More

    ಸಾರಿಗೆ ಸಂಸ್ಥೆಗೆ 35 ಕೋಟಿ ರೂ.,ನಷ್ಟ ; ಕರೊನಾ 2ನೇ ಅಲೆ ಎಫೆಕ್ಟ್ ; 2 ತಿಂಗಳಿನಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ

    ಶಿರಾ ; ಕರೊನಾ ಎರಡನೇ ಅಲೆ ನಿಯಂತ್ರಿಸಲು ಜನತಾ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದ್ದರಿಂದ ತುಮಕೂರು ವಿಭಾಗೀಯ ಘಟಕವು ಅಂದಾಜು 35 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಏ.28ರಂದು ಬಸ್‌ಗಳು ಡಿಪೋ ಸೇರಿದ್ದವು. ಜೂ.20ಕ್ಕೆ ರಸ್ತೆಗಿಳಿಯದೆ ಬರೋಬ್ಬರಿ 54 ದಿನಗಳಾಗಲಿದೆ. ಸೋಮವಾರದಿಂದ ಸೇವೆ ಪುನರಾರಂಭಗೊಳ್ಳುವ ನಿರೀಕ್ಷೆ ಇದ್ದು, ಪ್ರತೀ ಬಸ್‌ನಲ್ಲಿ ಶೇ.50 ಸೀಟು ಭರ್ತಿಗೆ ಅವಕಾಶ ಇರಲಿದೆ.

    54 ದಿನ, 34 ಕೋಟಿ ನಷ್ಟ : ಲಾಕ್‌ಡೌನ್ ಬಳಿಕ 54 ದಿನಗಳು ಸಂಚಾರ ಸ್ಥಗಿತಗೊಂಡಿದ್ದು, ಪ್ರತಿನಿತ್ಯದ ಸರಾಸರಿ 64-65 ಲಕ್ಷ ರೂಪಾಯಿ ಆದಾಯಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ತುಮಕೂರು ವಿಭಾಗೀಯ ಘಟಕವು ಕಳೆದ ಎರಡು ತಿಂಗಳಲ್ಲಿ ಅಂದಾಜು 35 ಕೋಟಿ ರೂ., ನಷ್ಟ ಅನುಭವಿಸಿದೆ.

    ಶಿರಾ, ತಿಪಟೂರು, ತುರುವೇಕೆರೆ, ಮಧುಗಿರಿ, ಕುಣಿಗಲ್ ಹಾಗೂ ತುಮಕೂರು 1ನೇ ಡಿಪೋ, 2ನೇ ಡಿಪೋಗಳು ಸೇರಿ ಒಟ್ಟು 8 ಡಿಪೋಗಳಲ್ಲಿ 680 ಬಸ್‌ಗಳಿಂದ ಪ್ರತಿನಿತ್ಯ ಸರಾಸರಿ 65 ಲಕ್ಷ ರೂ.,ವರೆಗೆ ಆದಾಯ ವಿಭಾಗೀಯ ಘಟಕಕ್ಕೆ ಬರುತ್ತಿತ್ತು. ಇತ್ತೀಚೆಗೆ ಸಾರಿಗೆ ನೌಕರರ ಮುಷ್ಕರದಿಂದ ನಷ್ಟ ಅನುಭವಿಸಿದ್ದ ಘಟಕವು ಈಗ ಕರೊನಾ ಎಫೆಕ್ಟ್‌ನಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಿದೆ.

    ಲಸಿಕೆ ಕಡ್ಡಾಯ : ಲಾಕ್‌ಡೌನ್ ಇನ್ನಷ್ಟು ಸಡಿಲಿಕೆ ಬಳಿಕ ಬಸ್ ಸಂಚಾರಕ್ಕೆ ಅವಕಾಶ ದೊರೆತರೆ ಕರ್ತವ್ಯಕ್ಕೆ ನಿಯೋಜಿಸಲಾಗುವ ಬಸ್ ಚಾಲಕರು ಹಾಗೂ ನಿರ್ವಾಹಕರು ಕಡ್ಡಾಯ ಕರೊನಾ ಲಸಿಕೆ ಹಾಕಿಸಿಕೊಂಡಿರಬೇಕು. ಸಾರಿಗೆ ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ಪ್ರತಿಯೊಬ್ಬ ಸಿಬ್ಬಂದಿಗೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಮುಖಗವಸು ಹಾಗೂ ಕೈಗವಸುಗಳನ್ನು ನೀಡಲಾಗುವುದು.

    51 ಸಿಟಿ ಬಸ್ : ತುಮಕೂರು ನಗರ ಸಾರಿಗೆ 51 ಬಸ್‌ಗಳಿದ್ದು ಇವುಗಳ ಸೇವೆ ಕೂಡ ಏ.28ರಿಂದ ರದ್ದಾಗಿದೆ. ಪ್ರತಿನಿತ್ಯ ಸಿಟಿ ಬಸ್‌ನಿಂದ 2 ಲಕ್ಷ ರೂ., ಆದಾಯ ಬರುತ್ತಿತ್ತು. ಒಟ್ಟಾರೆ 1 ಕೋಟಿಯಷ್ಟು ನಷ್ಟ ಉಂಟಾಗಿದೆ.

    ನಮ್ಮ ಡಿಪೋದ 81 ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆೆ. ಪ್ರತಿದಿನ ಸರಾಸರಿ 7.5 ಲಕ್ಷ ರೂ., ಆದಾಯ ಬರುತ್ತಿದ್ದು, ಅಂದಾಜು 4 ಕೋಟಿ ರೂಪಾಯಿ ನಷ್ಟವಾಗಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಸೇವೆ ಆರಂಭಿಸಲು ಸರ್ಕಾರ ಸೂಚನೆ ನೀಡುವ ನಿರೀಕ್ಷೆ ಇದ್ದು, ಎಲ್ಲ ಬಸ್‌ಗಳನ್ನು ಸಂಚಾರಕ್ಕೆ ಅಣಿಗೊಳಿಸಲಾಗುತ್ತಿದೆ.
    ವಿನೋದ್ ಅಮ್ಮಣಗಿ, ಡಿಪೋ ಮ್ಯಾನೇಜರ್, ಶಿರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts