More

    ಸಹಜತೆಗೆ ಮರಳದ ಬಸ್ ಓಡಾಟ: ಪೂರ್ಣ ಸಂಚಾರಕ್ಕೆ ತೆರೆದುಕೊಳ್ಳದೆ ಜನರಿಗೆ ಸಂಕಷ್ಟ

    ಮಂಗಳೂರು: ಕರೊನಾ ಎರಡನೇ ಅಲೆಯ ನಿರ್ಬಂಧ ಸಾಕಷ್ಟು ಸಡಿಲಿಕೆಯಾಗಿದೆ. ಸಭೆ ಸಮಾರಂಭಗಳು ಆರಂಭವಾಗುತ್ತಿವೆ. ವಾರಾಂತ್ಯ ಕರ್ಫ್ಯೂ ರದ್ದಾಗಿದೆ. ಆದರೂ ಎಲ್ಲ ಬಸ್‌ಗಳನ್ನು ಓಡಿಸುವ ಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಇಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಪೂರ್ಣ ಪ್ರಮಾಣದ ಸಂಚಾರ ಆರಂಭಿಸಿಲ್ಲ.

    ಅಧಿಕೃತ ಮೂಲಗಳ ಪ್ರಕಾರ 325 ಖಾಸಗಿ ಸಿಟಿ ಬಸ್‌ಗಳಲ್ಲಿ 275 ಹಾಗೂ ಸರ್ಕಾರದ 32 ನರ್ಮ್ ಬಸ್‌ಗಳಲ್ಲಿ 20 ಮಾತ್ರ ಸಂಚರಿಸುತ್ತಿವೆ. ಮೊದಲೇ ಕನಿಷ್ಠ ಬಸ್ ಓಡಾಡುತ್ತಿದ್ದ ಮಾರ್ಗಗಳಲ್ಲಿ ಪ್ರಯಾಣಿಕರು ನಿತ್ಯ ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಒಂದೇ ಮಾರ್ಗದಲ್ಲಿ ಅಧಿಕ ಬಸ್‌ಗಳನ್ನು ಓಡಿಸುತ್ತಿದ್ದ ಮಾಲೀಕರು ಕೆಲವು ಬಸ್‌ಗಳನ್ನು ಈಗ ಓಡಿಸುತ್ತಿಲ್ಲ. ಆದರೆ ಒಂದೆರಡು ಬಸ್‌ಗಳ ಮಾಲೀಕರು ಲಾಭವಿಲ್ಲದ ವ್ಯವಹಾರ ನಡೆಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ತೆರಿಗೆ ಪಾವತಿಸುವ ಹೆಚ್ಚುವರಿ ಅವಧಿ(ಗ್ರೇಸ್ ಪೀರಿಯಡ್) ವಿಸ್ತರಣೆ ಹೊರತಪಡಿಸಿದರೆ ಸಾರಿಗೆ ಉದ್ಯಮಕ್ಕೆ ಸರ್ಕಾರದ ಕಡೆಯಿಂದ ನಿರೀಕ್ಷಿತ ಬೆಂಬಲ ದೊರೆತಿಲ್ಲ ಎನ್ನುವ ಬೇಸರ ಬಸ್ ಮಾಲೀಕರಲ್ಲಿ ಇದೆ.

    ಡೀಸೆಲ್ ದರ ಏರಿಕೆ ಹೊಡೆತ: ಸಭೆ ಸಮಾರಂಭಗಳು ಪೂರ್ಣವಾಗಿ ಸಹಜ ಸ್ಥಿತಿಯಲ್ಲಿ ನಡೆಯುತ್ತಿಲ್ಲ. ಶಾಲಾ ಕಾಲೇಜುಗಳು ಹಿಂದಿನಂತೆ ಆರಂಭವಾಗಿಲ್ಲ. ಕಳೆದ ವಾರದ ತನಕವೂ ಇದ್ದ ವಾರಾಂತ್ಯ ಕರ್ಫ್ಯೂನಿಂದಾಗಿ ಜನರ ಓಡಾಟವೂ ಸಹಜ ಸ್ಥಿತಿಗೆ ಮರಳಿಲ್ಲ. ಅಲ್ಲದೆ ಸದ್ಯದ ಡೀಸೆಲ್ ದರ ಸಾರಿಗೆ ಉದ್ಯಮವನ್ನೇ ಕಂಗೆಡಿಸಿದೆ ಎಂದು ಬಸ್‌ಗಳ ಸಂಖ್ಯೆ ಕಡಿಮೆಯಾಗಲು ಕಾರಣ ಮುಂದಿಡುತ್ತಾರೆ ಬಸ್ ಮಾಲೀಕರು. ಸ್ವಲ್ಪ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಣೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಸಿಟಿ ಬಸ್ ಮಾಲೀಕರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ದಿಲ್‌ರಾಜ್ ಆಳ್ವ. ಮಂಗಳೂರು-ಎಲ್ಯಾರ್‌ಪದವು ಮಧ್ಯೆ ಸಂಚರಿಸುತ್ತಿದ್ದ ಏಳು ಬಸ್‌ಗಳಲ್ಲಿ ಈಗ ನಾಲ್ಕು ಬಸ್‌ಗಳು ಮಾತ್ರ ಪ್ರಯಾಣಿಸುತ್ತಿವೆ. ಮಂಗಳೂರು-ದೇರಳಕಟ್ಟೆ-ತಾರಿಗುಡ್ಡೆ-ಮದಕ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏಕೈಕ ಬಸ್ ಕೂಡ ಸಂಚಾರ ಸ್ಥಗಿತಗೊಳಿಸಿದೆ.

    ಕಳೆದ ವಾರ ವಾರಾಂತ್ಯ ಕರ್ಫ್ಯೂ ರದ್ದಾಗಿದ್ದರೂ ಜನರಲ್ಲಿ ಈ ಕುರಿತ ಗೊಂದಲ ದೂರವಾಗಿಲ್ಲ. ಶಾಲಾ ಕಾಲೇಜುಗಳೂ ಬಹುತೇಕ ಆರಂಭವಾಗಿಲ್ಲ. ಸಭೆ ಸಮಾರಂಭಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಡೀಸೆಲ್ ಬೆಲೆ ಏರಿಕೆ ಬಿಸಿ ತೀವ್ರವಾಗಿದೆ. ಒಟ್ಟು ಪರಿಣಾಮ ಬಸ್ ಉದ್ಯಮ ಕಷ್ಟದಲ್ಲಿದೆ. ಉದ್ಯಮ ಸಹಜ ಸ್ಥಿತಿಗೆ ಮರಳಲು ಸ್ವಲ್ಪ ಕಾಲಾವಕಾಶ ಬೇಕಾಗಬಹುದು.
    ಜಯಶೀಲ ಅಡ್ಯಂತಾಯ ಅಡ್ಯಾರ್ ಅಧ್ಯಕ್ಷ, ದ.ಕ. ಸಿಟಿ ಬಸ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts