More

    ಬುಲೆಟ್ ಇನ್ನು ನೆನಪು ಮಾತ್ರ: ರೆಡಿ ಆಗ್ತೀನಿ ಎಂದವನು ಬರಲೇ ಇಲ್ಲ….

    ಬೆಂಗಳೂರು: ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ದೈತ್ಯ ದೇಹದಿಂದ ಮನೆಮಾತಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಸೋಮವಾರ ಸಂಜೆ ಬಹುಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಪ್ರಕಾಶ್ ಇದ್ದ ಕಡೆ ಹಾಸ್ಯ, ನಗು ಇದ್ದೇ ಇರುತ್ತಿತ್ತು. ತಮ್ಮ ರಸವತ್ತಾದ ಮಾತುಗಳಿಂದ ಎಲ್ಲರ ಮನರಂಜಿಸುತ್ತಿದ್ದರು ಅವರು. ಹೀಗೆ ಎಲ್ಲರನ್ನೂ ನಗಿಸುತ್ತದ್ದ ಅವರು ಮಾತ್ರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಂಡಿದ್ದರು. ಪ್ರಕಾಶ್ ಎಂಬ ಬಳೇಪೇಟೆಯ ಒಬ್ಬ ಸಾಮಾನ್ಯ ಯುವಕ, ಗಾಂಧಿನಗರದಲ್ಲಿ ಬುಲೆಟ್ ಪ್ರಕಾಶ್ ಎಂದು ಗುರುತಿಸಿಕೊಂಡು, ಕನ್ನಡಿಗರ ಹತ್ತಿರವಾಗಿದ್ದು ಹೇಗೆ ಎಂಬ ಅವಲೋಕನ ಇಲ್ಲಿದೆ.

    ರವಿಚಂದ್ರನ್ ಇಟ್ಟ ಹೆಸರು: ಮೂಲತಃ ಬಳೆಪೇಟೆಯವರಾದ ಪ್ರಕಾಶ್ ರಾಯಲ್ ಎನ್​ಫೀಲ್ಡ್ ಬುಲೆಟ್ ಬೈಕ್​ವೊಂದನ್ನು ಇಟ್ಟುಕೊಂಡಿದ್ದರು. ಚಿತ್ರೀಕರಣಕ್ಕೆ ಆ ಬೈಕ್​ನಲ್ಲಿ ಹೋಗುತ್ತಿದ್ದ ಪ್ರಕಾಶ್ ಅವರಿಗೆ ‘ಪ್ರೀತ್ಸು ತಪ್ಪೇನಿಲ್ಲ’ ಎಂಬ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಬುಲೆಟ್ ಪ್ರಕಾಶ್ ಎಂದು ನಾಮಕರಣ ಮಾಡಿದವರು ರವಿಚಂದ್ರನ್. ಅಲ್ಲಿಂದ ಕೊನೆಯವರೆಗೂ ಅದೇ ಹೆಸರಿನಲ್ಲಿ ಗುರುತಿಸಿಕೊಂಡು ಬಂದರು.

    ಕಾಮಿಡಿಯಲ್ಲಿ ಎತ್ತಿದ ಕೈ: 90ರ ದಶಕದ ಅಂತ್ಯದಲ್ಲಿ ಶಿವರಾಜಕುಮಾರ್ ಅಭಿನಯದ ‘ಎಕೆ 47’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬುಲೆಟ್ ಪ್ರಕಾಶ್ ಅವರು, ‘ಧ್ರುವ’, ‘ಕಲಾಸಿಪಾಳ್ಯ’, ‘ಜಾಕಿ’, ‘ಪರಾರಿ’, ‘ಆರ್ಯನ್’ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಅವರ ಜೋಡಿ, ಪ್ರೇಕ್ಷಕರನ್ನು ಹಲವು ಚಿತ್ರಗಳಲ್ಲಿ ನಕ್ಕುನಲಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು. ತಮ್ಮ ವಿಭಿನ್ನ ಮಾತಿನ ಶೈಲಿಯಿಂದ ಬೇಡಿಕೆಯ ನಗೆನಟರಾಗಿದ್ದ ಪ್ರಕಾಶ್, ಕಳೆದ ದಶಕದಲ್ಲಿ ಕನ್ನಡದ ಎಲ್ಲಾ ಜನಪ್ರಿಯ ಹೀರೋಗಳ ಜತೆಗೂ ನಟಿಸಿದ್ದರು.

    ಸರ್ಜರಿ ಮಾಡಿಸಿದ್ದೇ ತಪ್ಪಾಯಿತು: ತಮ್ಮ ದೈತ್ಯ ದೇಹದಿಂದ ಗುರುತಿಸಿಕೊಂಡಿದ್ದ ಪ್ರಕಾಶ್, ಒಂದು ಹಂತದಲ್ಲಿ 150 ಕೆಜಿಯಷ್ಟಾಗಿದ್ದರು. ಅತಿಯಾದ ತೂಕದಿಂದ ಬಳಲುತ್ತಿದ್ದ ಅವರು, ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿಸಿಕೊಳ್ಳುವ ಮೂಲಕ ತೂಕ ಕಡಿಮೆ ಮಾಡಿಕೊಂಡರು. ಕ್ರಮೇಣ ಜಾಂಡಿಸ್ ಸೇರಿದಂತೆ ಹಲವು ಖಾಯಿಲೆಗಳಿಂದ ಬಳಲಿದ ಅವರು, ಹಲವು ದಿನಗಳ ಕಾಲ ಅಭಿನಯದಿಂದ ದೂರವೇ ಇದ್ದರು. ಈ ಸಂದರ್ಭದಲ್ಲಿ ಚಿತ್ರರಂಗ ನಡೆಸಿಕೊಂಡ ರೀತಿ, ಅವರು ನಟಿಸುವುದಿಲ್ಲ ಎಂಬ ಅಪಪ್ರಚಾರ … ಇದೆಲ್ಲದರಿಂದ ಬೇಸತ್ತು ಸಾಕಷ್ಟು ಖಿನ್ನತೆಗೂ ಒಳಗಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಚೇತರಿಸಿಕೊಂಡಿದ್ದ ಅವರು, ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುವ ಆಸೆ ವ್ಯಕ್ತಪಡಿಸಿದ್ದರು. ಆದರೆ, ಅದು ಕೊನೆಗೂ ಸಾಧ್ಯವಾಗಲಿಲ್ಲ.

    ನನಸಾಗದ ರಾಜಕೀಯದ ಕನಸು: ಬುಲೆಟ್ ಪ್ರಕಾಶ್ ಅವರಿಗೆ ನಟನೆಯ ಜತೆಗೆ ಆಸಕ್ತಿ ಇದ್ದ ಇನ್ನೊಂದು ಕ್ಷೇತ್ರವೆಂದರೆ, ಅದು ರಾಜಕೀಯ. ಸಮಾಜಸೇವೆ ಮಾಡಬೇಕು, ಕಾರ್ಪೆರೇಟರ್ ಆಗಬೇಕು ಎಂದು ಕನಸು ಕಂಡು ಕೆಲವು ಪಕ್ಷಗಳಿಗೆ ಸೇರಿದರಾದರೂ, ಪ್ರಕಾಶ್ ಅವರ ಕನಸು ನನಸಾಗಲಿಲ್ಲ. ಅಂತಿಮವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ಅವರು, ಚುನಾವಣೆಗೆ ನಿಲ್ಲುತ್ತಾರೆ ಎಂಬ ಸುದ್ದಿ ಇದ್ದರೂ, ಚುನಾವಣಾ ರಾಜಕೀಯದಿಂದ ಪ್ರಕಾಶ್ ದೂರವೇ ಇದ್ದರು.

    ನಿರ್ಮಾಣದ ಆಸೆಯೂ ಕೈಗೂಡಲಿಲ್ಲ: ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದ ಪ್ರಕಾಶ್, 10 ವರ್ಷಗಳ ಹಿಂದೆ ಎಂ.ಜಿ. ರಾಮಮೂರ್ತಿ ಅವರ ಜತೆಗೆ ಸೇರಿಕೊಂಡು ‘ಐತಲಕ್ಕಡಿ’ ಎಂಬ ಸಿನಿಮಾ ನಿರ್ವಿುಸಿದ್ದರು. ಇನ್ನು ದರ್ಶನ್ ಅಭಿನಯದಲ್ಲಿ ಒಂದು ಚಿತ್ರ ನಿರ್ವಿುಸಬೇಕು ಎಂಬುದು ಪ್ರಕಾಶ್ ಆಸೆಯಾಗಿತ್ತು. ಈ ಮಧ್ಯೆ ಚಿತ್ರದ ವಿಷಯವಾಗಿ ದರ್ಶನ್ ಸಹೋದರ ದಿನಕರ್ ಮತ್ತು ಪ್ರಕಾಶ್ ನಡುವೆ ಜಗಳವಾಗಿ, ಪ್ರಕರಣ ಪೊಲೀಸ್ ಸ್ಟೇಶನ್ ಮೆಟ್ಟಿಲು ಏರಿತ್ತು. ಆ ನಂತರ ಚಿತ್ರ ನಿರ್ಮಾಣ ಸಾಧ್ಯವಾಗಲೇ ಇಲ್ಲ.

    ಕಿಡ್ನಿ, ಲಿವರ್ ವೈಫಲ್ಯ: ಕಳೆದ ಕೆಲವು ದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಅವರನ್ನು ಇತ್ತೀಚೆಗೆ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಬುಲೆಟ್ ಚಿಕಿತ್ಸೆಗೆ ಸ್ಪಂದಿಸಿದರಾದರೂ, ಕ್ರಮೇಣ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿತ್ತು. ಬುಲೆಟ್ ಪ್ರಕಾಶ್ ಅವರಿಗೆ ಕಿಡ್ನಿ ಮತ್ತು ಲಿವರ್ ವೈಫಲ್ಯ ಆಗಿದ್ದು, ವೆಂಟಿಲೇಟರ್ ಅಳವಡಿಸಲಾಗಿತ್ತು. ಸತತ ಹೋರಾಟದ ನಂತರ ಬುಲೆಟ್ ಪ್ರಕಾಶ್ ಇನ್ನಿಲ್ಲವಾಗಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ, ಅಭಿನಯಿಸುವುದನ್ನು ಕಡಿಮೆ ಮಾಡಿದ್ದ ಬುಲೆಟ್ ಪ್ರಕಾಶ್ ಅವರು ಇತ್ತೀಚೆಗೆ ‘ಮೆಹಬೂಬ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆ ಚಿತ್ರಗಳೆಲ್ಲಾ ಬಿಡುಗಡೆಯಾಗುವ ಮುನ್ನವೇ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ. ಪತ್ನಿ, ಪುತ್ರ, ಪುತ್ರಿ ಸೇರಿದಂತೆ ನೂರಾರು ಅಭಿಮಾನಿಗಳನ್ನು ಅಗಲಿರುವ ಪ್ರಕಾಶ್ ಅವರ ಅಂತ್ಯ ಸಂಸ್ಕಾರ ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಡೆಯಲಿದೆ.

    ರೆಡಿ ಆಗ್ತೀನಿ ಎಂದವನು ಬರಲೇ ಇಲ್ಲ: ರಂಗಾಯಣ ರಘು
    ಬುಲೆಟ್ ಪ್ರಕಾಶ್ ಮತ್ತು ರಂಗಾಯಣ ರಘು ಒಳ್ಳೆಯ ಸ್ನೇಹಿತರಾಗಿದ್ದವರು. ಜತೆಗೆ ಹಲವು ಚಿತ್ರಗಳಲ್ಲಿ ನಟಿಸಿದವರು. ತಮ್ಮ ಮಿತ್ರನ ಅಗಲಿಕೆಯ ಕುರಿತು ಮಾತನಾಡಿದ ರಘು, ‘ಅವನಿಗಿನ್ನೂ ಚಿಕ್ಕ ವಯಸ್ಸು. ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದ. ಹಲವು ಆಸೆ ಇಟ್ಟುಕೊಂಡಿದ್ದ. ನನ್ನನ್ನು ಅಪ್ಪಾಜಿ ಅಂತಲೇ ಕರೆಯುತ್ತಿದ್ದ ಅವನು, ಸದಾ ಕಷ್-ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಕಳೆದ ವಾರ ಸಹ ಫೋನ್ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಹೇಳಿದ್ದ. ಬಹಳ ಬೇಗ ರೆಡಿಯಾಗಿ ಬರುತ್ತೀನಿ ಎಂದವನು ಬರಲೇ ಇಲ್ಲ’ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ ರಘು.

    ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

    ಮಿಲ್ಕ್​ಪಾರ್ಲರ್ ಮಾಲೀಕನಿಗೆ ಪೊಲೀಸರಿಂದ ಹಲ್ಲೆ?, ಮಾಮೂಲಿ ಕೊಡದಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts