More

    ಇಂದಿನಿಂದ ಬಜೆಟ್ ಅಧಿವೇಶನ

    ನವದೆಹಲಿ: ಬುಧವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪ್ರತಿಯೊಂದು ವಿಷಯವನ್ನೂ ರ್ಚಚಿಸಲು ಸರ್ಕಾರ ಸಿದ್ಧವಿದೆ ಎಂದು ವಿಪಕ್ಷ ನಾಯಕರಿಗೆ ಕೇಂದ್ರ ಸರ್ಕಾರ ತಿಳಿಸಿದೆ.

    ದೆಹಲಿಯಲ್ಲಿ ಅಧಿವೇಶನಕ್ಕೆ ಮುನ್ನ ಮಂಗಳವಾರ ಏರ್ಪಡಿಸಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ವಿಪಕ್ಷ ನಾಯಕರೊಂದಿಗೆ ಅತ್ಯಂತ ಸೌಹಾರ್ದ ಮಾತುಕತೆ ನಡೆದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ, ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯ ಖಾತೆ ಸಚಿವ ಅರ್ಜುನ್ ರಾಮ್ ಮೇಘವಾಲ್ ಸರ್ಕಾರವನ್ನು ಪ್ರತಿ ನಿಧಿಸಿದ್ದರು.

    ಹಾಲಿ ಲೋಕಸಭೆ ಅವಧಿಯ ಕೊನೆಯ ಅಧಿವೇಶನ ಇದಾಗಿದ್ದು, ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಮಧ್ಯಂತರ ಬಜೆಟ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ವಿಪಕ್ಷ ಕಾಂಗ್ರೆಸ್​ನ ಕೆ. ಸುರೇಶ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಡಿಎಂಕೆಯ ಟಿಆರ್ ಬಾಲು, ಶಿವಸೇನೆಯ ರಾಹುಲ್ ಶೆವಾಳೆ, ಸಮಾಜವಾದಿ ಪಕ್ಷದ ಎಸ್​ಟಿ ಹಸನ್, ಜೆಡಿಯುನ ರಾಮನಾಥ್ ಠಾಕೂರ್ ಮತ್ತು ಟಿಡಿಪಿಯ ಜಯದೇವ್ ಗಲ್ಲಾ ಸೇರಿ 30 ಪಕ್ಷಗಳ 45 ನಾಯಕರು ಪಾಲ್ಗೊಂಡಿದ್ದರು.

    ಏತನ್ಮಧ್ಯೆ, ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಮೇಲೆ ನಡೆಸಲಾದ ದಾಳಿ ಹಾಗೂ ರಾಜ್ಯ ಸರ್ಕಾರದ ನಿರ್ಬಂಧಗಳ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬದಲಿಗೆ ಅವರ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.

    ಈ ಬಾರಿ ಜನವರಿ 31ರಿಂದ ಫೆಬ್ರವರಿ 9ರ ತನಕ ಅಧಿವೇಶನ ನಡೆಯಲಿದೆ. ಲೋಕಸಭೆ ಚುನಾವಣೆ ಬಳಿಕ ಅಧಿಕಾರಕ್ಕೆ ಬರುವ ಸರ್ಕಾರ ನಂತರದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುಮು ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.

    ಅಮಾನತು ರದ್ದು: ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತು ಗೊಂಡಿದ್ದ 146 ಸಂಸದರು ಇಂದು (ಜ.31) ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರದ ಮನವಿಯ ಮೇರೆಗೆ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿಯವರು ಸಂಸದರ ಅಮಾನತು ರದ್ದು ಪಡಿಸಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

    ಹೆಚ್ಚು ಬಾರಿ ಬಜೆಟ್ ಮಂಡಿಸಿದವರು: ಮೊರಾರ್ಜಿ ದೇಸಾಯಿ (10), ಪಿ.ಚಿದಂಬರಂ (9), ಪ್ರಣವ್ ಮುಖರ್ಜಿ (9), ಯಶವಂತ್ ರಾವ್ ಚವ್ಹಾಣ್ (7), ಸಿಡಿ ದೇಶಮುಖ್ (7), ಯಶವಂತ್ ಸಿನ್ಹಾ (7), ಟಿ.ವಿ.ಕೃಷ್ಣಮಾಚಾರಿ (6), ಡಾ.ಮನಮೋಹನ್ ಸಿಂಗ್ (06).

    ಸ್ವಾರಸ್ಯಕರ ಸಂಗತಿಗಳು

    • ಬಜೆಟ್ ಪುಸ್ತಕ 1995ರವರೆಗೆ ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾಗುತ್ತಿತ್ತು.
    • 1996ರಿಂದ ಹಿಂದಿಯಲ್ಲೂ ಬಜೆಟ್ ಪುಸ್ತಕ ಬರಲಾರಂಭಿಸಿತು.
    • 1999ಕ್ಕೂ ಮುನ್ನ ಕೇಂದ್ರ ಬಜೆಟ್​ನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು.
    • 1999ರಿಂದ ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತಿದೆ.
    • ಬಜೆಟ್ 2016ರವರೆಗೂ ಫೆಬ್ರವರಿ ತಿಂಗಳ ಕೊನೆಯ ದಿನ ಮಂಡನೆಯಾಗುತ್ತಿತ್ತು.
    • 2017ರಿಂದ ಆಯವ್ಯಯವನ್ನು ಫೆಬ್ರವರಿ 1ರಂದು ಮಂಡಿಸಲಾಗುತ್ತಿದೆ.
    • 2016ರವರೆಗೆ ರೈಲ್ವೆ ಬಜೆಟ್​ನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು,
    • 2017ರಲ್ಲಿ ರೈಲ್ವೆ ಬಜೆಟ್​ನ್ನು ಸಾಮಾನ್ಯ ಬಜೆಟ್​ನಲ್ಲಿ ವಿಲೀನಗೊಳಿಸಲಾಯಿತು.
    • 2021ರಲ್ಲಿ ಮೊದಲ ಬಾರಿಗೆ ಪೇಪರ್​ಲೆಸ್ ಬಜೆಟ್ ಮಂಡಿಸಲಾಯಿತು.

    ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮತ್ತು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​ರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಪ್ರಶ್ನಿಸಿರುವುದು ಅಧಿಕಾರದ ದುರುಪಯೋಗಕ್ಕೆ ಉದಾಹರಣೆ.

    | ಪ್ರಮೋದ್ ತಿವಾರಿ ಕಾಂಗ್ರೆಸ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts