಳಿಕ ಇದೇ ಮೊದಲ ಬಾರಿಗೆ ಕಂಪನಿ ಇಷ್ಟು ಕುಸಿತ ಅನುಭವಿಸಿದೆ. ನ.24ರಂದು ಶೇ.1.22 ಕುಸಿತ ಕಂಡು, 1,649.10 ರೂ.ಗೆ ವಹಿವಾಟು ಕೊನೆಗೊಳಿಸಿತು. 12,666.65 ಕೋಟಿ ರೂಪಾಯಿ ಇದ್ದ ಮಾರುಕಟ್ಟೆ ಬಂಡವಾಳ, 1,688 ಕೋಟಿ ರೂ. ಕುಸಿತ ಕಂಡು 10,978.67 ಕೋಟಿ ರೂ.ಗೆ ತಲುಪಿದೆ.

    ಉದ್ಯಮದ ವ್ಯಾಪ್ತಿ
    ಗೌತಮ್ ಸಿಂಘಾನಿಯಾ ಒಡೆತನದ ರೇಮಂಡ್ ಗ್ರೂಪ್ ವಸ್ತ್ರ, ಡೆನಿಮ್ ರಿಯಲ್ ಎಸ್ಟೇಟ್, ಕಂಜ್ಯುಮರ್ ಕೇರ್, ಇಂಜಿನಿಯರಿಂಗ್ ಸಹಿತ ಹಲವು ಉದ್ಯಮಗಳನ್ನು ಹೊಂದಿದೆ. ಭಾರತ ಮಾತ್ರವಲ್ಲದೆ, ಇಂಡೋನೇಷ್ಯಾ, ಬ್ರಿಟನ್, ಅಮೆರಿಕ ಮತ್ತು ಸ್ವಿಜರ್​ಲ್ಯಾಂಡ್​ನಲ್ಲಿ ಉದ್ಯಮ ಹೊಂದಿದೆ.

    ಐಷಾರಾಮಿ ಬದುಕು
    * ಗೌತಮ್ ಅವರಿಗೆ ಬಾಲ್ಯದಿಂದಲೇ ಕಾರುಗಳ ಬಗ್ಗೆ ವಿಶೇಷ ಆಸಕ್ತಿ. ಇದನ್ನು ಗಮನಿಸಿದ ತಂದೆ ವಿಜಯಪತ್, ಗೌತಮರ 18ನೇ ಹುಟ್ಟುಹಬ್ಬಕ್ಕೆ ಪ್ರಿಮಿಯರ್ ಪದ್ಮಿನಿ 1100 ಕಾರ್ ಉಡುಗೊರೆಯಾಗಿ ನೀಡಿದ್ದರು.

    * ಗೌತಮ್ ಅವರ ಬಳಿ ಪ್ರಸ್ತುತ ಟೆಸ್ಲಾ ಮಾಡಲ್ ಎಕ್ಸ್, ಫೆರಾರಿ, ಲೋಟಸ್ ಎಲಿಸ್ ಮತ್ತು ಆಡಿ ಕಂಪನಿಯ ಕಾರುಗಳು ಸೇರಿ ಹಲವು ವಾಹನಗಳಿವೆ.

    * 1999ರಲ್ಲಿ ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಮದುವೆಯಾದರು. ಇದಕ್ಕೂ ಮುನ್ನ ಅವರು ಎಂಟು ವರ್ಷಗಳ ಕಾಲ ರಿಲೇಷನ್​ಶಿಪ್​ನಲ್ಲಿದ್ದರು. ಆದರೆ, ಈ ಮದುವೆಗೆ ನವಾಜ್​ರ ತಂದೆಯ ವಿರೋಧವಿತ್ತು.

    * ಗೌತಮ್ ಅವರು 1986ರಲ್ಲಿ ಸಿಂಘಾನಿಯಾ ಕುಟುಂಬದ ಜೆಕೆ ಗ್ರೂಪ್ ಆಫ್ ಕಂಪನಿಗಳಿಗೆ ಸೇರಿದರು. ನಂತರ ಅವರು ಕುಟುಂಬದ ರೇಮಂಡ್ ಗ್ರೂಪ್​ಗೆ ಸೇರಿದರು, 1990ರಲ್ಲಿ ನಿರ್ದೇಶಕರಾದರು, ಜುಲೈ 1999ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು ಮತ್ತು ಸೆಪ್ಟೆಂಬರ್ 2000ರಲ್ಲಿ ಅಧ್ಯಕ್ಷರಾದರು. ಇವರ ಪತ್ನಿ ನವಾಜ್ ಮೋದಿ ಸಿಂಘಾನಿಯಾ ಕೂಡ ರೇಮಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

    * 2005ರಲ್ಲಿ ಮುಂಬೈಯ ಬಾಂದ್ರಾದಲ್ಲಿ ಗೌತಮ್ ನೈಟ್ ಕ್ಲಬ್​ನ್ನು ಆರಂಭಿಸಿದರು. ಬಾಲಿವುಡ್​ನ ಹಲವು ತಾರೆಗಳೊಂದಿಗೆ ಗೌತಮ್ ಸ್ನೇಹ ಹೊಂದಿದ್ದಾರೆ. ನಟಿ ರವಿನಾ ಟೆಂಡನ್ ಸಿಂಘಾನಿಯಾ ಕುಟುಂಬದ ಆಪ್ತಸ್ನೇಹಿತೆ.

    * ಮಹಾರಾಷ್ಟ್ರದ ಅಲಿಬಾಗ್​ನಲ್ಲಿ ಗೌತಮ್ ಫಾಮರ್್​ಹೌಸ್ ಹೊಂದಿದ್ದಾರೆ. ಇಲ್ಲಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗಾಗಿ ಪ್ರತಿ ವರ್ಷ ಹೊಸ ವರ್ಷದ ಪಾರ್ಟಿಯನ್ನು ಆಯೋಜಿಸುತ್ತಾರೆ.

    7 ಡಿವೈಎಸ್​ಪಿ, 14 ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts