More

    ಸಮಸ್ಯೆ ಪರಿಹಾರ ಆದ್ಯತೆಯಾಗಲಿ

    ಚಿಕ್ಕಮಗಳೂರು: ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾಗರಿಕರು ನಗರದ ಸಮಸ್ಯೆಗಳನ್ನೇ ಹೆಚ್ಚಾಗಿ ಹೇಳಿಕೊಂಡರು. ರಸ್ತೆ, ನೀರಿನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.

    ಕಸ ವಿಲೇವಾರಿ, ಶೌಚಗೃಹ ಕೊರತೆ, ಸಂತೆ ಮೈದಾನದ ಸ್ವಚ್ಛತೆ, ಯುಜಿಡಿ, ಅಮೃತ್ ಯೋಜನೆ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ರಸ್ತೆಗಳು ಗುಂಡಿಗಳಿಂದ ಕೂಡಿರುವುದನ್ನು ಸಭೆಗೆ ತಿಳಿಸಿದರು. ಕೂಡಲೆ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ನಗರದ ಸುನೀತಾ ಪ್ರಭು ಮಾತನಾಡಿ, ಅಯ್ಯಪ್ಪ ನಗರದ ಪಾರ್ಕ್ ಅನ್ನು ಧರ್ಮಸ್ಥಳ ಯೋಜನೆಯಿಂದ ನಿರ್ವಹಣೆ ಮಾಡಲಾಗುತ್ತಿದ್ದು ಕಾಂಪೌಂಡ್ ವ್ಯವಸ್ಥೆ ಸರಿಯಿಲ್ಲದ ಕಾರಣ ಎತ್ತರಿಸಿ ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.

    ವರ್ತಕರ ಸಂಘದ ನಿರ್ದೇಶಕ ಸತೀಶ್ ಮಾತನಾಡಿ, ವಿಜಯಪುರ ಪಿಸಿಎಲ್ಡಿ, ಡಿಸಿಸಿ ಬ್ಯಾಂಕ್ ಹಿಂಭಾಗದ ರಸ್ತೆಯಲ್ಲಿ ಕಸದ ರಾಶಿ ಕೊಳೆಯುತ್ತಿದೆ. ಸೊಳ್ಳೆ, ನೊಣದ ಕಾಟ ಹೆಚ್ಚಾಗಿದೆ. ಊರಿನವರೆಲ್ಲ ಮೂತ್ರವಿಸರ್ಜನೆಗೆ ಅಲ್ಲಿಗೇ ಬರುತ್ತಾರೆ. ಸಾರ್ವಜನಿಕ ಶೌಚಗೃಹ ನಿರ್ವಿುಸಬೇಕು. ಕಸ ಹಾಕುವವರನ್ನು ಪತ್ತೆಮಾಡಿ ದಂಡ ವಿಧಿಸಬೇಕು ಎಂದು ಒತ್ತಾಯಿಸಿದರು.

    ಜೆಡಿಎಸ್ ಮುಖಂಡರಾದ ಜಯಂತಿ ಮಾತನಾಡಿ, ನಗರದ ಸಂತೆ ಮಾರುಕಟ್ಟೆಯಲ್ಲಿ ಕಸದರಾಶಿ ಬೀಳುತ್ತಿದೆ. ಎಂಜಿ ರಸ್ತೆಯಲ್ಲಿರುವ ಮುಸಾಫಿರ್ ಖಾನ್ ಛತ್ರವನ್ನು ತರಕಾರಿ ಮಾರುಕಟ್ಟೆ ಮಾಡುತ್ತೇವೆಂದು ಭರಸವೆ ನೀಡಿದ್ದೀರಿ. ನಾಗರಿಕರಿಗೆ ಅನುಕೂಲವಾಗುವ ರೀತಿ ಸಂತೆಮಾರುಕಟ್ಟೆ ಸಂಪೂರ್ಣ ಅಭಿವೃದ್ಧಿಪಡಿಸಲು ಬಜೆಟ್​ನಲ್ಲಿ ಹಣ ಮೀಸಲಿಡಿ ಎಂದು ಸಲಹೆ ನೀಡಿದರು.

    ಜನರ ಸಲಹೆ ಸ್ವೀಕರಿಸಿದ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ನಾಗರಿಕರ ಸಲಹೆಗಳನ್ನು ಬಜೆಟ್​ನಲ್ಲಿ ಅಳವಡಿಸಲಾಗುವುದು. ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ 34 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅನುಮೋದನೆ ಹಂತದಲ್ಲಿದೆ ಎಂದರು.

    ಅಮೃತ್ ಮತ್ತು ಯುಜಿಡಿ ಕಾಮಗಾರಿ ಪೂರ್ಣಗೊಂಡು ಮಳೆಗಾಲದೊಳಗೆ ಸಂಪೂರ್ಣ ರಸ್ತೆಗಳು ಅಭಿವೃದ್ಧಿಯಾಗುತ್ತದೆ. ಯುಜಿಡಿ ಕಾಮಗಾರಿಯಲ್ಲಿ ಮನೆ ಸಂಪರ್ಕಗಳನ್ನು ಮಾಲಿಕರೇ ಹಣ ಭರಿಸಿ ಮಾಡಿಕೊಳ್ಳಬೇಕಾಗಿದ್ದು ಗುತ್ತಿಗೆದಾರರಿಗೆ ಹೇಳಿ ಮಾಡಬೇಕಾದರೆ ಕೊಂಚ ಸಮಯಬೇಕಾಗುತ್ತದೆ ಎಂದು ತಿಳಿಸಿದರು. ಸಿಡಿಎ ಅಧ್ಯಕ್ಷ ಸಿ.ಆನಂದ್, ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts