More

    ನಕ್ಷೆ ಮಂಜೂರಾತಿ, ಅಭಿವೃದ್ಧಿ ಶುಲ್ಕ ಹೆಚ್ಚಳದಲ್ಲಿ ಗೊಂದಲ : ಸ್ಪಷ್ಟನೆಗೆ ಪಾಲಿಕೆ ಮನವಿ

    ಬೆಂಗಳೂರು : ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಳ, ಶೇ.0.8 ಅಭಿವೃದ್ಧಿ ಶುಲ್ಕ ಏರಿಕೆ ಹಾಗೂ ಕೆಂದ್ರ ಭಾಗದ ಕಟ್ಟಡಗಳಿಗೆ ಮೆಟ್ರೋ, ರಿಂಗ್ ರಸ್ತೆ ಅಭಿವೃದ್ಧಿ ಸೆಸ್ ಜಾರಿಗೊಳಿಸುವ ಕುರಿತು ಗೊಂದಲಗಳಿಗೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

    ಕರ್ನಾಟಕ ಯೋಜನಾ ಪ್ರಾಧಿಕಾರದ ಆದೇಶದ ಅನ್ವಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸೆಪ್ಟೆಂಬರ್‌ನಲ್ಲಿ ಪರಿಷ್ಕೃತ ದರ ಜಾರಿಗೊಳಿಸಿ 2020ರ ಫೆ. 25ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಇದರಲ್ಲಿ ನಕ್ಷೆ ಮಂಜೂರಾತಿಗೆ (ಒಂದು ಅಂತಸ್ತು) ಪ್ರತಿ ಚ.ಮೀ. ವಸತಿ ಕಟ್ಟಡಕ್ಕೆ ಶೇ.0.5, ಕೈಗಾರಿಕೆ ಕಟ್ಟಡಗಳಿಗೆ ಶೇ.1 ಹಾಗೂ ವಾಣಿಜ್ಯ ಕಟ್ಟಡಕ್ಕೆ ಶೇ.1.5 ಶುಲ್ಕ ಹೆಚ್ಚಿಸಲಾಗಿತ್ತು. ಬಹುಮಹಡಿ ಕಟ್ಟಡ ನಕ್ಷೆ ಮಂಜೂರಾತಿಗೆ ಮತ್ತು ವಸತಿ ಸಂಕೀರ್ಣಗಳಿಗೆ ಪ್ರತಿ ಚ.ಮೀ.ಗೆ 20 ರೂ. ಕೈಗಾರಿಕೆ ಕಟ್ಟಡಗಳಿಗೆ 40 ರೂ. ಹಾಗೂ ವಾಣಿಜ್ಯ ಕಟ್ಟಡಗಳಿಗೆ 100 ರೂ. ದರ ವಿಧಿಸಲಾಗಿತ್ತು.

    ನಗರದ ಕೇಂದ್ರಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮೆಟ್ರೋ, ನೀರು ಸರಬರಾಜು ಯೋಜನೆ, ರಿಂಗ್ ರಸ್ತೆ, ಕೊಳೆಗೇರಿ ಹಾಗೂ ಬೃಹತ್ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಕರವನ್ನು ಶೇ.0.8 ಹೆಚ್ಚಿಸಲಾಗಿತ್ತು. ಆದರೆ, ಈಗಾಗಲೇ ಕೇಂದ್ರ ಭಾಗದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದ 100 ವಾರ್ಡ್‌ಗಳ ಜನರು ನೀರು ಸರಬರಾಜು ಯೋಜನೆ, ಮೆಟ್ರೋ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಕರ (ಸೆಸ್) ಪಾವತಿಸುತ್ತಿದ್ದಾರೆ. ಈ ಆದೇಶದಿಂದ ಮತ್ತೊಮ್ಮೆ ಹೊಸ ಅಭಿವೃದ್ಧಿ ಸೆಸ್ ಪಾವತಿಸಬೇಕೇ ಎಂಬ ಗೊಂದಲ ಸೃಷ್ಟಿಯಾಗಿದೆ.

    ಕಟ್ಟಡ ನಿರ್ಮಾಣ ವೆಚ್ಚಕ್ಕಿಂತ ಹೆಚ್ಚು ಕರ : ನಿವೇಶನಕ್ಕಿಂತ ಕಡಿಮೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿದರೂ ನಿವೇಶನದ ಆಧಾರದಲ್ಲಿ ಅಭಿವೃದ್ಧಿ ಕರ ಪಾವತಿಸಬೇಕಿದೆ. ಇದರಿಂದ ಕಟ್ಟಡ ನಿರ್ಮಾಣ ವೆಚ್ಚಕ್ಕಿಂತ ಹೆಚ್ಚು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡುವಂತೆ ಬಿಬಿಎಂಪಿ ನಗರ ಯೋಜನಾ ವಿಭಾಗದಿಂದ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts