More

    ಬಜೆಟ್ ತಯಾರಿ, ಬೇಡಿಕೆ ಭರ್ಜರಿ!: ವಿಶೇಷ ಕಾರ್ಯಯೋಜನೆಗಳ ಪ್ರಸ್ತಾಪ, ಅಹವಾಲುಗಳ ಸಲ್ಲಿಕೆ, ಮುಖ್ಯಮಂತ್ರಿ ಆಲಿಕೆ

    ಬೆಂಗಳೂರು: ನದಿ ಮೂಲಗಳ ಸಂರಕ್ಷಣೆಗೆ ಸಮಗ್ರ ಯೋಜನೆ ಸೇರಿ ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಯೋಜನೆಗಳನ್ನು ಬಜೆಟ್​ನಲ್ಲಿ ಸೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ವಿವಿಧ ಕ್ಷೇತ್ರಗಳ ಗಣ್ಯ ನಿಯೋಗ ಗುರುವಾರ ಮನವಿ ಮಾಡಿದೆ. ವಿಧಾನಸೌಧದಲ್ಲಿ ಸಿಎಂ ಭೇಟಿಯಾದ ನಿಯೋಗ ಬಜೆಟ್​ನಲ್ಲಿ ಸೇರಿಸಬೇಕಾದ ವಿಶೇಷ ಯೋಜನೆಗಳ ಕುರಿತು ರ್ಚಚಿಸಿತು. ರಾಜ್ಯದಲ್ಲಿ 22 ಪ್ರಮುಖ ನದಿಗಳು, 180 ಉಪನದಿಗಳ ಮೂಲಗಳಿವೆ. ಈ ನದಿ ಮೂಲಗಳ ಸಂವರ್ಧನೆ, ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಿ ಜಾರಿ ಮಾಡಲು ಕೋರಿತು.

    ಸಮೀಕ್ಷೆ, ಜಾಗೃತಿ, ಸಂರಕ್ಷಣೆ ಒಳಗೊಂಡ ಸಮಗ್ರ ಯೋಜನೆ ಬಜೆಟ್​ನಲ್ಲಿ ಘೋಷಿಸಿದರೆ ದೇಶದಲ್ಲೇ ಮೊದಲ ನದಿಮೂಲ ಉಳಿಸಿ ಯೋಜನೆ ಎನಿಸಿಕೊಳ್ಳಲಿದೆ. ಹಲವಾರು ಸಂಸ್ಥೆಗಳು, ವಿಜ್ಞಾನಿಗಳು ಹಾಗೂ ಧಾರ್ವಿುಕ ಮುಖಂಡರು ಈ ಯೋಜನೆಗೆ ಒತ್ತಾಸೆಯಾಗಿದ್ದು, 2013ರಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಅಭಿಯಾನ ನಡೆಸಿದ್ದನ್ನು ಸಿಎಂಗೆ ನೆನಪಿಸಿತು.

    ಸೋಲಾರ್ ಯೋಜನೆ: ಹಳ್ಳಿ ನಿವಾಸಿಗಳು, ರೈತರ ತಾಪತ್ರಯ ಹೋಗಲಾಡಿಸಲು ಸೋಲಾರ್ ಯೋಜನೆ ಜಾರಿಯಿಂದ ಸಾಧ್ಯವಿದೆ. ಇದಕ್ಕಾಗಿ ಮುಂದೆ ಬರುವ ರೈತರಿಗೆ ಶೇ.50 ಸಹಾಯಧನ (20,000 ರೂ.) ನೀಡಿ ಉತ್ತೇಜಿಸಬೇಕು. ರೈತರು, ಗ್ರಾಮೀಣರ ಬದುಕು ಹಸನಾಗಲು ಕೆರೆಗಳನ್ನು ಉಳಿಸಲೇಬೇಕಿದೆ. ರಾಜ್ಯದಲ್ಲಿ ಸಣ್ಣ, ದೊಡ್ಡ ಸೇರಿ 50,000 ಕೆರೆಗಳಿವೆ. ಈ ಪೈಕಿ ಪ್ರತಿ ಜಿಲ್ಲೆಯಲ್ಲಿ 100 ಕೆರೆಗಳನ್ನು ಪುನಶ್ಚೇತನಗೊಳಿಸುವ ಯೋಜನೆಯನ್ನು ಜನರ ಸಹಭಾಗಿತ್ವದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಜಾರಿ ಮಾಡಬೇಕು.

    ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸೇರಿ ಬಯಲು ಸೀಮೆಯ ಫಲವತ್ತಾದ ಭೂಪ್ರದೇಶ ಮರುಭೂಮಿ ಆಗುವ ಹಂತ ತಲುಪಿದೆ ಎಂದು ನಾಡಿನ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಈ ಪ್ರದೇಶದಲ್ಲಿ ಹಸಿರು ಹೆಚ್ಚಿಸಿದರೆ ಜಲ-ವನ ಸಮೃದ್ಧಿಯಾಗಲಿದ್ದು, ರೈತರ ಸಮೃದ್ಧಿಯೂ ಸಾಧ್ಯವಾಗಲಿದೆ. ಉದ್ದೇಶಿತ ಗುರಿ ತಲುಪುವುದಕ್ಕೆ ‘ಬಯಲು ಸೀಮೆಯ ವನ ವಿಕಾಸ’ ಹೆಸರಿನಲ್ಲಿ ವಿಶೇಷ ಯೋಜನೆ ರೂಪಿಸಿ ಪ್ರಾಂತದ ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ 50,000 ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದ್ದು, ರೈತರ ಸಹಭಾಗಿತ್ವದಲ್ಲಿ 5,000 ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿಪಡಿಸುವ ಯೋಜನೆ ಬಜೆಟ್​ನಲ್ಲಿ ಸೇರ್ಪಡೆ, ಶಿವಮೊಗ್ಗ ಜಿಲ್ಲೆ ಸಹಿತ ಮಲೆನಾಡು ಪ್ರದೇಶದಲ್ಲಿ ಬಹು ಜನಪ್ರಿಯವಾಗಿದ್ದ ದೇವರಕಾಡು-ಕಾನು ಅಭಿವೃದ್ಧಿ ಯೋಜನೆ ಮತ್ತೆ ಮುಂದುವರಿಸಲು ನಿಯೋಗ ವಿನಂತಿಸಿದೆ.

    ಕರಾವಳಿ ಹಸಿರು ಕವಚ ಯೋಜನೆಯಿಂದ ಸಮುದ್ರ ಕೊರೆತ, ಸುನಾಮಿ ತಡೆಗಟ್ಟಲು ಸಾಧ್ಯವಿದೆ ಎಂದು ಅಧ್ಯಯನ ನಡೆಸಿದ ವಿಜ್ಞಾನಿಗಳು ತಿಳಿಸಿದ್ದು, ಕೇಂದ್ರದ ಪರಿಸರ ಅರಣ್ಯ ಮಂತ್ರಾಲಯ ಪ್ರಶಂಸಿಸಿದೆ. 2010ರಲ್ಲಿ ಆರಂಭಿಸಿದ್ದ ಈ ಯೋಜನೆ ಸ್ಥಗಿತಗೊಂಡಿದ್ದು, ಮೀನುಗಾರರು ಮತ್ತು ರೈತರು ಇಷ್ಟಪಡುವ ಕರಾವಳಿ ವನೀಕರಣದ ಹಸಿರು ಕವಚ ಯೋಜನೆ ಮತ್ತೆ ಜಾರಿಗೆ ತರಬೇಕು. ಆಯುರ್ವೆದ ವನಗಳ ಸಂರಕ್ಷಣೆ ಸಂವರ್ಧನಾ ಯೋಜನೆಯಡಿ ಬಯಲುಸೀಮೆ ಹಾಗೂ ಮಲೆನಾಡಿನ 25 ಸ್ಥಳಗಳ ಒಟ್ಟು 500 ಎಕರೆ ಪ್ರದೇಶದಲ್ಲಿ ಔಷಧ ಸಸ್ಯಗಳನ್ನು ಬೆಳೆಸುವುದು, ರೈತರ ಸಹಭಾಗಿತ್ವದಲ್ಲಿ ಬಿದಿರು ಬಂಗಾರ ಯೋಜನೆ, ಗ್ರಾಮೀಣ ಪ್ರದೇಶದ ಮಹಿಳೆಯರು ಹಿತ್ತಲು ತರಕಾರಿ, ಹಣ್ಣಿನ ಗಿಡ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಲೆಂದು ಸಬ್ಸಿಡಿ ಹಾಗೂ ತರಬೇತಿ ಒದಗಿಸುವ ಹಿನ್ನಲು-ಹೊನ್ನು ಯೋಜನೆ ಬಜೆಟ್​ನಲ್ಲಿ ಸೇರಿಸಲು ನಿಯೋಗ ಕೇಳಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts