More

    ಕುಸಿದ ಆದಾಯ ಸಂಪನ್ಮೂಲ ಸಂಗ್ರಹದ ಸವಾಲು; ಬಜೆಟ್​ ಸರಣಿ ಲೇಖನ

    ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ 2021-22ನೇ ಸಾಲಿನ ಮುಂಗಡಪತ್ರ ಮಂಡಿಸಲಿದ್ದಾರೆ. ಕರೊನಾದಿಂದಾಗಿ ಸಂಕಷ್ಟದಲ್ಲಿರುವ ಆರ್ಥಿಕತೆ, ನಿರೀಕ್ಷೆಯಷ್ಟು ಸಂಗ್ರಹವಾಗದ ತೆರಿಗೆ, ಕೇಂದ್ರದಿಂದ ಅನುದಾನ ಬಾಕಿ ಮುಂತಾದ ಕಾರಣಗಳಿಂದಾಗಿ ಬಜೆಟ್ ಅನ್ನು ಸರಿದೂಗಿಸಲು ಕಸರತ್ತು ನಡೆಸಬೇಕಾದುದು ಅನಿವಾರ್ಯ. ಅವರ ಆದ್ಯತೆ, ಸಿದ್ಧತೆ ಏನಿರಬಹುದು ಎಂಬುದರತ್ತ ಒಂದು ನೋಟ…

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಹಣಕಾಸು ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಬದ್ಧವೆಚ್ಚಗಳು ಸೇರಿದಂತೆ ಒಟ್ಟಾರೆ ಜನವರಿ ಅಂತ್ಯದ ತನಕ ವೆಚ್ಚ ಶೇ.55 ರಿಂದ 58 ರಷ್ಟು ಆಗುತ್ತದೆ. ಬಜೆಟ್ ಪ್ರಕಾರ, 2.09 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕಾಗಿದೆ. ಜನವರಿ ಅಂತ್ಯದ ತನಕ ಸರ್ಕಾರ 1.43 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲಿ 1.19 ಲಕ್ಷ ಕೋಟಿ ರೂ.ಗಳು ವೆಚ್ಚವಾಗಿದೆ. ಮಾರ್ಚ್ ಅಂತ್ಯದೊಳಗೆ 90 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ವೆಚ್ಚ ಮಾಡುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಇದೆ. ಆದ್ದರಿಂದ ಈ ಸಾಲಿನ ವೆಚ್ಚ ಶೇ. 75ರಷ್ಟಕ್ಕೆ ನಿಲ್ಲಬಹುದೆಂದು ಅಂದಾಜು ಮಾಡಲಾಗುತ್ತಿದೆ.

    ಕೇಂದ್ರದಿಂದ ಸಿಗದ ಸ್ಪಂದನೆ: ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲದಿರುವುದು ನಿರೀಕ್ಷಿತ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ. ರಾಜ್ಯದಲ್ಲಿ ಸಂಗ್ರಹಣೆಯಾದ ತೆರಿಗೆಯ ಜತೆಗೆ ಕೇಂದ್ರದ ಪಾಲು ಸಿಕ್ಕಿದ್ದರೆ ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದಾಗಿತ್ತು. ಕೇಂದ್ರದಿಂದ ತೆರಿಗೆಯ ಪಾಲು 28,591 ಕೋಟಿ ರೂ.ಗಳು ಬರಬೇಕಾಗಿತ್ತು. ಆದರೆ ಬಂದಿರುವುದು 14,907 ಕೋಟಿ ರೂ.ಗಳು. ಕೇಂದ್ರದಿಂದ ಸಹಾಯಾನುದಾನ 31,570 ಕೋಟಿ ರೂ.ಗಳಲ್ಲಿ 22,960 ಕೋಟಿ ರೂ.ಗಳು ಬಂದಿವೆ. ಜಿಎಸ್​ಟಿ ಪರಿಹಾರ ಜನವರಿ ಅಂತ್ಯದ ತನಕ 11,200 ಕೋಟಿ ರೂ.ಗಳು ಬಾಕಿ ಉಳಿದಿದೆ. ಆದ್ದರಿಂದ ಬರಬೇಕಾದ ಸುಮಾರು 40 ಸಾವಿರ ಕೋಟಿ ರೂ. ಮೊತ್ತದಲ್ಲಿ ಮಾರ್ಚ್ ಅಂತ್ಯದೊಳಗೆ ಸಿಕ್ಕುವುದೆಷ್ಟು ಎಂಬುದು ಕಾಡುತ್ತಿರುವ ಪ್ರಶ್ನೆಯಾಗಿದೆ.

    ಸಂಪನ್ಮೂಲಕ್ಕೆ ಮಾಡಿರುವ ಪ್ಲ್ಯಾನ್ ಏನು?: ಬಜೆಟ್ ಗಾತ್ರವನ್ನು ಹೆಚ್ಚಿಸಬೇಕೆಂಬುದು ಮುಖ್ಯಮಂತ್ರಿಗಳ ಇರಾದೆ. ಆದರೆ ಹೀಗೆ ಮಾಡಿದರೆ ಸಂಪನ್ಮೂಲವನ್ನು ಹುಡುಕಬೇಕಾಗಿದೆ. ತೆರಿಗೆ ಹೆಚ್ಚಳಕ್ಕೆ ಇರುವುದು ಸೀಮಿತ ಅವಕಾಶ. ಆದ್ದರಿಂದ ಮುಖ್ಯಮಂತ್ರಿ ಬೇರೆಯದ್ದೇ ಪ್ಲಾ್ಯನ್ ಮಾಡಿದ್ದಾರೆಂದು ಮೂಲಗಳು ಹೇಳುತ್ತವೆ. ವರ್ಷದ ಕೊನೆಗೆ ಅಗತ್ಯಬಿದ್ದರೆ ಭೂಮಿ ಗುತ್ತಿಗೆ ಅಥವಾ ಮಾರಾಟದ ಮೂಲಕ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಹೆಚ್ಚುವರಿ ಸಂಗ್ರಹಿಸಬಹುದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಮಿಯನ್ನು ಬಾಡಿಗೆ ನೀಡುವುದು, ತೆರಿಗೆಯೇತರ ಆದಾಯ ಹೆಚ್ಚಳ ಮಾಡುವುದು, ಗಣಿಗಾರಿಕೆಯಿಂದ ಆದಾಯ ವೃದ್ಧಿಸಿಕೊಳ್ಳುವುದು- ಹೀಗೆ ವಿವಿಧ ರೀತಿಯ ಚಿಂತನೆ ನಡೆದಿದೆ.

    ಸಾಲ ಹೆಚ್ಚು ಮಾಡಲಾಗಲ್ಲ: ತೆರಿಗೆ ಸಂಗ್ರಹಣೆ ಗಣನೀಯವಾಗಿ ಇಳಿಕೆಯಾಗಿರುವುದರಿಂದ ರಾಜ್ಯದ ಜಿಡಿಪಿ ಸಹ ಕಡಿಮೆಯಾಗಬಹುದೆಂದು ಅಂದಾಜಿದೆ. ಜಿಡಿಪಿ ಕಡಿಮೆಯಾದರೆ ಒಪ್ಪಂದ ಸಾಲ ಪಡೆಯುವುದು ಕೂಡ ಕಡಿಮೆಯಾಗುತ್ತದೆ. ಆದರೆ ಇದೆಲ್ಲವನ್ನೂ ಈಗಲೇ ಅಂದಾಜು ಮಾಡಲಾಗದು. ಈ ಸಾಲಿಗೆ ರಾಜ್ಯದ ಜಿಡಿಪಿಯನ್ನು 18,05,742 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿತ್ತು. ಆದರೆ ಅದು ಕಡಿಮೆಯಾಗಿದೆ. ಏಕೆಂದರೆ ಕೃಷಿ ಹೊರತುಪಡಿಸಿ ಉತ್ಪಾದನಾ ಹಾಗೂ ಸೇವಾ ಕ್ಷೇತ್ರದ ಕೊಡುಗೆ ಕುಸಿದಿದೆ. ಬಡ್ಡಿ ಪಾವತಿ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

    ಎಷ್ಟಾಗಿದೆ ಸಾಲ?: ರಾಜ್ಯ ಸರ್ಕಾರ ಬಜೆಟ್​ನಲ್ಲಿ 52 ಸಾವಿರ ಕೋಟಿ ರೂ. ಸಾಲ ಮಾಡುವ ಉದ್ದೇಶ ಹೊಂದಿತ್ತು. ಕೇಂದ್ರ ಸರ್ಕಾರ ಹೆಚ್ಚುವರಿ ಸಾಲಕ್ಕೆ ಅವಕಾಶ ನೀಡಿತು. ಜನವರಿ ಅಂತ್ಯದ ತನಕ 68 ಸಾವಿರ ಕೋಟಿ ರೂ.ಗಳ ಸಾಲ ಮಾಡಲಾಗಿದೆ.

    ಎಷ್ಟು ಕಡಿಮೆಯಾಗಿದೆ?: ರಾಜ್ಯದ ತೆರಿಗೆ ಸಂಗ್ರಹ, ತೆರಿಗೆಯೇತರ ಆದಾಯ ಹಾಗೂ ಕೇಂದ್ರದಿಂದ ಬರುವುದು ಸೇರಿದಂತೆ ಒಟ್ಟಾರೆ ಮಾರ್ಚ್ ಅಂತ್ಯದೊಳಗೆ 1,79,919 ಕೋಟಿ ರೂ. ಸಂಪನ್ಮೂಲ ಬರಬೇಕು. ಡಿಸೆಂಬರ್ ಅಂತ್ಯದ ತನಕದ ಅಂಕಿಅಂಶಗಳ ಪ್ರಕಾರ ಬಂದಿರುವುದು 1,19,091 ಕೋಟಿ ರೂ.ಗಳು. ಅಂದರೆ ಇನ್ನೂ 60,828 ಕೋಟಿ ರೂ. ಸಂಗ್ರಹವಾಗಬೇಕು. ಜನವರಿ ತಿಂಗಳಿನಲ್ಲಿ ಬಂದಿರುವ ಆದಾಯ 13 ಸಾವಿರ ಕೋಟಿ ರೂ.ಗಳು ಮಾತ್ರ. ಮಾರ್ಚ್ ಅಂತ್ಯದ ತನಕ ಇದರಲ್ಲಿ 25 ರಿಂದ 30 ಸಾವಿರ ಕೋಟಿ ರೂ.ಗಳು ಸಂಗ್ರಹವಾದರೂ ಇನ್ನೂ 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಕೊರತೆ ಇರುತ್ತದೆ.

    ಅನುದಾನ ಕಟ್: ಎಲ್ಲ ಇಲಾಖೆಗಳಿಗೂ ಅನುದಾನ ಕಡಿಮೆ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆ ಸ್ಪಷ್ಟವಾಗಿ ಹೇಳಿದೆ. ಎಲ್ಲ ಇಲಾಖೆಗಳಿಗೂ ಮುಂದಿನ ಬಜೆಟ್​ನಲ್ಲಿ ಶೇ.20ರಿಂದ 25ರಷ್ಟು ಅನುದಾನ ಕಡಿಮೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ. ಸಿಎಂ ಅವರು ಸಹ ಬಜೆಟ್​ಪೂರ್ವ ಸಭೆಗಳಲ್ಲಿ ಎಲ್ಲ ಸಚಿವರಿಗೂ ಹೆಚ್ಚುವರಿ ಅನುದಾನ ಕೇಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಪತ್ರ ಬರೆದೂ ತಿಳಿಸಿದ್ದಾರೆ.

    ಕೊರತೆ ಸರಿದೂಗಿಸುವ ಕ್ರಮಗಳು

    • ಹಾಲಿ ಜಾರಿಯಲ್ಲಿರುವ ಯೋಜನೆಗಳನ್ನು ಮುಂದುವರಿಸುವ ಅಗತ್ಯದ ಬಗ್ಗೆ ಪರಿಶೀಲನೆ ಮಾಡಬೇಕು. ಯೋಜನೆಗಳ ಮುಂದುವರಿಕೆ ತರ್ಕಬದ್ಧವಾಗಿದ್ದರೆ ವೆಚ್ಚ ಕಡಿಮೆ ಮಾಡಬೇಕು.
    • ಯಾವುದೇ ಯೋಜನೆ 1 ಕೋಟಿ ರೂ.ಗಳಿಗಿಂತ ಕಡಿಮೆ ಇದ್ದರೆ ಅದನ್ನು ಅಗತ್ಯವಾಗಿದ್ದರೆ ಮಾತ್ರ ಬೇರೆ ಯೋಜನೆ ಜತೆ ವಿಲೀನ ಮಾಡಿ ಮುಂದುವರಿಸಬೇಕು.
    • ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಕೇಂದ್ರ ಒಪ್ಪಿರುವ ಮಾದರಿಯಲ್ಲಿಯೇ ಜಾರಿ ಮಾಡಬೇಕು. ಕೇಂದ್ರದ ಹಣದಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗದಿದ್ದರೆ ಮಾತ್ರ ರಾಜ್ಯದ ಹಣ ಬಳಕೆ ಮಾಡಬೇಕು.
    • ಕೇಂದ್ರದ ಯೋಜನೆಗಳ ಮಾದರಿಯ ಯೋಜನೆಗಳು ರಾಜ್ಯದಲ್ಲಿ ಪರ್ಯಾಯವಾಗಿದ್ದರೆ ಅವುಗಳನ್ನು ರದ್ದು ಮಾಡಬೇಕು.
    • ಹಾಲಿ ಜಾರಿಯಲ್ಲಿರುವ ಯೋಜನೆಗಳಲ್ಲಿ ಉಳಿತಾಯವಾಗುವುದಾದರೆ ಮಾತ್ರ ಹೊಸ ಯೋಜನೆ ಘೋಷಣೆ ಮಾಡಬೇಕು. ಅನಗತ್ಯ ಯೋಜನೆಗಳನ್ನು ರದ್ದು ಅಥವಾ ವಿಲೀನದ ಮೂಲಕ ವಿತ್ತೀಯ ಹೊಣೆ ತಗ್ಗಿಸಬೇಕು.
    • ನೌಕರರ ವೇತನ 2021-22ಕ್ಕೆ ಬಜೆಟ್​ನ ಶೇ.30ರಷ್ಟು ಆಗುತ್ತದೆ. ಆ ವೆಚ್ಚ ಕಡಿಮೆ ಮಾಡಲು ಆದ್ಯತೆ ನೀಡಬೇಕು. ಹುದ್ದೆಗಳನ್ನು ತರ್ಕಬದ್ಧಗೊಳಿಸಿ, ಇಲಾಖೆಗಳ ಮರುವಿನ್ಯಾಸಕ್ಕೆ ಆದ್ಯತೆ ನೀಡಬೇಕು. ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿಯೂ ಇದೇ ಮಾದರಿ ಅನುಸರಿಸಬೇಕು.

    ಕೈಬಿಟ್ಟ ಯೋಜನೆಗಳು: ಮುಖ್ಯಮಂತ್ರಿ ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್​ನಲ್ಲಿ 150 ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ 63 ಮುಂದುವರಿದ ಯೋಜನೆಗಳಾದರೆ, ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ 55 ಯೋಜನೆಗಳನ್ನು ಕೈ ಬಿಡಲಾಗಿದೆ. ಇದನ್ನು ಬಜೆಟ್ ಜತೆಗೆ ಸದನದಲ್ಲಿ ಮಂಡಿಸಲಾಗುತ್ತದೆ.

    ಕೈಬಿಟ್ಟಿರುವ ಕೆಲ ಪ್ರಮುಖ ಯೋಜನೆಗಳು

    • ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹುಟ್ಟೂರು ಸಂತೆಶಿವರ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
    • ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂ. ನೀಡುವುದು
    • ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಡಿಜಿಟಲ್ ಮಾಧ್ಯಮ
    • ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ
    • ಸಾರಿಗೆ ನಿಗಮಗಳಿಗೆ 3450 ಬಸ್​ಗಳ ಖರೀದಿ
    • ಬೆಂಗಳೂರಿಗೆ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು, ಒಳಚರಂಡಿಗೆ 2 ವರ್ಷದಲ್ಲಿ 1000 ಕೋಟಿ ರೂ. ವೆಚ್ಚ
    • ಪಾಲಿಮಾರ್ ಲೇಪಿತ ಬಿತ್ತನೆ ಬೀಜಗಳ ಸರಬರಾಜು
    • ಆಹಾರ ಉತ್ಪನ್ನಗಳ ಮೌಲ್ಯವರ್ಧನೆ
    • ಪಶ್ಚಿಮಘಟ್ಟದ ನದಿಗಳಿಗೆ ಕಿಂಡಿ ಅಣೆಕಟ್ಟು
    • ಕೃಷಿ ನಾವೀನ್ಯತಾ ಕೇಂದ್ರ ಸ್ಥಾಪನೆ
    • ಸಂಚಾರಿ ಡಿಜಿಟಲ್ ತಾರಾಲಯ
    • ಕಾಫಿ ಬೆಳೆಗಾರರಿಗೆ 10 ಎಚ್​ಪಿ ತನಕ ವಿದ್ಯುತ್ ಶುಲ್ಕ ಮರುಪಾವತಿ
    • ಶಿಗ್ಗಾಂವಿ, ಕಾರ್ಕಳದಲ್ಲಿ ಜವಳಿ ಪಾರ್ಕ್
    • ಖಾಸಗಿ ಸಹಭಾಗಿತ್ವದಲ್ಲಿ 2500 ಕೋಟಿ ರೂ. ವೆಚ್ಚದಲ್ಲಿ ಬೇಲೆಕೇರಿ ಬಂದರು ಅಭಿವೃದ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts