More

    ಬಸ್‌ಗಳ ಮೇಲೆ ಲಾಕ್‌ಡೌನ್ ಎಫೆಕ್ಟ್

    ಭರತ್ ಶೆಟ್ಟಿಗಾರ್ ಮಂಗಳೂರು

    ಕರೊನಾ ಲಾಕ್‌ಡೌನ್ ಪ್ರತಿಯೊಂದು ಕ್ಷೇತ್ರದ ಮೇಲೆಯೂ ಒಂದಲ್ಲೊಂದು ರೀತಿಯಲ್ಲಿ ಪರಿಣಾಮ ಬೀರಿದೆ. ರಸ್ತೆ ಸಂಚಾರ ನಿರ್ಬಂಧದಿಂದಾಗಿ ನಿಲ್ಲಿಸಿರುವ ವಾಹನಗಳ, ಮುಖ್ಯವಾಗಿ ಬಸ್ಸುಗಳ ಬಾಳಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
    ಲಾಕ್‌ಡೌನ್‌ನಿಂದಾಗಿ ಶೇ.90ರಷ್ಟು ವಾಹನಗಳು ರಸ್ತೆಗಿಳಿಯದೆ ಡಿಪೋ, ಪೆಟ್ರೋಲ್ ಬಂಕ್, ರಸ್ತೆಬದಿಗಳಲ್ಲೇ ನಿಂತಿವೆ. ಮೂರು ವಾರಗಳಿಂದ ಈ ರೀತಿ ಸ್ತಬ್ಧವಾಗಿದ್ದು, ಮುಂದಿನ 15 ದಿನ ಮುಂದುವರಿಯುವುದು ಖಚಿತವಾಗಿದೆ. ಇದು ವಾಹನಗಳ ಪಾಲಿಗೆ ಮತ್ತಷ್ಟು ಹೊಡೆತ ನೀಡಲಿದೆ.

    ಓಡಾಟ ನಡೆಸದೆ ಒಂದೇ ಕಡೆ ನಿಲ್ಲಿಸುವುದರಿಂದ ಇಂಜಿನ್ ಮತ್ತಿತರ ಭಾಗಗಳಿಗೆ ತೊಂದರೆಯಾಗಬಹುದು. ವಾಹನಗಳ ಬ್ಯಾಟರಿ ಪವರ್ ಕಡಿಮೆಯಾಗುತ್ತದೆ. ಇದರಿಂದ ವಿದ್ಯುತ್‌ಗೆ ಸಂಬಂಧಿಸಿ ಭಾಗಗಳು ಕೆಲಸ ಮಾಡುವಲ್ಲಿ ತೊಡಕಾಗುತ್ತದೆ. ಹಳೇ ವಾಹನಗಳಾದರೆ ಬ್ಯಾಟರಿ ಬದಲಾಯಿಸಿ ಹೊಸತು ಅಳವಡಿಸಬೇಕಾಗಿ ಬರಬಹುದು. ಹಲವು ದಿನ ನಿಂತಲ್ಲೇ ಇರುವುದರಿಂದ ಟೈರ್‌ಗಳಲ್ಲಿ ಗಾಳಿ ಕಡಿಮೆಯಾಗುತ್ತವೆ. ಜತೆಗೆ ಇಲಿ, ಹೆಗ್ಗಣದಂತಹ ಪ್ರಾಣಿಗಳೂ ಅವುಗಳಲ್ಲಿ ವಾಸ ಮಾಡುವುದು, ವೈರ್, ಕೇಬಲ್‌ಗಳನ್ನು ತುಂಡರಿಸುವುದು ಮೊದಲಾದ ಸಂದರ್ಭವೂ ಎದುರಾಗುವ ಸಾಧ್ಯತೆಗಳಿವೆ.

    ವಾಹನ ಸಂಸ್ಥೆಗಳ ಸೂಚನೆ
    ಗ್ರಾಹಕರು ಯಾವ ರೀತಿ ತಮ್ಮ ವಾಹನಗಳನ್ನು ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ವಾಹನ ಮಾರಾಟ/ ಸರ್ವೀಸ್ ಸಂಸ್ಥೆಗಳು ಗ್ರಾಹಕರಿಗೆ ಮೆಸೇಜ್‌ಗಳ ಮೂಲಕ ಕೆಲವು ಸೂಚನೆ ನೀಡುತ್ತಿವೆ. ದಿನಕ್ಕೆ ಇಂತಿಷ್ಟು ನಿಮಿಷ ಸ್ಟಾರ್ಟ್ ಮಾಡಿ, ಬ್ಯಾಟರಿ ಚಾರ್ಜ್ ಮಾಡಬೇಕು. ಹ್ಯಾಂಡ್ ಬ್ರೇಕ್ ಹಾಕಿದ ಸ್ಥಿತಿಯಲ್ಲೇ ಬಿಡಬಾರದು, ಇದರಿಂದ ಬ್ರೇಕ್ ಜಾಮ್ ಆಗುವ ಸಾಧ್ಯತೆ ಇದೆ. ಕಾರುಗಳ ಕಿಟಕಿ ಗಾಜುಗಳನ್ನು ಪೂರ್ಣವಾಗಿ ಬಂದ್ ಮಾಡಬೇಡಿ, ಇದರಿಂದ ಗಾಜು ಒಡೆಯುವ ಸಾಧ್ಯತೆ ಇರುತ್ತದೆ ಎಂದೆಲ್ಲ ಎಚ್ಚರಿಕೆ ನೀಡಿವೆ. ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ಬರುವ ವಾಹನಗಳ ಸರ್ವೀಸ್ ಅವಧಿಯನ್ನು ಮುಂದೂಡಲಾಗಿದ್ದು, ಇದರಿಂದ ಲಾಕ್‌ಡೌನ್ ಮುಗಿದ ಬಳಿಕ ಸರ್ವೀಸ್‌ಗಾಗಿ ಗ್ರಾಹಕರ ಕ್ಯೂ ಇರುವ ಸಾಧ್ಯತೆಯೂ ಇದೆ.

    ಸಂಚಾರಿ ಸರ್ವೀಸ್‌ಗೂ ಅವಕಾಶವಿಲ್ಲ
    ಲಾಕ್‌ಡೌನ್ ಆರಂಭವಾದಂದಿನಿಂದ ವಾಹನಗಳ ಸರ್ವೀಸ್ ಸೆಂಟರ್, ಗ್ಯಾರೇಜ್‌ಗಳು ಬಂದ್ ಆಗಿವೆ. ತುರ್ತು ಸೇವೆಗಾಗಿ ಇರುವ ಸಂಚಾರಿ ಸರ್ವೀಸ್ ವಾಹನ, ಟೋಯಿಂಗ್ ವಾಹನಗಳಿಗೂ ಸಂಚಾರಕ್ಕೆ ಅನುಮತಿಯಿಲ್ಲ. ತಾಂತ್ರಿಕ ತೊಂದರೆ, ಟೈರ್ ಪಂಕ್ಚರ್‌ನಂತಹ ಸಮಸ್ಯೆಗಳಿಂದ ಹಲವು ವಾಹನಗಳು ಕೆಟ್ಟು ನಿಂತಿವೆ. ಈ ಕುರಿತು ಗ್ಯಾರೇಜ್‌ಗಳ ಸಂಘಟನೆ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿದ್ದು, ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಇದರಿಂದಾಗಿ ತುರ್ತು ಕರೆ ಬರುವ ವಾಹನಗಳನ್ನು ದುರಸ್ತಿ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಂಚಾರಿ ಸರ್ವೀಸ್ ವಾಹನ ಮೆಕಾನಿಕ್‌ಗಳು.

    ಡಿಪೋಗಳಲ್ಲಿ ನಿಲ್ಲಿಸಿರುವ ಬಸ್‌ಗಳನ್ನು ಎರಡು ದಿನಕ್ಕೊಮ್ಮೆಯಾದರೂ ಸ್ಟಾರ್ಟ್ ಮಾಡಿ, ಬ್ಯಾಟರಿ ಚಾರ್ಜ್ ಮಾಡಬಹುದು. ಆದರೆ ಪೆಟ್ರೋಲ್ ಪಂಪ್, ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿರುವ ಬಸ್‌ಗಳು ಕಳೆದ ಹಲವು ದಿನಗಳಿಂದ ಹಾಗೆಯೇ ಇವೆ. ಮುಂದಕ್ಕೆ ಸಂಚಾರ ಅನುಮತಿ ಸಿಕ್ಕ ಬಳಿಕ ಇಂತಹ ಬಸ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಬಹುದು. ಈಗಾಗಲೇ ನಷ್ಟದಲ್ಲಿರುವ ಮಾಲೀಕರಿಗೆ ಇದು ಇನ್ನೊಂದು ಸಮಸ್ಯೆಯಾಗಿ ಕಾಡಬಹುದು.
    – ದಿಲ್‌ರಾಜ್ ಆಳ್ವ
    ದ.ಕ ಬಸ್ ಮಾಲೀಕರ ಸಂಘದ ಅಧ್ಯಕ್ಷ

    ವಾಹನಗಳನ್ನು ಹಲವು ಸಮಯ ಸ್ಟಾರ್ಟ್ ಮಾಡದೆ ನಿಲ್ಲಿಸಿದರೆ, ಬ್ಯಾಟರಿ ವೀಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ತಿಂಗಳ ಕಾಲ ಹಾಗೇ ಇದ್ದರೆ ವಾಹನಗಳ ಬಾಳಿಕೆ ಮೇಲೂ ಪರಿಣಾಮ ಬೀಳುತ್ತದೆ. ಮನೆಯಲ್ಲಿ ನಿಲ್ಲಿಸಿರುವ ವಾಹನ ಸ್ಟಾರ್ಟ್ ಆಗದಿರುವ ಕುರಿತಂತೆ ದುರಸ್ತಿಗೆ ದಿನಕ್ಕೆ ಕನಿಷ್ಠ 10 ಕರೆಯಾದರೂ ಬರುತ್ತದೆ.
    – ಸುಧೀಂದ್ರ
    ವಾಹನ ದುರಸ್ತಿ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts